ಸಾರಾಂಶ
ಹಾವೇರಿ: ದೇವರ ಹೆಸರಿನಲ್ಲಿ ಹಿಂದೂ-ಮುಸ್ಲಿಮರ ಮಧ್ಯೆ ಕಂದಕ ಸೃಷ್ಟಿ ಆಗುತ್ತಿರುವ ಸಮಕಾಲೀನ ಸಂದರ್ಭದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರು ದೇವಿ ಮೂರ್ತಿ ದಾನ ನೀಡಿರುವುದು ಭಾವೈಕ್ಯತೆಗೆ ಸಾಕ್ಷಿ ಎಂದು ವಿಧಾಸಭೆ ಉಪಸಭಾಧ್ಯಕ್ಷ, ಶಾಸಕ ರುದ್ರಪ್ಪ ಲಮಾಣಿ ಹೇಳಿದರು. ತಾಲೂಕಿನ ಗಣಜೂರ ಗ್ರಾಮದಲ್ಲಿ ಶ್ರೀ ಹೊನ್ನಮ್ಮ ದೇವಿ ದೇವಸ್ಥಾನ ಸೇವಾ ಸಮಿತಿ ಆಯೋಜಿಸಿದ್ದ ಶ್ರೀ ಹೊನ್ನಮ್ಮದೇವಿ ದೇವಸ್ಥಾನ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಮನುಷ್ಯನ ನೆಮ್ಮದಿಗೆ ದೇವರು ಸ್ಪಂದಿಸುವನು ಎಂಬ ನಂಬಿಕೆ ನಮ್ಮ ಜನರಲ್ಲಿದೆ. ಬಸವಣ್ಣನವರು ದೇಹವೇ ದೇಗುಲವೆಂದು ಸಾರಿ ನಮ್ಮೊಳಗೆ ದೇವರಿದ್ದಾನೆ ಎಂದರು. ಇನ್ನೂ ಕೆಲವರು ತಮ್ಮ ಭಾವನೆಗಳ ಅನುಸಾರ ದೇವರನ್ನು ನಂಬಿರುವರು. ನಂಬಿಕೆಯೇ ದೇವರು ಎಂಬುದು ನನ್ನ ಭಾವನೆ. ಗ್ರಾಮಸ್ಥರೆಲ್ಲರೂ ಸೇರಿ ಹೊನ್ನಮ್ಮ ದೇವಿಗೆ ದೇವಸ್ಥಾನ ನಿರ್ಮಿಸುತ್ತಿರುವುದು ಶ್ಲಾಘನೀಯ. ಸರ್ಕಾರದ ಮಟ್ಟದಲ್ಲಿ ಲಭ್ಯವಿರುವ ಅನುದಾನ ಒದಗಿಸಿ ದೇಗುಲ ನಿರ್ಮಾಣಕ್ಕೆ ಕೈ ಜೋಡಿಸುವೆ ಎಂದರು. ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್ ಗಾಜೀಗೌಡ್ರ ಮಾತನಾಡಿ, ದೇವಸ್ಥಾನಗಳು ನಮ್ಮ ಪರಂಪರೆಯ ಭಾಗಗಳು. ದೇವರ ಸನ್ನಿಧಿಯನ್ನು ಸ್ವಚ್ಛತೆಯಿಂದ ಕಾಪಾಡುವ ಜವಾಬ್ದಾರಿ ಗ್ರಾಮಸ್ಥರದ್ದು ಎಂದರು. ಕೆಸಿಸಿ ಬ್ಯಾಂಕ್ ನಿರ್ದೇಶಕ ಕೊಟ್ರೇಶಪ್ಪ ಬಸೇಗಣ್ಣಿ ಮಾತನಾಡಿ, ಗ್ರಾಮದ ಅಭಿವೃದ್ಧಿಗೆ ಪಕ್ಷಾತೀತವಾಗಿ ಶ್ರಮಿಸುವ ಗಣಜೂರ ಗ್ರಾಮಸ್ಥರ ನಡೆ ಅನುಕರಣೀಯ. ದೇವಸ್ಥಾನದ ಅಭಿವೃದ್ಧಿಗೆ ವೈಯಕ್ತಿಕವಾಗಿ ನಾನೂ ದೇಣಿಗೆ ನೀಡುವೆ ಎಂದರು.ಬಿಜೆಪಿ ಮುಖಂಡ ಗವಿಸಿದ್ದಪ್ಪ ದ್ಯಾಮಣ್ಣನವರ ಮಾತನಾಡಿ, ಸಾಮರಸ್ಯ ಇಂದಿನ ಅಗತ್ಯ. ನಾವೆಲ್ಲರೂ ಜಾತ್ಯತೀತವಾಗಿ ಬದುಕಬೇಕು. ಪಕ್ಷಾತೀತವಾಗಿ ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ದೇವರ ಹೆಸರಿನಲ್ಲಿ ನಾವು ವಿರೋಧ ಭಾವನೆ ಹೊಂದಬಾರದು ಎಂದರು.ಕಾರ್ಯಕ್ರಮದಲ್ಲಿ ಡಾ.ಬಸವರಾಜ ವೀರಾಪುರ, ಮುಖಂಡರಾದ ಪ್ರಭುಗೌಡ ಬಿಷ್ಟನಗೌಡ್ರ, ಎಂ.ಎಂ. ಖಾಜಿ, ರಮೇಶ ಆನವಟ್ಟಿ, ಗ್ರಾಮದ ಚನ್ನಬಸಪ್ಪ ಕಾಗಿನೆಲೆ, ಆನಂದ ಉಕ್ಕುಂದ, ಕೃಷ್ಣಪ್ಪ ಸಾಲಿ, ಲಕ್ಷ್ಮಿ ಕುರುಬರ, ಸಾವಂತಪ್ಪ ಸಾಲಿ, ಹೊನ್ನಪ್ಪ ತಳವಾರ ಇದ್ದರು. ನಾಗಪ್ಪ ಬಂಕಾಪುರ ಕಾರ್ಯಕ್ರಮ ನಿರ್ವಹಿಸಿದರು.ನಾನು ಗಣಜೂರಿನ ಮೊಮ್ಮಗ. ದೇವರು ನನಗೆ ಒಂದಿಷ್ಟು ಆರ್ಥಿಕ ಶಕ್ತಿ ನೀಡಿರುವನು. ಅದಕ್ಕಾಗಿ ಶ್ರೀ ಹೊನ್ನಮ್ಮ ದೇವಿ ಮೂರ್ತಿಯನ್ನು ನಾನೇ ಮಾಡಿಸಿ ಕೊಡುವೆ. ಇದರಲ್ಲಿ ಯಾವುದೇ ಪ್ರತಿಷ್ಠೆ ಇಲ್ಲ ಎಂದು ದೇವಿ ಮೂರ್ತಿಯ ದಾನಿ ಸಣ್ಣಮೌಲಾಸಾಬ ಗಣಜೂರ ಹೇಳಿದರು.