ನಿಮ್ಮ ಸಮಸ್ಯೆ ವೈಯಕ್ತಿಕವಾಗಿ ನನ್ನ ಸಮಸ್ಯೆ ಎಂದೇ ಭಾವಿಸಿರುವೆ. ತಮ್ಮ ಅಹವಾಲನ್ನು ಸರ್ಕಾರದ ಗಮನಕ್ಕೆ ತರುವೆ
ಹೊಸಪೇಟೆ: ಕಾಡು ಸಂರಕ್ಷಣೆಗೆ ಕಟಿಬದ್ಧರಾಗಿರುವ ತಮ್ಮೆಲ್ಲರ ಧ್ವನಿಯಾಗಿ ನಾನು ಬಂದಿರುವೆ. ನಿಮ್ಮ ಸಮಸ್ಯೆ ವೈಯಕ್ತಿಕವಾಗಿ ನನ್ನ ಸಮಸ್ಯೆ ಎಂದೇ ಭಾವಿಸಿರುವೆ. ತಮ್ಮ ಅಹವಾಲನ್ನು ಸರ್ಕಾರದ ಗಮನಕ್ಕೆ ತರುವೆ ಎಂದು ವನ್ಯಜೀವಿ ಸಂರಕ್ಷಣೆ ಅಭಿಯಾನದ ರಾಯಭಾರಿ ಹಾಗೂ ನಟ ಗೋಲ್ಡನ್ ಸ್ಟಾರ್ ಗಣೇಶ್ ಹೇಳಿದರು.
ಏಷ್ಯಾನೆಟ್ ಸುವರ್ಣ ನ್ಯೂಸ್ -ಕನ್ನಡಪ್ರಭ ವತಿಯಿಂದ ದರೋಜಿ ಕರಡಿಧಾಮದ ಸಭಾಂಗಣದಲ್ಲಿ ಬುಧವಾರ ನಡೆದ ವನ್ಯಜೀವಿ ಸಂರಕ್ಷಣಾ ಅಭಿಯಾನದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಜೊತೆಗೆ ನಡೆದ ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನನ್ನ ಪ್ರಕಾರ ಅರಣ್ಯವೂ ಒಂದೇ, ಜನರು ಒಂದೇ. ಹಾಗಾಗಿ ನಾವೆಲ್ಲರೂ ಕಾಡು ಸಂರಕ್ಷಣೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದರು.ಕಾಡು ಉಳಿಸಿದರೆ, ನಮ್ಮನ್ನು ಬೆಳೆಸುತ್ತದೆ. ಹಾಗಾಗಿ ನಾವು ಮೊದಲು ಕಾಡುಪ್ರಾಣಿಗಳ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡೋಣ. ಹೆಚ್ಚುವರಿ ಭತ್ಯೆ ದಿನಕ್ಕೆ ₹30 ನೀಡುವುದರ ಬಗ್ಗೆ ಈಗಾಗಲೇ ಅರಣ್ಯ ಸಚಿವರಾದ ಈಶ್ವರ ಖಂಡ್ರೆ ಅವರ ಬಳಿ ಚರ್ಚಿಸಿರುವೆ. ಅರಣ್ಯ ಇಲಾಖೆ ಸಿಬ್ಬಂದಿ ಆರೋಗ್ಯದ ಬಗ್ಗೆ ಮತ್ತು ಪ್ರಾಣಿಗಳಿಗೆ ಪಶುವೈದ್ಯರ ನೇಮಕಾತಿ ಬಗ್ಗೆಯೂ ಚರ್ಚಿಸಲಾಗಿದೆ ಎಂದರು.
ಎಲ್ಲೆಡೆ ಸಸಿಗಳನ್ನು ನೆಡುವ ಕಾರ್ಯ ಆಗಬೇಕಿದೆ. ನನ್ನ ಮನೆ ಆವರಣದಲ್ಲಿ ನೇರಳೆ ಮರ ಇದೆ. ಅದನ್ನು ತೆಗೆದು ಬಿಟ್ಟು, ದೊಡ್ಡ ಮನೆ ಕಟ್ಟಬಹುದು ಎಂದು ಹಲವರು ಸಲಹೆ ನೀಡಿದರು. ಆದರೆ, ನಾನು ಮಾತ್ರ ಈ ಮರ ಉಳಿಸಿಕೊಂಡಿರುವೆ. ಸಸಿಗಳನ್ನು ಬೆಳೆಸಿದರೆ ನಾವು ಬೆಳೆಯುತ್ತೇವೆ. ಈಗಾಗಲೇ ನನ್ನ ಅಭಿಮಾನಿಗಳಿಗೂ ಈ ಸಂದೇಶ ರವಾನಿಸಿರುವೆ. ಕಾಡಂಚಿನ ಮಕ್ಕಳ ಶಿಕ್ಷಣದ ಬಗ್ಗೆಯೂ ನನಗೆ ಕಾಳಜಿ ಇದೆ ಎಂದರು.ಡಿಎಫ್‌ಒ ಎಚ್.ಅನುಪಮ ಮಾತನಾಡಿ, ಅರಣ್ಯ ಸಿಬ್ಬಂದಿಗೆ ಗನ್ ಕೊಡುವುದರ ಬಗ್ಗೆ ಬಹಳ ಸಲ ಚರ್ಚೆ ಆಗಿದೆ. ಆದರೆ, ಕಾಡು ಪ್ರಾಣಿಗಳ ಸಂರಕ್ಷಣೆ ದೃಷ್ಟಿಕೋನದೊಂದಿಗೆ ಈ ಕಾರ್ಯ ಮಾಡಲಾಗುತ್ತಿಲ್ಲ. ನಾವು ಆಧುನಿಕ ತಂತ್ರಜ್ಞಾನ ಬಳಸಿಕೊಳ್ಳಬೇಕಿದೆ. ಈ ಹಿಂದಿನ ಸಾಂಪ್ರದಾಯಿಕ ಪದ್ಧತಿಯೊಂದಿಗೆ ಆಧುನಿಕತೆಯತ್ತ ಹೆಜ್ಜೆ ಹಾಕಬೇಕಿದೆ. ಕಾಡು ಬೆಳೆಸುವುದರೊಂದಿಗೆ ಕಾಡಂಚಿನ ಜನರೊಂದಿಗೆ ಉತ್ತಮ ಬಾಂಧವ್ಯ ಹೊಂದಬೇಕಿದೆ ಎಂದರು.
ಸುವರ್ಣ ನ್ಯೂಸ್‌ನ ವಿನೋದ ನಾಯ್ಕ ಮಾತನಾಡಿ, ಈ ಹಿಂದೆ ಇಂಡೋನೇಷ್ಯಕ್ಕೆ ಮಾವುತರನ್ನು ತರಬೇತಿಗೆ ಕಳುಹಿಸಲಾಗಿತ್ತು. ಈ ಮಾವುತರು ಬಂದು ಬಳಿಕ ಶಾಲಾ ಮಕ್ಕಳಿಗೆ ಪಾಠ ಮಾಡಿದರು. ಕಾಡಿನ ಬಗ್ಗೆ, ವನ್ಯಜೀವಿಗಳ ಬಗ್ಗೆ ಅರಿವು ಮೂಡಿಸಿದರು. ಕಲಾವಿದೆ ಸುನೀತಾ ಅವರು ₹4 ಕೋಟಿ ಕಾಡುಪ್ರಾಣಿಗಳಿಂದ ದಾಳಿಯಾದ ಜನರಿಗೆ ನೀಡಿದ್ದಾರೆ. ಸಂಜಯ್ ಗುಬ್ಬಿಯವರು ಕೂಡ ಈ ದಿಸೆಯಲ್ಲಿ ಕೆಲಸ ಮಾಡಲು ಮುಂದಾಗಿದ್ದಾರೆ. ನಾವು ಕಾಡ್ಗಿಚ್ಚು ನಂದಿಸುವುದು ಸೇರಿದಂತೆ ಉದ್ಯೋಗಿಗಳ ಸೌಲಭ್ಯ, ಸಿಬ್ಬಂದಿ ಕೊರತೆ ಅನುಭವಿಸುತ್ತಿದ್ದೇವೆ. ಸರ್ಕಾರದ ಮಟ್ಟದಲ್ಲೂ ಈ ಬಗ್ಗೆ ಸುವರ್ಣನ್ಯೂಸ್ ಮತ್ತು ಕನ್ನಡಪ್ರಭ ಸಂಪರ್ಕ ಸೇತುವೆಯಾಗಿ ಕೆಲಸ ಮಾಡುತ್ತಿದೆ ಎಂದರು.ಎಸಿಎಫ್ ಭಾಸ್ಕರ್, ಆರ್‌ಎಫ್‌ಒ ಬಸವರಾಜ, ನಾಗರಾಜ, ಕೌಶಿಕ್ ದಳವಾಯಿ ಸೇರಿದಂತೆ ಸಿಬ್ಬಂದಿಗಳಾದ ಪುಷ್ಪಾಂಜಲಿ, ವೀರೇಶ್, ಚನ್ನಬಸವ ಸೇರಿದಂತೆ ಮತ್ತಿತರರು ಅಭಿಪ್ರಾಯ ವ್ಯಕ್ತಪಡಿಸಿದರು. ಅರಣ್ಯ ಇಲಾಖೆಯ ರವಿಚಂದ್ರ ನಿರ್ವಹಿಸಿದರು.