ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಭೂಮಿ ಕಳೆದುಕೊಂಡಿರುವ ತಾಲೂಕಿನ ಹೊಸಹೊಳಲು ಗ್ರಾಮದ ದಲಿತರಿಗೆ ನ್ಯಾಯ ಕೊಡಿಸಲು ಮುಕ್ತ, ನ್ಯಾಯ ಸಮ್ಮತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಪಾಂಡವಪುರ ಉಪವಿಭಾಗಾಧಿಕಾರಿ ಕೆ.ಆರ್.ಶ್ರೀನಿವಾಸ್ ಹೇಳಿದರು.ಪಟ್ಟಣದ ಪುರಸಭೆ ವ್ಯಾಪ್ತಿಯ ಹೊಸಹೊಳಲು ಸರ್ವೇ ನಂ 141ರ ಪೈಕಿ 1 ಎಕರೆ 31 ಗುಂಟೆ ಕುಳುವಾಡಿಕೆ ಭೂಮಿ ಕಳೆದುಕೊಂಡ ದಲಿತ ಸಮುದಾಯದ ಕುಟುಂಬಸ್ಥರೊಂದಿಗೆ ಸಮಾಲೋಚನೆ ನಡೆಸಿ ಸ್ಥಳ ಪರಿಶೀಲನೆ ಮಾಡಿ ಮಾತನಾಡಿದರು.
1980ರ ಅವಧಿಯಲ್ಲಿ ತಾಲೂಕು ಬೋರ್ಡ್ ಅಸ್ಥಿತ್ವದಲ್ಲಿದ್ದಾಗ ದಲಿತರು ಉಳುಮೆ ಮಾಡುತ್ತಿದ್ದ ಭೂಮಿಯನ್ನು ಭೂಸ್ವಾಧೀನ ಪಡಿಸಿಕೊಂಡು 33 ನಿವೇಶನಗಳನ್ನಾಗಿ ವಿಂಗಡಿಸಿ ಹಕ್ಕುಪತ್ರ ನೀಡಿ ನಿವೇಶನಗಳನ್ನು ಪುರಸಭೆಗೆ ಹಸ್ತಾಂತರ ಮಾಡಲಾಗಿದೆ ಎಂದರು.ಆದರೆ, ಭೂಮಿ ಕಳೆದುಕೊಂಡಿರುವ ದಲಿತ ಬಂಧುಗಳಿಗೆ ಭೂ ಪರಿಹಾರದ ಹಣವನ್ನು ಈವರೆಗೂ ನೀಡಿಲ್ಲ. ಭೂ ಸ್ವಾಧೀನ ಪಡಿಸಿಕೊಂಡಿರುವ ಬಗ್ಗೆ ಕಂದಾಯ ಇಲಾಖೆ, ತಾಲೂಕು ಪಂಚಾಯ್ತಿ ಹಾಗೂ ಪುರಸಭೆಯ ದಾಖಲೆಗಳಲ್ಲಿ, ಭೂ-ಸ್ವಾಧೀನ ಪಡಿಸಿಕೊಂಡಿದ್ದ ಭೂಮಿಯನ್ನು ಮತ್ತೆ ದಲಿತ ಬಂಧುಗಳಿಗೆ ರೀಗ್ರ್ಯಾಂಟ್ ಮಾಡಿರುವ ಬಗ್ಗೆ ದಾಖಲೆಗಳನ್ನು ದಲಿತರಿಗೆ ಹಾಜರುಪಡಿಸಿರುವುದರಿಂದ ಸತ್ಯಾಸತ್ಯತೆಯನ್ನು ಪತ್ತೆ ಹಚ್ಚಿ ತೊಂದರೆಗೊಳಗಾಗಿರುವ ದಲಿತರಿಗೆ ಯಾವುದೇ ಅನ್ಯಾಯವಾಗದಂತೆ ಸಾಮಾಜಿಕ ನ್ಯಾಯ ಸೇರಿದಂತೆ ಪರಿಹಾರ ದೊರಕಿಸಿಕೊಡುವ ನಿಟ್ಟಿನಲ್ಲಿ ನಾನು ಬದ್ಧತೆಯಿಂದ ಕೆಲಸ ಮಾಡುತ್ತೇನೆ ಎಂದರು.
ಭೂಮಿ ಕಳೆದುಕೊಂಡಿರುವ ದಲಿತ ಬಂಧುಗಳು ಜಿಲ್ಲಾಧಿಕಾರಿಗಳ ನ್ಯಾಯಾಲಯ ಹಾಗೂ ರಾಜ್ಯ ಅನುಸೂಚಿತ ಜಾತಿ ಹಾಗೂ ಬುಡಕಟ್ಟು ಆಯೋಗಕ್ಕೆ ಮನವಿ ಸಲ್ಲಿಸಿ ಭೂಮಿಯ ವಿವಾದವು ಇನ್ನೂ ಬಗೆಹರಿಯದಿದ್ದರೂ ಪುರಸಭೆಯ ಅಧಿಕಾರಿಗಳ ಲಂಚದ ಹಣವನ್ನು ತಿಂದು ಖಾತೆ ಮತ್ತು ಇ-ಸ್ವತ್ತು ಮಾಡಿಕೊಟ್ಟಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದರು.ಪುರಸಭೆಯಲ್ಲಿ ಹಂಗಾಮಿ ನೌಕರಳಾಗಿ ಕೆಲಸ ಮಾಡುತ್ತಿರುವ ಸುಕನ್ಯಾ ಅವರ ಪತಿ ರಾಮಚಂದ್ರ ಅವರಿಗೆ ಅಸಸ್‌ಮೆಂಟ್ ನಂ.2584 ನಿವೇಶನವನ್ನು 15 #20 ಹಾಗೂ 30#45 ಅಳತೆಗೆ ಒಂದೇ ನಿವೇಶನವನ್ನು ಮುಖ್ಯಾಧಿಕಾರಿಗಳ ಗಮನಕ್ಕೆ ತರದೇ ಎರಡೆರಡು ಬಾರಿ ಖಾತೆ ಮಾಡಿ ಗೋಲ್‌ಮಾಲ್ ನಡೆಸಲಾಗಿದೆ ಎಂದರು.
ಖಾತೆ ಮಾಡಿರುವುದರಲ್ಲಿ ಲೋಪ ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಖಾತೆ ರದ್ದುಪಡಿಸಿ ಯತಾಸ್ಥಿತಿ ಕಾಪಾಡುವ ಬಗ್ಗೆ ಜಿಲ್ಲಾಧಿಕಾರಿಗಳಿಗೆ ವರದಿ ನೀಡುತ್ತೇನೆ. ತಾಲೂಕು ಬೋರ್ಡ್ ಅಲ್ಲದೇ, ಪುರಸಭೆಯಿಂದಲೂ ಹತ್ತಾರು ಜನರಿಗೆ ಹಕ್ಕು-ಪತ್ರಗಳನ್ನು ವಿತರಿಸಿರುವ ಬಗ್ಗೆ ವರದಿ ನೀಡಿದ್ದಾರೆ ಎಂದರು.ಯಾವ ಆಧಾರದ ಮೇಲೆ ದಲಿತರ ಭೂಮಿ ನಿವೇಶನವನ್ನಾಗಿ ಬದಲಾಯಿಸಿ ವಿತರಿಸಲಾಗಿದೆ ಎಂಬ ಮಾಹಿತಿ ಸಂಗ್ರಹಿಸಿ ನ್ಯಾಯ ಒದಗಿಸುವುದಾಗಿ ಭೂಮಿ ಕಳೆದುಕೊಂಡಿರುವ ರವಿ, ಸ್ವಾಮಿ, ವಿಷ್ಣು, ನಾಗ, ಶ್ರೀನಿವಾಸ್, ರಮೇಶ್, ಪ್ರಮೋದ್, ಸಣ್ಣ ಮುತ್ತಮ್ಮ, ದ್ಯಾವಯ್ಯ, ಜಯಮ್ಮ ಅವರಿಗೆ ಅಭಯ ನೀಡಿದರು.
ಹೊಸಹೊಳಲು ಕುಳುವಾಡಿಕೆ ಭೂಮಿ ಸ್ಥಳ ಪರಿಶೀಲನೆ ಸಮಯದಲ್ಲಿ ತಹಸೀಲ್ದಾರ್ ಅಶೋಕ್, ತಾಪಂ ಇಒ ಸುಷ್ಮಾ, ಪುರಸಭೆ ಮುಖ್ಯಾಧಿಕಾರಿ ರಾಜು ಕಾಳಪ್ಪ ವಠಾರ, ಕಂದಾಯಾಧಿಕಾರಿ ರವಿಕುಮಾರ್, ಕಸಬಾ ಹೋಬಳಿಯ ರಾಜಶ್ವ ನಿರೀಕ್ಷಕ ಜ್ಞಾನೇಶ್, ಗ್ರಾಮ ಆಡಳಿತ ಅಧಿಕಾರಿ ಜಗದೀಶ್, ಹಾಗೂ ಪುರಸಭೆಯ ಸಿಬ್ಬಂದಿ ಉಪಸ್ಥಿತರಿದ್ದರು.