ರಾಮನಗರ: ಬಿಡದಿ ಟೌನ್ ಶಿಪ್ ಯೋಜನೆ ವಿಷಯವಾಗಿ ಕೇಂದ್ರ ಸಚಿವ ಕುಮಾರಸ್ವಾಮಿ ಮತ್ತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಬಹಿರಂಗ ಚರ್ಚೆಗೆ ವೇದಿಕೆ ಸಿದ್ಧ ಪಡಿಸಲು ಶಾಸಕ ಬಾಲಕೃಷ್ಣನಿಗೆ ಧಮ್ಮು, ತಾಕತ್ತು ಇಲ್ಲ. ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ನಾನು ವೇದಿಕೆ ಆಯೋಜಿಸುತ್ತೇನೆ, ಅವಕಾಶ ಕೊಡಲಿ ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ, ಮಾಜಿ ಶಾಸಕ ಎ.ಮಂಜುನಾಥ್ ಸವಾಲು ಹಾಕಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮ್ಮ ಸಚಿವರೊಂದಿಗೆ ಬರಲಿ. ಕೇಂದ್ರ ಸಚಿವ ಕುಮಾರಸ್ವಾಮಿ, ವಿಪಕ್ಷ ನಾಯಕ ಆರ್.ಅಶೋಕ್ ಅವರು ಬರುತ್ತಾರೆ. ಯೋಜನೆ ಪರ ಮತ್ತು ವಿರೋಧ ಇರುವ ಭೂ ಮಾಲೀಕರನ್ನು ಪ್ರತ್ಯೇಕವಾಗಿ ಕೂರಿಸಿ ಚರ್ಚೆ ನಡೆಸೋಣ. ಒಂದೇ ಒಂದು ಸಣ್ಣ ಅಹಿತಕರ ಘಟನೆಗೂ ಅವಕಾಶ ನೀಡದಂತೆ ನಾನೇ ಜವಾಬ್ದಾರಿ ವಹಿಸಿಕೊಳ್ಳುತ್ತೇನೆ ಎಂದರು.

ಶಾಸಕರಿಗೆ ಭಯ ಇದ್ದರೆ, ಪೊಲೀಸ್ ಭದ್ರತೆಯಲ್ಲಿ ಬಹಿರಂಗ ಚರ್ಚೆ ನಡೆಯಲಿ. ಯೋಜನೆ ಪರವಾಗಿರುವವರು ಹೆಚ್ಚಿದ್ದರೆ ನಾವು ಕೈ ಮುಗಿದು ಹೋರಾಟದಿಂದ ಹಿಂದೆ ಸರಿಯುತ್ತೇವೆ. ಯೋಜನೆಗೆ ವಿರೋಧ ಇರುವವರು ಹೆಚ್ಚಾಗಿದ್ದರೆ ಕೂಡಲೇ ರಾಜ್ಯ ಸರ್ಕಾರ ಯೋಜನೆ ಕೈಬಿಡಲಿ. ಚರ್ಚೆಗೆ ಕರೆದು ಬೃಹ್ನಳೆ ರೀತಿ ಬೆನ್ನು ತೋರಿಸಿ ಓಡಿ ಹೋಗುವುದು ಏಕೆಂದು ಪ್ರಶ್ನಿಸಿದರು.

2006ರಲ್ಲಿ ಕುಮಾರಸ್ವಾಮಿರವರು ಮುಖ್ಯಮಂತ್ರಿ ಆಗಿದ್ದಾಗ ಡಿ.ಕೆ.ಶಿವಕುಮಾರ್ ರವರು ಪಂಥಾಹ್ವಾನ ನೀಡಿದ್ದರು. ಆಗ ಸಾತನೂರಿನಲ್ಲಿ ನಡೆದ ಬಹಿರಂಗ ಚರ್ಚೆಯಲ್ಲಿ ಕುಮಾರಸ್ವಾಮಿ ಅವರೊಂದಿಗೆ ಇದೇ ಬಾಲಕೃಷ್ಣರವರು ವೇದಿಕೆ ಹಂಚಿಕೊಂಡಿದ್ದರು. ಆಗ ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗಲಿಲ್ಲ. ಈಗಲೂ ಯಾವುದೇ ಅನಾಹುತ ಸಂಭವಿಸದಂತೆ ನಾನೇ ಜವಾಬ್ದಾರಿ ತೆಗೆದುಕೊಳ್ಳುತ್ತೇನೆ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.

ನಿಮ್ಮ ಸಿಎಂಗೆ ಕನಿಷ್ಠ ಜ್ಞಾನ ಇಲ್ಲ:


ರೈತರ ಸಮ್ಮುಖದಲ್ಲಿಯೇ ಬಹಿರಂಗ ಚರ್ಚೆ ನಡೆಯಲೆಂದು ಮುಖ್ಯಮಂತ್ರಿಗಳನ್ನು ಬೈರಮಂಗಲ ವೃತ್ತಕ್ಕೆ ಆಹ್ವಾನಿಸಿದ ಕುಮಾರಸ್ವಾಮಿ ಅವರಿಗೆ ಕನಿಷ್ಠ ಜ್ಞಾನ ಇಲ್ಲವೆಂದು ಶಾಸಕ ಬಾಲಕೃಷ್ಣ ಹೇಳಿದ್ದಾರೆ. ಕುಮಾರಸ್ವಾಮಿರವರಿಗೆ ಗರಿಷ್ಠ ಜ್ಞಾನ ಇರುವ ಕಾರಣದಿಂದಲೇ ಎರಡು ಬಾರಿ ಮುಖ್ಯಮಂತ್ರಿ, ಸಂಸದರಾಗಿ ಈಗ ಕೇಂದ್ರ ಸಚಿವರಾಗಿದ್ದಾರೆ. ಫಲವತ್ತಾದ ಕೃಷಿ ಭೂಮಿ ಕಬಳಿಸಲು ಹೊರಟಿರುವ ನಿಮ್ಮ ಮುಖ್ಯಮಂತ್ರಿ, ಸಚಿವರು ಹಾಗೂ ಅಧಿಕಾರಿಗಳಿಗೆ ಕನಿಷ್ಠ ಪ್ರಜ್ಞೆ ಇಲ್ಲ ಎಂದು ತಿರುಗೇಟು ನೀಡಿದರು.

ನಿನಗಿಂತ ಎರಡುರಷ್ಟು ಮಾತನಾಡಲು ನಮಗೂ ಬರುತ್ತದೆ. ಆದರೆ, ನಿನ್ನ ರೀತಿ ಬಾಲಿಶ ಹೇಳಿಕೆಗಳನ್ನು ಕೊಡುವುದಿಲ್ಲ. ದೇವೇಗೌಡ ಮತ್ತು ಕುಮಾರಸ್ವಾಮಿ ಅವರನ್ನು ಟೀಕಿಸಿದರೆ ಮಂತ್ರಿಗಿರಿ ಸಿಗುತ್ತದೆ ಎಂಬ ಕಾರಣಕ್ಕೆ ಮುಖ್ಯಮಂತ್ರಿಗಳನ್ನು ಮೆಚ್ಚಿಸಲು ಬಾಯಿ ಹೊಲಸು ಮಾಡಿಕೊಳ್ಳುತ್ತಿದ್ದಿಯಾ ಎಂದು ಏಕ ವಚನದಲ್ಲಿ ವಾಗ್ದಾಳಿ ನಡೆಸಿದರು.

ಕೈ ನಾಯಕರ ಬೇನಾಮಿ ಆಸ್ತಿ ಬಿಡುಗಡೆ ಮಾಡ್ತೀವಿ:

ಸಚಿವ ಎಂ.ಬಿ.ಪಾಟೀಲ್ ಹಿರಿಯ ನಾಯಕರು. ಅವರ ಬಗ್ಗೆ ನಮಗೆ ಗೌರವ ಇದೆ. ಆದರೆ, ಖಾಲಿಪೋಲಿಗಳ ಮಾತು ಕೇಳಿಕೊಂಡು ಮಾತನಾಡುವುದರಲ್ಲಿ ಅರ್ಥವಿಲ್ಲ. ಅವರದೇ ಸರ್ಕಾರ ಇದೆಯಲ್ಲ ಕುಮಾರಸ್ವಾಮಿರವರ ಬೇನಾಮಿ ಆಸ್ತಿ ಕುರಿತು ತನಿಖೆ ಮಾಡಿಸಲಿ. ಇಲ್ಲದಿದ್ದರೆ ಜಿಲ್ಲಾಧಿಕಾರಿಗಳು, ಜಿಬಿಡಿಎ ಅಧ್ಯಕ್ಷ ನಟರಾಜ್ ಹಾಗೂ ಕಾಂಗ್ರೆಸ್ ನಾಯಕರ ಬೇನಾಮಿ ಆಸ್ತಿ ವಿವರನ್ನು ನಾನೇ ಬಿಡುಗಡೆ ಮಾಡುತ್ತೇನೆ ಎಂದು ಸವಾಲು ಹಾಕಿದರು.

ಬಾಲಕೃಷ್ಣ ಸ್ವಂತ ಊರು ಹುಲಿಕಟ್ಟೆಯಲ್ಲಿ ಗುಂಡು ತೋಪು ಬಿಡದೆ 300 ಎಕರೆ ಬೇನಾಮಿ ಆಸ್ತಿ ಮಾಡಿದ್ದಾನೆ. ತಾವರೆಕೆರೆಯಲ್ಲಿ 25 ಎಕರೆ ಕಬಳಿಸಿದ್ದಾನೆ. ಅದೆಲ್ಲವನ್ನು ಶಾಲೆಗೆ ದಾನ ಮಾಡಲಿ ನೋಡೋಣ. ನಿನಗೆ ಧಮ್ಮು ತಾಕತ್ತು ಇದ್ದರೆ ನೀನು ಮಾಡಿರುವ ಬೇನಾಮಿ ಆಸ್ತಿ ಬಗ್ಗೆಯೂ ತನಿಖೆ ಮಾಡಿಸು ಎಂದು ಹೇಳಿದರು.

ಈ ಯೋಜನೆ ವಿರುದ್ಧ ಕಾನೂನಾತ್ಮಕ ಹೋರಾಟ ಮಾಡಬೇಕಿದೆ. ಆದರೆ, ಅಧಿಕಾರಿಗಳು ಅದಕ್ಕೆ ಬೇಕಾದ ದಾಖಲೆಗಳನ್ನು ಕೊಡುತ್ತಿಲ್ಲ. ಕಾನೂನು ಹೋರಾಟ ಮಾಡುತ್ತೇವೆ ಎಂಬ ಕಾರಣಕ್ಕೆ ಅಧಿಕೃತ ಕಚೇರಿ ಬಿಟ್ಟು ಬೇರೆ ಬೇರೆ ಕಡೆ ಕೆಲಸ ಮಾಡುತ್ತಿದ್ದಾರೆ. ಈಗ ಕಚೇರಿ ಕುಮಾರ ಕೃಪಕ್ಕೆ ಸ್ಥಳಾಂತರವಾಗುತ್ತಿರುವ ಮಾಹಿತಿ ಇದೆ. ಅದೆಲ್ಲದರ ದಾಖಲೆಗಳನ್ನು ವಿಡಿಯೋ ಸಮೇತ ಬಿಡುಗಡೆ ಮಾಡುತ್ತೇನೆ ಎಂದು ಎ.ಮಂಜುನಾಥ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬೈರಮಂಗಲ-ಕಂಚುಗಾರನಹಳ್ಳಿ ಗ್ರಾಪಂಗಳ ಭೂ ಹಿತರಕ್ಷಣಾ ಸಂಘ ಅಧ್ಯಕ್ಷ ರಾಮಯ್ಯ, ಅಶ್ವತ್ಥ್ , ರವಿಕುಮಾರ್ ಮತ್ತಿತರರು ಇದ್ದರು.

ಬಾಕ್ಸ್‌..........

ಪುಡಾರಿ ಅಧ್ಯಕ್ಷ ಪೋಸ್ಟರ್ ಅಂಟಿಸುತ್ತಿದ್ದಾನೆ: ಎ.ಮಂಜುನಾಥ್

ರಾಮನಗರ: ಪುಡಾರಿ ಅಧ್ಯಕ್ಷನೊಬ್ಬ ಪೋಸ್ಟರ್ ಅಂಟಿಸಿಕೊಂಡು ಹೇಯ ಕೃತ್ಯ ಎಸಗುತ್ತಿದ್ದಾನೆ. ಅವನಿಗೂ ತಕ್ಕ ಶಾಸ್ತಿ ಮಾಡುವ ದಿನಗಳು ದೂರವಿಲ್ಲ ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗಾಣಕಲ್ ನಟರಾಜ್ ವಿರುದ್ಧ ಮಾಜಿ ಶಾಸಕ ಎ.ಮಂಜುನಾಥ್ ವಾಗ್ದಾಳಿ ನಡೆಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆ ಪುಡಾರಿ ಅಧ್ಯಕ್ಷ ತನ್ನ ಪತ್ನಿ ಹೆಸರಿನಲ್ಲಿ ಟೌನ್ ಶಿಪ್ ಯೋಜನೆ ವ್ಯಾಪ್ತಿಯಲ್ಲಿಯೇ ಆಸ್ತಿ ಮಾಡಿದ್ದಾನೆ. ಈಗ ನಮ್ಮ ನಾಯಕರ ವಿರುದ್ಧ ಪೋಸ್ಟರ್ ಅಂಟಿಸುತ್ತಿದ್ದಾನೆ. ಆತ ಅಧ್ಯಕ್ಷನೊ ಅಥವಾ ಪೋಸ್ಟರ್ ರಾಜನೊ ಗೊತ್ತಾಗುತ್ತಿಲ್ಲ ಎಂದು ವ್ಯಂಗ್ಯವಾಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸಿಸಿ ಕ್ಯಾಮೆರಾ ದೃಶ್ಯಾವಳಿ ಆಧರಿಸಿ ಪೋಸ್ಟರ್ ಅಂಟಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಕಳ್ಳರಂತೆ ರಾತ್ರಿ ವೇಳೆ ಪೋಸ್ಟರ್ ಅಂಟಿಸಲ್ಲ. ಹಗಲು ಹೊತ್ತಿನಲ್ಲಿಯೇ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಬಳಿ ಪೋಸ್ಟರ್ ಅಂಟಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಬಾಕ್ಸ್‌........

ಡಿಕೆಶಿಗೆ ಕೆಟ್ಟ ಹೆಸರು ಬರಲು ಬಾಲಕೃಷ್ಣ, ನಟರಾಜ್ ಕಾರಣ

ರಾಮನಗರ: ಬಿಡದಿ ಟೌನ್ ಶಿಪ್ ಯೋಜನೆ ವಿಚಾರದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಕೆಟ್ಟ ಹೆಸರು ಬರಲು ಶಾಸಕ ಬಾಲಕೃಷ್ಣ ಮತ್ತು ಜಿಬಿಡಿಎ ಅಧ್ಯಕ್ಷ ನಟರಾಜ್ ಕಾರಣ ಎಂದು ಮಾಜಿ ಶಾಸಕ ಎ.ಮಂಜುನಾಥ್ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಡದಿ ಟೌನ್ ಶಿಪ್ ಹೋರಾಟ ಆರಂಭವಾದಾಗಲೇ ರೈತರನ್ನು ಭೇಟಿ ಮಾಡಿ ಬಾಲಕೃಷ್ಣ ಮತ್ತು ನಟರಾಜ್ ಸಮಸ್ಯೆ ಆಲಿಸಬೇಕಿತ್ತು. ಆದರೆ, ಇಲ್ಲಿವರೆಗೂ ಅವರಿಬ್ಬರು ರೈತರನ್ನು ಭೇಟಿ ಮಾಡಲೇ ಇಲ್ಲ. ಮುಖ್ಯಮಂತ್ರಿಗಳಿಗೆ ಸರಿಯಾದ ಮಾಹಿತಿ ಕೊಡದೆ ಅವಾಂತರ ಸೃಷ್ಟಿ ಮಾಡಿದ್ದಾರೆ ಎಂದು ಟೀಕಿಸಿದರು.

ಈಗ ಬಾಲಕೃಷ್ಣ ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಿಗೆ ಬರುತ್ತಿಲ್ಲ. ತಲೆ ಮರೆಸಿಕೊಂಡು ಓಡಾಡುತ್ತಿದ್ದಾನೆ. ನಿನಗೆ ತಾಕತ್ತಿದ್ದರೆ ಹಗಲಲ್ಲಿ ಗ್ರಾಮಗಳಿಗೆ ಬಂದು ರೈತರಿಗೆ ಎದುರಾಗು ನೋಡೋಣ ಎಂದು ಮಂಜುನಾಥ್ ಸವಾಲು ಹಾಕಿದರು.

24ಕೆಆರ್ ಎಂಎನ್ 1.ಜೆಪಿಜಿ

ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯರಾದ ಮಾಜಿ ಶಾಸಕ ಎ.ಮಂಜುನಾಥ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.