ಪ್ರತಿ ಗ್ರಾಮದಲ್ಲೂ ನಾನು ಶಾಸಕನಾಗಿದ್ದ ವೇಳೆ ಮಾತ್ರ ಅಭಿವೃದ್ಧಿ ಆಗಿತ್ತು, ಆಮೇಲೆ ಬಂದ ಶ್ರೀನಿವಾಸಗೌಡರು ಸಹ ಅಭಿವೃದ್ಧಿ ಮಾಡಲಿಲ್ಲ, ನಂತರ ಬಂದ ಶಾಸಕ ಕೊತ್ತೂರು ಮಂಜುನಾಥ ಕೂಡ ಯಾವುದೇ ರೀತಿ ಕೋಲಾರವನ್ನು ಅಭಿವೃದ್ಧಿ ಮಾಡದೆ ಸುಮ್ಮನೆ ಕಾಲಹರಣ ಮಾಡುತ್ತಿದ್ದಾರೆ .
ವಿನಾಕಾರಣ ಸುಳ್ಳು ಸುದ್ದಿ ಹಬ್ಬಿಸುತ್ತಿರುವ ಕಾಂಗ್ರೆಸ್ । ಅಭಿವೃದ್ಧಿ ಮಾಡದ ಶಾಸಕ ಕೊತ್ತೂರು ಕಾಲಹರಣ
ಕನ್ನಡಪ್ರಭ ವಾರ್ತೆ ಕೋಲಾರಇತ್ತೀಚೆಗೆ ಕಾಂಗ್ರೆಸ್ ಪಕ್ಷದವರು ವರ್ತೂರು ಪ್ರಕಾಶ್ ಬಾಗಲಕೋಟೆಗೆ ವಲಸೆ ಹೋಗುತ್ತಾರೆ ಎಂದು ಸುಳ್ಳು ಸುದ್ದಿಗಳನ್ನು ವಿನಾಕಾರಣ ಹಬ್ಬಿಸುತ್ತಿದ್ದಾರೆ, ಕಾರ್ಯಕರ್ತರು ಯಾವುದಕ್ಕೂ ಕಿವಿ ಕೊಡಬಾರದು ಎಂದು ಮಾಜಿ ಸಚಿವ ಆರ್.ವರ್ತೂರು ಪ್ರಕಾಶ್ ಹೇಳಿದರು.
ತಾಲೂಕಿನ ಕೋಗಿಲಹಳ್ಳಿ ನಿವಾಸದಲ್ಲಿ ಮಾರ್ಜೆನಹಳ್ಳಿ, ಹೊನ್ನೇನಳ್ಳಿ, ಅರಹಳ್ಳಿ, ಕೊಂಡ ರಾಜನಹಳ್ಳಿ, ತೊರೆ ದೇವಂಡಹಳ್ಳಿ, ಗ್ರಾಪಂ ವ್ಯಾಪ್ತಿಯ ಹಳ್ಳಿಗಳ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.ಕಾಂಗ್ರೆಸ್ ಪಕ್ಷದವರು ಸೋಲಿನ ಭೀತಿಯಿಂದ ನಮ್ಮ ಕಾರ್ಯಕರ್ತರ ತಲೆಕೆಡಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ, ಕೋಲಾರ ವಿಧಾನಸಭಾ ಕ್ಷೇತ್ರದ ಮತದಾರರು ನನ್ನನ್ನು ನಂಬಿ ೨೦೦೮ರಲ್ಲಿ ಶಾಸಕರನ್ನಾಗಿ ಮಾಡಿದ್ದಾರೆ, ಎರಡನೇ ಅವಧಿಗೆ ಕೂಡ ಶಾಸಕರನ್ನಾಗಿ ಮಾಡಿದ್ದರು, ಮತ್ತೆ ಎರಡು ಬಾರಿ ಸೋತರೂ ಕೂಡ ನನಗೆ ೫೦,೦೦೦ ಮತಗಳನ್ನು ಕೊಟ್ಟಿದ್ದೀರಾ. ಕೋಲಾರ ವಿಧಾನಸಭಾ ಕ್ಷೇತ್ರವನ್ನು ನಾನು ನನ್ನ ಕಂಠದಲ್ಲಿ ಉಸಿರಿರುವ ತನಕ ಮರೆಯುವುದಿಲ್ಲ ಎಂದು ಹೇಳಿದರು.
ಪ್ರತಿ ಗ್ರಾಮದಲ್ಲೂ ನಾನು ಶಾಸಕನಾಗಿದ್ದ ವೇಳೆ ಮಾತ್ರ ಅಭಿವೃದ್ಧಿ ಆಗಿತ್ತು, ಆಮೇಲೆ ಬಂದ ಶ್ರೀನಿವಾಸಗೌಡರು ಸಹ ಅಭಿವೃದ್ಧಿ ಮಾಡಲಿಲ್ಲ, ನಂತರ ಬಂದ ಶಾಸಕ ಕೊತ್ತೂರು ಮಂಜುನಾಥ ಕೂಡ ಯಾವುದೇ ರೀತಿ ಕೋಲಾರವನ್ನು ಅಭಿವೃದ್ಧಿ ಮಾಡದೆ ಸುಮ್ಮನೆ ಕಾಲಹರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ಸಾರ್ವಜನಿಕರು ಯಾವುದೇ ಕೆಲಸಕ್ಕೆ ಹೋದರೂ ಅನಿಲ್‌ಕುಮಾರ್ ಕಡೆ ಕೈತೋರಿಸುತ್ತಾರೆ, ಸಾರ್ವಜನಿಕರು ಸುಮ್ಮನೆ ಬೇಜಾರು ಮಾಡಿಕೊಂಡು ತಮ್ಮ ಮನೆಗಳಿಗೆ ವಾಪಸ್ ಆಗುತ್ತಾರೆ, ಶಾಸಕರಿಗೆ ಕ್ಷೇತ್ರದ ಗ್ರಾಮದ ಹೆಸರುಗಳೇ ಗೊತ್ತಿಲ್ಲ, ಯಾವ ಗ್ರಾಮದಲ್ಲಿ ಏನು ತೊಂದರೆಗಳಿವೆ ಎಂಬುದು ಅವರಿಗೆ ಮನವರಿಕೆ ಮಾಡುವ ನಾಯಕರು ಕೂಡ ಇಲ್ಲ, ಇಂತಹ ಸನ್ನಿವೇಶದಲ್ಲಿ ಗ್ರಾಮಗಳ ಅಭಿವೃದ್ಧಿ ಇಲ್ಲ, ಕ್ಷೇತ್ರದ ಅಭಿವೃದ್ಧಿಯೂ ಇಲ್ಲ. ಮಾತೆತ್ತಿದ್ದರೆ ಸಾಕು, ನಾನು ೨೦೦೦ ಕೋಟಿ ಅನುದಾನ ತಂದಿದ್ದೇನೆ ಎಂದು ಸುಳ್ಳು ಹೇಳುತ್ತಿದ್ದಾರೆ. ಇಂತಹ ಸುಳ್ಳು ಮಾತುಗಳನ್ನು ನಂಬಬೇಡಿ ಎಂದು ಹೇಳಿದರು.
ಗ್ರಾಪಂ, ತಾಪಂ, ಜಿಪಂ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಶಾಸ್ತಿ ಮಾಡಬೇಕು, ಮತ್ತೆ ರಾಜ್ಯದಲ್ಲಿ ಮೈತ್ರಿ ಮುಂದುವರಿಯುತ್ತದೆ, ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ನೇತೃತ್ವದಲ್ಲಿ, ಬಿಜೆಪಿಯಿಂದ ನಾವು, ಎಲ್ಲರೂ ಸೇರಿಕೊಂಡು ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ದೂರವಿಟ್ಟಾಗ ಮಾತ್ರ ಕ್ಷೇತ್ರ ಅಭಿವೃದ್ಧಿ ಹೊಂದಲು ಸಾಧ್ಯ, ಮೈತ್ರಿ ಅಭ್ಯರ್ಥಿಯಾಗಿ ಸಿಎಂಆರ್ ಶ್ರೀನಾಥ್ ಸಹ ಆಗಬಹುದು ಅಥವಾ ಬಿಜೆಪಿಯಿಂದ ನಾನಾದರೂ ಸ್ಪರ್ಧೆ ಮಾಡಬಹುದು, ಯಾರೇ ಅಭ್ಯರ್ಥಿಯಾದರೂ, ಒಮ್ಮತದಿಂದ ಹೈಕಮಾಂಡ್ ಯಾರಿಗೇ ಟಿಕೆಟ್ ನೀಡಿದರೂ ಗೆಲ್ಲಿಸಿಕೊಂಡು ಬರುವ ಕೆಲಸ ಮಾಡೋಣವೆಂದು ನುಡಿದರು.ಸಭೆಯಲ್ಲಿ ಮುಖಂಡರಾದ ಬೆಗ್ಲಿ ಸೂರ್ಯಪ್ರಕಾಶ್, ಜಿಪಂ ಮಾಜಿ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ತಾಪಂ ಮಾಜಿ ಅಧ್ಯಕ್ಷ ಸೂಲೂರು ಆಂಜನಪ್ಪ, ಬಿಜೆಪಿ ತಾಲೂಕು ಅಧ್ಯಕ್ಷ ಸಿ.ಡಿ.ರಾಮಚಂದ್ರಗೌಡ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಮಂಜುನಾಥ್, ತಂಬಳ್ಳಿ ಮುನಿಯಪ್ಪ, ಬೀಚಗೊಂಡಹಳ್ಳಿ ದಿಲೀಪ್ ಇದ್ದರು.