ಸಾರಾಂಶ
ನನ್ನ ವಿರುದ್ಧ ಸೋತ ಅಭ್ಯರ್ಥಿ ಮರು ಎಣಿಕೆಗೆ ನ್ಯಾಯಾಲಯದ ಮೊರೆ ಹೋಗಿದ್ದರು, ನ್ಯಾಯಾಲಯದ ತೀರ್ಪು ಬಂದಿದೆ. ನಾನು ಸಹ ಹಲವು ಬಾರಿ ಹೇಳಿದ್ದೆ, ಮರುಎಣಿಕೆಗೆ ನಾನು ಬದ್ಧ ಎಂದು, ಆದರೆ, ಚುನಾವಣೆ ಹಾಗೂ ಶಾಸಕ ಸ್ಥಾನ ಅಸಿಂಧು ಗೊಳಿಸಿದ ಹಿನ್ನೆಲೆ ನಾನು ನ್ಯಾಯಾಲಯಕ್ಕೆ ಅಪೀಲು ಹೋಗಬೇಕಿದೆ.
ಕನ್ನಡಪ್ರಭ ವಾರ್ತೆ ಕೋಲಾರ
ಮಾಲೂರು ವಿಧಾನಸಭೆ ಮರು ಎಣಿಕೆಗೆ ಹೈ ಕೋರ್ಟ್ ಆದೇಶ ನೀಡಿದ್ದು, ಎಣಿಕೆಯಲ್ಲಿ ಮಂಜುನಾಥ್ ಗೌಡ ಗೆದ್ದರೆ ರಾಜಕೀಯ ಬಿಡುವೆ ಎಂದು ಶಾಸಕ ಕೆ.ವೈ.ನಂಜೇಗೌಡ ಸವಾಲು ಹಾಕಿದರು, ಮರು ಎಣಿಕೆ ಆಗಲಿ, ಆದರೆ ಶಾಸಕ ಸ್ಥಾನ ಅಸಿಂಧು ಆದೇಶ ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗುವೆ ಎಂದು ಹೇಳಿದರು.ತಾಲೂಕಿನ ರಾಮಸಂದ್ರ ಗಡಿಯಲ್ಲಿ ನಂದಿನಿ ಪಾರ್ಲರ್ ಉದ್ಘಾಟನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಮಾಜಿ ಶಾಸಕ ಮಂಜುನಾಥಗೌಡ ಹಗಲು ಕನಸು ಕಾಣುತ್ತಿದ್ದಾರೆ, ಅವರ ಪರವಾಗಿ ಕೆಲ ಹುಚ್ಚರಿದ್ದಾರೆ, ಅವರು ಕೋರ್ಟ್ ಆದೇಶದಿಂದ ಪಟಾಕಿ ಹೊಡೆದು ಸಿಹಿ ಹಂಚಿದ್ದಾರೆ ಎಂದು ಹೇಳಿದರು.
ಮಂಜುನಾಥಗೌಡರೇನು ಶಾಸಕರಾಗಿದ್ದಾರಾ? ಇಲ್ಲವಲ್ಲ, ಯಾರೋ ಕೆಲವರು ಸಂಭ್ರಮಾಚರಣೆ ಮಾಡಿದ್ದಾರೆ, ಅವರೆಲ್ಲಾ ಹುಚ್ಚರು, ನಾನು ಕಾನೂನು ಹೋರಾಟ ಮಾಡುವುದಾಗಿ ತಿಳಿಸಿದರು.ನನ್ನ ವಿರುದ್ಧ ಸೋತ ಅಭ್ಯರ್ಥಿ ಮರು ಎಣಿಕೆಗೆ ನ್ಯಾಯಾಲಯದ ಮೊರೆ ಹೋಗಿದ್ದರು, ನ್ಯಾಯಾಲಯದ ತೀರ್ಪು ಬಂದಿದೆ. ನಾನು ಸಹ ಹಲವು ಬಾರಿ ಹೇಳಿದ್ದೆ, ಮರುಎಣಿಕೆಗೆ ನಾನು ಬದ್ಧ ಎಂದು, ಆದರೆ, ಚುನಾವಣೆ ಹಾಗೂ ಶಾಸಕ ಸ್ಥಾನ ಅಸಿಂಧು ಗೊಳಿಸಿದ ಹಿನ್ನೆಲೆ ನಾನು ನ್ಯಾಯಾಲಯಕ್ಕೆ ಅಪೀಲು ಹೋಗಬೇಕಿದೆ ಎಂದರು.
ಮತಕಳ್ಳತನವಾಗಿದೆ ಎಂಬ ಮಂಜುನಾಥ ಗೌಡ ಆರೋಪಕ್ಕೆ ತಿರುಗೇಟು ನೀಡಿದ ಅವರು, ಆಗ ನಿಮ್ಮದೇ ಸರ್ಕಾರ, ನಿಮ್ಮದೇ ಮಂತ್ರಿ, ಅಧಿಕಾರಿಗಳು, ನೀವೇ ಕಾವಲಿದ್ದು ಮತ ಎಣಿಕೆ ಮಾಡಿದ್ದು, ನೀವೇ ವಿವಿ ಪ್ಯಾಟ್ ಕೌಂಟಿಂಗ್ ಮಾಡಿಸಿದ್ದು ಎಂದರು.ಮಂಜುನಾಥಗೌಡರಿಗೆ ಹುಚ್ಚು ಹಿಡಿದಿದೆ, ಆಕಸ್ಮಿಕವಾಗಿ ಇವರಿಗೆ ಮಾಲೂರಲ್ಲಿ ಅವಕಾಶ ಸಿಕ್ಕಿತ್ತು, ಆದರೆ ಅವರು ಜೀವಮಾನದಲ್ಲಿ ಹೊಸಕೋಟೆಯಲ್ಲಿ ಶಾಸಕರಾಗಲು ಸಾಧ್ಯವಿಲ್ಲ ಎಂದು ಸವಾಲೆಸೆದರು.
ನ್ಯಾಯಾಲಯ ನನ್ನ ಶಾಸಕತ್ವ ಅಸಿಂಧು ಮಾಡಿರುವುದು ಸರಿಯಲ್ಲ, ಮರು ಎಣಿಕೆ ಆದರೂ ನೂರಕ್ಕೆ ನೂರು ನಾನು ಗೆಲ್ಲುವೆ ಎಂದರು.