ಹೆಣ್ಣುಮಕ್ಕಳಿಗೆ ಗೌರವ ಕೊಡುವ ಕೆಲಸ ಆಗಬೇಕು, ರಾಜಕಾರಣವನ್ನು ರಾಜಕಾರಣವಾಗಿಯೇ ಮಾಡಬೇಕು, ಆರೋಗ್ಯಕರ ಟೀಕೆ ಮಾಡಿ ನಾವು ಸ್ವೀಕರಿಸುತ್ತೇವೆ. ಮಾಜಿ ಶಾಸಕರು ಬಾಲಕೃಷ್ಣ ರವರ ವಿರುದ್ಧ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ್ದಾರೆ. ಆದರೆ ನಿಮ್ಮ ಕಾರ್ಯಕರ್ತರು ಮಾಜಿ ಶಾಸಕ ಮಂಜುನಾಥ್ ರ ವಿರುದ್ಧ ಏಕವಚನದಲ್ಲಿ ಮಾಗಡಿಗೆ ಬಂದರೆ ಬಿಡುವುದಿಲ್ಲ ಹೊಡೆಯುತ್ತೇನೆ ಎಂದು ಧಮ್ಕಿ ಹಾಕುತ್ತಾರೆ.

ಕನ್ನಡಪ್ರಭ ವಾರ್ತೆ ಮಾಗಡಿ ಬಮೂಲ್ ನಿರ್ದೇಶಕ ಎಚ್.ಎನ್. ಅಶೋಕ್ ರವರು ಮಾಜಿ ಶಾಸಕ ಎ.ಮಂಜುನಾಥ್ ವಿರುದ್ಧ ಏಕವಚನ ಬಳಸುವುದನ್ನು ನಿಲ್ಲಿಸಬೇಕು. ನಿಮ್ಮ ಕಾರ್ಯಕರ್ತರು ಇದೇ ರೀತಿ ನಮ್ಮ ನಾಯಕರ ವಿರುದ್ಧ ಮಾತನಾಡಿದರೆ ನಾವು ಸುಮ್ಮನೆ ಕೂರುವುದಿಲ್ಲ ಎಂದು ಜೆಡಿಎಸ್ ಮುಖಂಡ ಹಾಗೂ ಗ್ರಾಪಂ ಸದಸ್ಯ ಸಾಗರ್ ಎಚ್ಚರಿಕೆ ನೀಡಿದರು.

ತಾಲೂಕಿನ ಮರೂರು ಹ್ಯಾಂಡ್ ಪೋಸ್ಟ್ ನ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೈಯಕ್ತಿಕ ವಿಚಾರಗಳನ್ನು ಇಟ್ಟುಕೊಂಡು ಸುದ್ದಿಗೋಷ್ಠಿಯಲ್ಲಿ ಅಶೋಕ್ ರವರು ಮಾತನಾಡಿದ್ದಾರೆ, ನಮಗೂ ಕೂಡ ನಮ್ಮ ನಾಯಕರ ಬಗ್ಗೆ ಗೌರವವಿದೆ. ನೀವು ಈ ರೀತಿ ಮಾತನಾಡಿದರೆ ಸಮಾಜದಲ್ಲಿ ಯಾವ ಸಂದೇಶ ಕೊಡಲು ಸಾಧ್ಯ? ಎ.ಮಂಜುನಾಥ್ ರವರು ಹೆಣ್ಣಿನ ವಿಚಾರದಲ್ಲಿ ತಪ್ಪು ಮಾಡಿದ್ದಾರೆ ಎಂದು ಮುಗಿದು ಹೋಗಿರುವ ಪ್ರಕರಣ ಇಟ್ಟುಕೊಂಡು ಮಾತನಾಡಿದ್ದೀರಾ, ನಿಮ್ಮ ಪಕ್ಕದಲ್ಲಿ ಹೆಣ್ಣು ಮಕ್ಕಳು ಇದ್ದಾರೆ ಎಂಬುದನ್ನು ಗಮನಿಸದೇ ಮಾತನಾಡುತ್ತೀರಾ. ನೀವು ಹೆಣ್ಣುಮಕ್ಕಳಿಗೆ ಕೊಡುವ ಗೌರವ ಇದೇನಾ ಎಂದು ಪ್ರಶ್ನಿಸಿದರು.

ಹೆಣ್ಣುಮಕ್ಕಳಿಗೆ ಗೌರವ ಕೊಡುವ ಕೆಲಸ ಆಗಬೇಕು, ರಾಜಕಾರಣವನ್ನು ರಾಜಕಾರಣವಾಗಿಯೇ ಮಾಡಬೇಕು, ಆರೋಗ್ಯಕರ ಟೀಕೆ ಮಾಡಿ ನಾವು ಸ್ವೀಕರಿಸುತ್ತೇವೆ. ಮಾಜಿ ಶಾಸಕರು ಬಾಲಕೃಷ್ಣ ರವರ ವಿರುದ್ಧ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ್ದಾರೆ. ಆದರೆ ನಿಮ್ಮ ಕಾರ್ಯಕರ್ತರು ಮಾಜಿ ಶಾಸಕ ಮಂಜುನಾಥ್ ರ ವಿರುದ್ಧ ಏಕವಚನದಲ್ಲಿ ಮಾಗಡಿಗೆ ಬಂದರೆ ಬಿಡುವುದಿಲ್ಲ ಹೊಡೆಯುತ್ತೇನೆ ಎಂದು ಧಮ್ಕಿ ಹಾಕುತ್ತಾರೆ. ನಮ್ಮ ನಾಯಕರು ಏಕಾಂಗಿಯಾಗಿ ಮಾಗಡಿ ತಾಲೂಕಿನಲ್ಲಿ ಒಬ್ಬರೇ ಬರುತ್ತಾರೆ, ಏನು ಮಾಡಲು ಸಾಧ್ಯ. ಅವರ ಹಿಂದೆ ನಾವು ನಿಲ್ಲುತ್ತೇವೆ, ಅವರ ಪಡೆ ದೊಡ್ಡ‌ಮಟ್ಟದಲ್ಲಿ ಇದೆ. ಜನರು 2018ರಲ್ಲಿ 52 ಸಾವಿರ ಮತಗಳ ಲೀಡ್ ನೀಡಿ ಗೆಲ್ಲಿಸಿದ್ದಾರೆ. 2028ರಲ್ಲಿ ನಮ್ಮ ನಾಯಕರನ್ನು ಜನಗಳು ಗೆಲ್ಲಿಸುತ್ತಾರೆ ಎಂದು ಹೇಳಿದರು.

ಬೆಳಗುಂಬ ವಿಎಸ್ಎಸ್ಎನ್ ಅಧ್ಯಕ್ಷ ರಂಗಣ್ಣಿ ಮಾತನಾಡಿ, 1994ರಲ್ಲಿ ಬಾಲಕೃಷ್ಣರವರು ಮೊದಲ ಬಾರಿ ಶಾಸಕರಾದಾಗ ನಾವು ಕೂಡ ಅವರ ಪರವಾಗಿ ಚುನಾವಣೆ ಮಾಡಿದ್ದೇವೆ. ಆ ಸಮಯದಲ್ಲಿ ಎಚ್.ಎನ್.ಅಶೋಕ್ ರವರು ವಕೀಲರಾಗಿ ಸೇವೆ ಮಾಡುತ್ತಿದ್ದರು. ನಾವು ಆಗ ಕೇಸ್ ಗಳನ್ನು ಹಾಕಿಸಿಕೊಂಡು ರಾಜಕೀಯ ಮಾಡಿದ್ದೇವೆ. ಎಲ್ಲಾ ಅಧಿಕಾರವನ್ನು ನೀವೇ ಅನುಭವಿಸುತ್ತಿದ್ದೀರಾ, ನಮ್ಮ ನಾಯಕರ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಕೂಡಲೇ ನಿಲ್ಲಿಸಬೇಕು. ಏಕವಚನದಲ್ಲಿ ಇನ್ನು ಮುಂದೆ ನಮ್ಮ ನಾಯಕರ ವಿರುದ್ಧ ಮಾತನಾಡಿದರೆ ರಸ್ತೆಯಲ್ಲೇ ತಡೆದು ಪ್ರತಿಭಟಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಜೆಡಿಎಸ್ ಹಿರಿಯ ಮುಖಂಡ ಕುದೂರು ಕಿಟ್ಟಿ ಮಾತನಾಡಿ, ಹೇಮಾವತಿ ಯೋಜನೆಯಲ್ಲಿ ಶಾಸಕ ಬಾಲಕೃಷ್ಣ ಎಚ್.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿಗಳಾಗಿದ್ದಾಗ ಅವರ ಮನವೊಲಿಸಿ ಹೇಮಾವತಿ ಯೋಜನೆ ತರುವ ಪ್ರಯತ್ನ ಮಾಡಲಿಲ್ಲ. ಹೇಮಾವತಿ ಏನೋ ಹಿಂದಿಯ ಪ್ರಸಿದ್ಧ ನಟಿ ಹೇಮಾ ಮಾಲಿನಿನ ಬರೋಕೆ ಎಂದು ಶಾಸಕ ಸಿ.ಪಿ. ಯೋಗೇಶ್ವರ್ ರವರಿಗೆ ಬಾಲಕೃಷ್ಣ ಹೇಳಿದ್ದನ್ನು ಮರೆತಿದ್ದಾರೆ. ನಮ್ಮ ನಾಯಕರು ಹೇಮಾವತಿ ವಿಚಾರದಲ್ಲಿ ಹೋರಾಟ ಮಾಡಿದ್ದು ಹಗುರವಾಗಿ ಮಾತನಾಡುವುದನ್ನು ಬಿಡಬೇಕು ಎಂದು ಹೇಳಿದರು.

ಗ್ರಾ.ಪಂ.ಮಾಜಿ ಅಧ್ಯಕ್ಷ ಸುರೇಶ್, ಮುಸ್ಲಿಂ ಮುಖಂಡ ಸುಹೇಲ್, ಜೆಡಿಎಸ್ ಯುವ ಘಟಕದ ಅಧ್ಯಕ್ಷ ವಿಜಯಕುಮಾರ್, ಗುಡೆಮಾರನಹಳ್ಳಿ ನಾಗರಾಜು ಮಾತನಾಡಿದರು.

ಜೆಡಿಎಸ್ ಹಿರಿಯ ಮುಖಂಡರಾದ ಪಂಚೆ ರಾಮಣ್ಣ, ಕೆಂಪೇಗೌಡ, ಚಿಗಳೂರು ಪ್ರಸನ್ನ, ಬುಲೆಟ್ ರಾಮು, ಬಸವೇಗೌಡ, ಕುದೂರು ಪುರುಷೋತ್ತಮ್, ಹೊನ್ನರಾಜು, ಲಕ್ಷ್ಮಣ್, ಬಾಲಕೃಷ್ಣ, ಶಿವರಾಮು, ಉಮೇಶ್, ರೋಹಿತ್, ಗುಣಶೇಖರ್, ಗುಂಡ, ನಿಂಗೇಗೌಡ, ಆದರ್ಶ, ಕಾರ್ತಿಕ್ ಸೇರಿದಂತೆ ಜೆಡಿಎಸ್ ನ ಹಲವು ಮುಖಂಡರು ಇದ್ದರು.