ನೀರು ತರುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ

| Published : Feb 10 2025, 01:47 AM IST

ಸಾರಾಂಶ

ಹಿರಿಯೂರು ತಾಲೂಕಿನ ಜೆಜಿ ಹಳ್ಳಿ ಹೋಬಳಿಯ ರೈತರೊಂದಿಗೆ ಸಚಿವ ಡಿ.ಸುಧಾಕರ್ ಸಭೆ ನಡೆಸಿದರು.

ಜೆಜಿ ಹಳ್ಳಿ ಹೋಬಳಿ ರೈತರೊಂದಿಗೆ ಸಚಿವ ಡಿ. ಸುಧಾಕರ್ ಸಭೆಕನ್ನಡಪ್ರಭ ವಾರ್ತೆ ಹಿರಿಯೂರು

ನಗರದ ಪ್ರವಾಸಿ ಮಂದಿರದಲ್ಲಿ ಜಿಲ್ಲಾಉಸ್ತುವಾರಿ ಸಚಿವ ಡಿ.ಸುಧಾಕರ್‌ ಜವನಗೊಂಡನಹಳ್ಳಿ ಹೋಬಳಿಯ ರೈತರ ಸಭೆ ನಡೆಸಿದರು.

ಸಭೆಯಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಗಾಯಿತ್ರಿ ಜಲಾಶಯ ಮತ್ತು 13 ಕೆರೆಗಳಿಗೆ ವಾಣಿವಿಲಾಸ ಸಾಗರದಿಂದ ನೀರು ಹರಿಸಬೇಕೆಂದು ಜವನಗೊಂಡನಹಳ್ಳಿ ಹೋಬಳಿಯ ರೈತರು ಕಳೆದ 240 ದಿನಗಳಿಂದ ಮುಷ್ಕರ ನಿರತರಾಗಿದ್ದು, ಈ ಸಂಬಂಧ ಸರ್ಕಾರದ ಹಂತದಲ್ಲಿ ಜವನಗೊಂಡನಹಳ್ಳಿ ಹೋಬಳಿಯ ಗಾಯಿತ್ರಿ ಜಲಾಶಯ ಮತ್ತು ಇತರೆ 13 ಕೆರೆಗಳಿಗೆ ಕುಡಿಯುವ ನೀರು ಮತ್ತು ಅಂತರ್ಜಲ ವೃದ್ಧಿ ಸಂಬಂಧ 0.5 ಟಿಎಂಸಿ ನೀರನ್ನು ಹಂಚಿಕೆ ಮಾಡುವಂತೆ ಪ್ರಸ್ಥಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಸಣ್ಣ ನೀರಾವರಿ ಇಲಾಖೆಯಿಂದ ಈ ಸಂಬಂಧ ಫೆಬ್ರವರಿ, 6, 2025 ರಂದು ಹಾಗೂ ಭದ್ರಾ ಮೇಲ್ದಂಡೆ ಯೋಜನಾಧಿಕಾರಿಗಳೊಂದಿಗೆ ಸಭೆ ನಡೆಸಿ ನೀರು ಹಂಚಿಕೆ ಮಾಡುವ ಬಗ್ಗೆ ಪರಿಶೀಲಿಸಲು ಕೋರಲಾಗಿದೆ ಎಂದು ಹೇಳಿದರು.

ಕೃಷ್ಣ ನ್ಯಾಯಾಧೀಕರಣದ ಪ್ರಧಾನ ಸಲಹೆಗಾರರಾದ ಅನಿಲ್ ಕುಮಾರ್‌ ಅವರು, ಈ ಸಂಬಂಧ ಪರಿಶೀಲಿಸಿ ಮುಂದಿನ ದಿನಗಳಲ್ಲಿ ಹಂಚಿಕೆ ಮಾಡುವುದಾಗಿ ತಿಳಿಸಿದ್ದು ಈ ವಿಷಯವನ್ನು ಜವನಗೊಂಡನಹಳ್ಳಿ ಹೋಬಳಿಯ ಎಲ್ಲಾ ರೈತರ ಹಾಗೂ ಮುಷ್ಕರ ನಿರತರಿಗೆ ಸರ್ಕಾರದ ಮಟ್ಟದಲ್ಲಿ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಕೂಲಂಕುಷವಾಗಿ ತಿಳಿಸಿ ಮುಷ್ಕರ ಕೈಬಿಡುವಂತೆ ಕೋರಲಾಗುತ್ತಿದೆ. ಮುಂದಿನ ದಿನಗಳಲ್ಲಿ ಜವನಗೊಂಡನಹಳ್ಳಿ ಹೋಬಳಿಯ ಗಾಯಿತ್ರಿ ಜಲಾಶಯ ಮತ್ತು ಇತರೆ 13 ಕೆರೆಗಳಿಗೆ ನೀರು ತರುವ ಪ್ರಾಮಾಣಿಕ ಪ್ರಯತ್ನ ಖಂಡಿತವಾಗಿಯೂ ಮಾಡುತ್ತೇನೆ ಎಂದರು.

ಈ ಕುರಿತು ಸರ್ಕಾರದ ಹಂತದಲ್ಲಿ 225 ಕೋಟಿ ರು.ಅನುದಾನ ಕೋರಿ ಈಗಾಗಲೇ ಸಣ್ಣ ನೀರಾವರಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಸಣ್ಣ ನೀರಾವರಿ ಇಲಾಖೆ ಸಚಿವರು ಪೂರಕವಾಗಿ ಸ್ಪಂದಿಸಿದ್ದು ನೀರು ಹಂಚಿಕೆ ವಿಷಯವಾಗಿ ಸರ್ಕಾರದ ಹಂತದಲ್ಲಿರುವ ಬೆಳವಣಿಗೆಯನ್ನು ರೈತರಿಗೆ ತಿಳಿಸುವ ಕೆಲಸ ಮಾಡಲಾಗುತ್ತಿದೆ ಎಂದರು. ಈ ವೇಳೆ ಜೆಜಿ ಹಳ್ಳಿ ಹೋಬಳಿಯ ರೈತರು ಪಾಲ್ಗೊಂಡಿದ್ದರು.