ಸಾರಾಂಶ
ಸಿದ್ದರಾಮಯ್ಯ ಅನುಮತಿ ಕೊಟ್ಟರೆ ನಾನು ಮುಖ್ಯಮಂತ್ರಿ ಆಗುತ್ತೇನೆ ಎಂದು ಮಾಜಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಮೈಸೂರು
ಸಿದ್ದರಾಮಯ್ಯ ಅನುಮತಿ ಕೊಟ್ಟರೆ ನಾನು ಮುಖ್ಯಮಂತ್ರಿ ಆಗುತ್ತೇನೆ ಎಂದು ಮಾಜಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದ್ದಾರೆ. ಅವರ ಈ ಹೇಳಿಕೆ ತೀವ್ರ ಕುತೂಹಲ ಮೂಡಿಸಿದೆ.ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಸಚಿವ ಆಗಿ ಆಗಿ ದಣಿದಿದ್ದೇನೆ. ಇನ್ನೇನಿದ್ದರೂ ಮುಖ್ಯಮಂತ್ರಿಯೇ ಆಗಬೇಕು. ನನಗೆ ಮುಖ್ಯಮಂತ್ರಿ ಆಗುವ ಆಸೆ ಇದೆ, ನನಗಷ್ಟೇ ಅಲ್ಲ, ನಿಮ್ಮಂತ ಜನರಿಗೂ ಆಸೆ ಇದೆ. ಜೀವನದಲ್ಲಿ ಮಹತ್ವಾಕಾಂಕ್ಷೆ ಇರಬೇಕು ಎಂದರು.
ಆದರೆ, ರಾಜ್ಯದಲ್ಲಿ ಸದ್ಯ ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆಯೇ ಇಲ್ಲ. ನಾನು ವಯಸ್ಸಿನಲ್ಲಿ ಸಿದ್ದರಾಮಯ್ಯ ಅವರಿಗಿಂತ ಎರಡು ವರ್ಷ ದೊಡ್ಡವನು. ಸಿಎಂ ಆಗಲು ಹೈಕಮಾಂಡ್ ಅವಕಾಶ ಕೊಟ್ಟರೂ ಸಿದ್ದರಾಮಯ್ಯ ಅನುಮತಿ ಕೊಡಬೇಕು ಎಂದ ಅವರು, ನಾನು ಹಾಗೂ ಸಿದ್ದರಾಮಯ್ಯ ಒಳ್ಳೆಯ ಸ್ನೇಹಿತರು. ರಾಜ್ಯದಲ್ಲಿ ಐದು ವರ್ಷ ಮುಖ್ಯಮಂತ್ರಿ ಆಗಿ ಅವರೇ ಇರುತ್ತಾರೆ ಎಂದರು.ಮುಖ್ಯಮಂತ್ರಿ ಬದಲಾವಣೆ ಚರ್ಚೆ ನಡೆದಿಲ್ಲ. ನನಗೆ ಗೊತ್ತಿಲ್ಲದೆ ಯಾವ ಚರ್ಚೆಯೂ ನಡೆಯಲು ಸಾಧ್ಯವಿಲ್ಲ. ಡಾ.ಜಿ.ಪರಮೇಶ್ವರ್ ಹಾಗೂ ಸತೀಶ್ ಜಾರಕಿಹೊಳಿ ಮನೆಯಲ್ಲಿ ನಡೆದಿರುವುದು ಇಲಾಖೆಗೆ ಸಂಬಂಧಪಟ್ಟ ಸಭೆಯೇ ಹೊರತು ಬೇರಿನ್ನೇನೂ ಅಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.
ಮೌಲ್ಯಾಧಾರಿತ ರಾಜಕಾರಣ ಇಲ್ಲ: ಈಗ ಪ್ರತಿದಿನ ಫೋನ್ ಟ್ಯಾಪಿಂಗ್ ನಡೆಯುತ್ತಿದೆ. ಈಗ ಮೌಲ್ಯಾದರಿತ ರಾಜಕಾರಣ ನಡೆಯುತ್ತಿಲ್ಲ. ಹಿಂದೆ ಮೌಲ್ಯಯುತವಾಗಿ ನಡೆದುಕೊಳ್ಳುತ್ತಿದ್ದರು. ಮುಡಾ ವಿಚಾರದಲ್ಲಿ ಮುಖ್ಯಮಂತ್ರಿ ಏನು ತಪ್ಪು ಮಾಡಿದ್ದಾರೆ? ಸಾವಿರಾರು ಕೋಟಿ ಹಗರಣ ಅಂಥ ಹೇಳುತ್ತಿದ್ದಾರೆ. ಆರೋಪದ ಬಗ್ಗೆ ದಾಖಲೆ ಕೊಡಿ ನಾನೇ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ ಎಂದು ಇದೇ ವೇಳೆ ತಿಳಿಸಿದರು.ಗ್ಯಾರಂಟಿ ಯೋಜನೆಯಿಂದ ಸರ್ಕಾರಕ್ಕೆ ಆರ್ಥಿಕ ಭಾರ ಬಂದಿರೋದು ನಿಜ. ಗ್ಯಾರಂಟಿ ಯೋಜನೆಗೆ 50 ರಿಂದ 60 ಸಾವಿರ ಕೋಟಿ ಬೇಕಾಗಿದೆ. ತೊಂದರೆ ಆಗಿರುವುದನ್ನು ಸರಿದೂಗಿಸುತ್ತಿದ್ದಾರೆ. ಆದರೆ ಬೆಲೆ ಏರಿಕೆಗೆ ಕಾರಣ ಇದಲ್ಲ. ದೇಶದಲ್ಲೇ ಬೆಲೆ ಏರಿಕೆ ಆಗಿದೆ. ಇದರಿಂದ ಜನ ಸಾಮಾನ್ಯರಿಗೆ ತೊಂದರೆ ಆಗುತ್ತಿದೆ ಎಂದರು.
ಫೋನ್ ಟ್ಯಾಪಿಂಗ್ ಆರೋಪ ಕೇಳಿ ಬಂದ ಕೂಡಲೇ ರಾಮಕೃಷ್ಣ ಹೆಗೆಡೆ ರಾಜೀನಾಮೆ ನೀಡಿದ್ದರು. ಈಗ ಆ ಮೌಲ್ಯಾಧಾರಿತ ರಾಜಕಾರಣ ನಡೆಯುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಮುಡಾ ವಿಷಯದಲ್ಲಿ ತಪ್ಪೇ ಮಾಡಿಲ್ಲ ಎಂದು ಸಮರ್ಥಿಸಿಕೊಳ್ಳುತ್ತ, ಮೌಲ್ಯಾಧಾರಿತ ರಾಜಕಾರಣದ ಬಗ್ಗೆ ದೇಶಪಾಂಡೆ ನೀಡಿದ ಹೇಳಿಕೆ ಪರೋಕ್ಷವಾಗಿ ಟಾಂಗ್ ನೀಡಿದಂತಿತ್ತು.