ರೈತರ ಕೈ, ಕಾಲು ಹಿಡಿದು ₹59 ಕೋಟಿ ಸಂಗ್ರಹಿಸಿ ದುರಸ್ತಿ ಮಾಡಿಸುತ್ತೇನೆ

| Published : Aug 18 2025, 12:00 AM IST

ರೈತರ ಕೈ, ಕಾಲು ಹಿಡಿದು ₹59 ಕೋಟಿ ಸಂಗ್ರಹಿಸಿ ದುರಸ್ತಿ ಮಾಡಿಸುತ್ತೇನೆ
Share this Article
  • FB
  • TW
  • Linkdin
  • Email

ಸಾರಾಂಶ

ಸಚಿವ ಶಿವರಾಜ ತಂಗಡಗಿ ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಎಂದು ಆರೋಪಿಸಿದ್ದಾರೆ. ಅವರಿಗೆ ಸರಿಯಾದ ತಿಳಿವಳಿಕೆ ಇದೆಯೋ ಇಲ್ಲವೋ ನನಗೆ ಗೊತ್ತಿಲ್ಲ

ಕೊಪ್ಪಳ: ಸಚಿವರು ಮತ್ತು ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಶಿವರಾಜ ತಂಗಡಗಿ ಅವರೇ, ನಿಮ್ಮ ಸರ್ಕಾರ ಮತ್ತು ನಿಮಗೂ ಮಾಡಲು ಆಗುವುದಿಲ್ಲ ಎಂದು ಹೇಳಿ, ತುಂಗಭದ್ರಾ ಜಲಾಶಯದ ಎಲ್ಲ ಗೇಟ್ ದುರಸ್ತಿ ಮಾಡುವುದಕ್ಕೆ ಬೇಕಾಗಿರುವ ₹59 ಕೋಟಿ ರೈತರ ಕೈಕಾಲು ಹಿಡಿದು ನಾನು ಸಂಗ್ರಹಿಸಿ ಕೊಡುತ್ತೇನೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಬಸವರಾಜ ದಢೇಸೂಗೂರು ಸವಾಲು ಹಾಕಿದರು.

''''ಕನ್ನಡಪ್ರಭ''''ದೊಂದಿಗೆ ಮಾತನಾಡಿದ ಅವರು, ಸಚಿವ ಶಿವರಾಜ ತಂಗಡಗಿ ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಎಂದು ಆರೋಪಿಸಿದ್ದಾರೆ. ಅವರಿಗೆ ಸರಿಯಾದ ತಿಳಿವಳಿಕೆ ಇದೆಯೋ ಇಲ್ಲವೋ ನನಗೆ ಗೊತ್ತಿಲ್ಲ. ಆದರೆ, ಅವರು ಮಾಡಿರುವ ಆರೋಪ ಅಚ್ಚರಿ ಮೂಡಿಸಿದೆ. ಈಗ ನೀವು ಸರ್ಕಾರ ಮತ್ತು ನೀರಾವರಿ ಸಚಿವರನ್ನು ಬಿಟ್ಟು ಬಿಡಿ, ನೀವು ₹30 ಕೋಟಿ ಹಾಕಿ, ನಾನು ₹ 30 ಕೋಟಿ ಹಾಕುತ್ತೇನೆ. ಇಬ್ಬರು ಸೇರಿ ಮಾಡೋಣ. ನಿಮ್ಮ ಸರ್ಕಾರ ಮತ್ತು ನಿಮಗೂ ಆಗಲ್ಲ ಎಂದರೆ ₹59 ಕೋಟಿ ಕೊಪ್ಪಳ, ಬಳ್ಳಾರಿ, ರಾಯಚೂರು, ವಿಜಯನಗರ ಜಿಲ್ಲೆಯ ರೈತರ ಕೈಕಾಲು ಹಿಡಿದು ಸಂಗ್ರಹ ಮಾಡಿ ಜೋಡಿಸಿ ಕೊಡುತ್ತೇನೆ. ಇದಕ್ಕಾದರೂ ನೀವು ಸಿದ್ಧರಾಗಿ ಎಂದು ಸವಾಲು ಹಾಕಿದ್ದಾರೆ.

ಕೇಂದ್ರ ಸರ್ಕಾರವೇನು ಮಾಡಬೇಕು? ಇದು ಆಂಧ್ರ, ತೆಲಂಗಾಣ ಹಾಗೂ ಕರ್ನಾಟಕ ರಾಜ್ಯದ ಹೊಣೆಯಾಗಿದೆ. ಈಗಾಗಲೇ ತುಂಗಭದ್ರಾ ಬೋರ್ಡ್ ಕ್ರಸ್ಟ್‌ಗೇಟ್‌ ದುರಸ್ತಿಗೆ ಸಮ್ಮತಿ ನೀಡಿ ಟೆಂಡರ್ ಸಹ ಕರೆದಿದೆ. ಅದ್ಯಾವುದರ ಪರಿವೇ ನಿಮಗೆ ಇಲ್ಲವೇ? ರಾಜ್ಯ ಸರ್ಕಾರ ವಿಳಂಬ ಮಾಡಿದ್ದರಿಂದ ಸಮಸ್ಯೆಯಾಗಿದೆಯೇ ಹೊರತು ಬೋರ್ಡ್‌ನಿಂದ ಅಲ್ಲ. ನೀರಾವರಿ ಸಲಹಾ ಸಮಿತಿ ಅಧ್ಯಕ್ಷರಾಗಿರುವ ನೀವು, ಆಂಧ್ರ, ತೆಲಂಗಾಣ ರಾಜ್ಯ ಸರ್ಕಾರಗಳೊಂದಿಗೆ ಮಾತನಾಡಿ ಬೋರ್ಡ್‌ ಮೇಲೆ ಒತ್ತಡ ಹಾಕಬೇಕಿತ್ತು. ಆದನ್ನು ಮಾಡಿಯೇ ಇಲ್ಲ. 19ನೇ ಕ್ರಸ್ಟ್‌ಗೇಟ್ ಮುರಿದು ಹೋಗಿದ್ದರಿಂದಲೇ ಅಪಾರ ಪ್ರಮಾಣದ ನೀರು ಪೋಲಾಗಿದೆ. ಈ ವರ್ಷ ನೀರು ಸಂಗ್ರಹವೂ ಕುಸಿದಿದೆ. ಇದರಿಂದ ಆಂಧ್ರ ಮತ್ತು ತೆಲಂಗಾಣಕ್ಕೆ ಹೆಚ್ಚು ಅನುಕೂಲವಾಗಿದೆ. ಹೀಗಾಗಿ, ಅವರು ಅಷ್ಟಾಗಿ ಆಸಕ್ತಿ ತೋರಿಸುತ್ತಿಲ್ಲ. ಇದನ್ನು ನೀವು ಅರ್ಥ ಮಾಡಿಕೊಂಡು ಮನವೊಲಿಸುವ ಕಾರ್ಯ ಮಾಡಬೇಕಾಗಿತ್ತು. ಆದರೆ, ಅದ್ಯಾವುದನ್ನು ಮಾಡದೆ ರೈತರೊಂದಿಗೆ ಚೆಲ್ಲಾಟವಾಡಿದ್ದೀರಿ, ಇದ್ಯಾವ ನ್ಯಾಯ ಎಂದು ಪ್ರಶ್ನೆ ಮಾಡಿದ್ದಾರೆ.

ರೈತರ ಕಣ್ಣೀರು, ರಕ್ತ ಕಣ್ಣೀರು ಆಗುವ ಮುನ್ನ ತುಂಗಭದ್ರಾ ಕ್ರಸ್ಟ್‌ಗೇಟ್ ದುರಸ್ತಿ ಮಾಡಿಸಬೇಕು. ಇಲ್ಲದಿದ್ದರೆ ಇದುವೆ ನಿನಗೆ ಕೊನೆಯ ಕಣ್ಣೀರು ಆಗಲಿದೆ. ನಾಲ್ಕು ಜಿಲ್ಲೆಯ ರೈತರ ಭವಿಷ್ಯ ತುಂಗಭದ್ರಾ ಜಲಾಶಯದ ಮೇಲೆ ನಿಂತಿದೆ. ಯೂರಿಯಾ ಸಮಸ್ಯೆಯಾದಾಗ ಅಧಿಕಾರಿಯ ಮೂಲಕ ಕ್ಯಾನ್ಸರ್ ಬರುತ್ತದೆ ಎಂದು ಹೇಳಿಸಿದಿರಿ. ಈಗ ಗವಿಸಿದ್ದಪ್ಪ ಕೊಲೆ ಪ್ರಕರಣ ಮುಚ್ಚಿ ಹಾಕಲು ತುಂಗಭದ್ರಾ ಜಲಾಶಯದ ಕ್ರಸ್ಟ್‌ಗೇಟ್‌ಗಳು ಬೆಂಡಾಗಿವೆ ಎಂದು ಹೇಳಿದ್ದೀರಲ್ಲ ಎಂದು ಕಿಡಿಕಾರಿದ್ದಾರೆ.

ರೈತರ ಭಾವನೆಯೊಂದಿಗೆ ಆಟವಾಡಬೇಡಿ. ಕೂಡಲೇ ತುಂಗಭದ್ರಾ ಕ್ರಸ್ಟ್‌ಗೇಟ್ ದುರಸ್ತಿ ಮಾಡಿಸುವ ಕೆಲಸ ಮಾಡಿ, ಇಲ್ಲ ರಾಜೀನಾಮೆ ಕೊಟ್ಟು ಹೋಗಿ ಎಂದು ಸವಾಲು ಹಾಕಿದ್ದಾರೆ.

ಜನರು ಅಧಿಕಾರ ಕೊಟ್ಟಿದ್ದಾರೆ. ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೇಳುವುದಿಲ್ಲ. ಆದರೆ, ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೋಗಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.