ತಾಳಿಕೋಟೆ ಪಟ್ಟಣದ ಪ್ರವಾಸಿ ಮಂದಿರದ ಪಕ್ಕದಲ್ಲಿ ಬರ ಘೋಷಣೆಗೆ ಒತ್ತಾಯಿಸಿ ರೈತ ಸಂಘದ ನೇತೃತ್ವದಲ್ಲಿ ನಡೆಯುತ್ತಿರುವ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ ಶಾಸಕ ನಾಡಗೌಡ ಮಾತನಾಡಿದರು.
ಕನ್ನಡಪ್ರಭ ವಾರ್ತೆ ತಾಳಿಕೋಟೆ
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ, ತಾಳಿಕೋಟೆ ಹಾಗೂ ದೇವರಹಿಪ್ಪರಗಿ ತಾಲೂಕುಗಳನ್ನು ಬರಪೀಡಿತ ತಾಲೂಕುಗಳ ಪಟ್ಟಿಯಿಂದ ಕೈಬಿಟ್ಟಿರುವುದನ್ನು ವಿರೋಧಿಸಿ ಸಂಪೂರ್ಣ ಬರಪೀಡಿತ ಜಿಲ್ಲೆ ಘೊಷಿಸಬೇಕೆಂದು ಒತ್ತಾಯಿಸಿ ಅಖಂಡ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ಹಮ್ಮಿಕೊಂಡ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಮುದ್ದೇಬಿಹಾಳ ಶಾಸಕ ಸಿ.ಎಸ್. ನಾಡಗೌಡ ಭೇಟಿ ನೀಡಿ ಸರ್ಕಾರದ ನಿರ್ಧಾರಕ್ಕೆ ಬೇಸರ ವ್ಯಕ್ತಪಡಿಸಿ ರೈತರ ಹೋರಾಟಕ್ಕೆ ಬೆಂಬಲ ಸೂಚಿಸುವುದರ ಜತೆಗೆ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹಾಕುವುದಾಗಿ ಭರವಸೆ ನೀಡಿದರು.ರಾಜ್ಯ ಸರ್ಕಾರ ಮೊದಲ ಹಂತದಲ್ಲಿ ಜಿಲ್ಲೆಯ ನಿಡಗುಂದಿ, ಕೊಲ್ಹಾರ ಹಾಗೂ ವಿಜಯಪುರ ತಾಲೂಕುಗಳನ್ನು ಮಾತ್ರ ಬರಪೀಡಿತ ಎಂದು ಘೋಷಿಸಿತ್ತು. ಎರಡನೇ ಪಟ್ಟಿಯಲ್ಲಾದರೂ ಮುದ್ದೇಬಿಹಾಳ, ತಾಳಿಕೋಟೆ ಮತ್ತು ದೇವರಹಿಪ್ಪರಗಿ ತಾಲೂಕುಗಳು ಸೇರ್ಪಡೆಯಾಗಲಿವೆ ಎಂಬ ಬಲವಾದ ನಂಬಿಕೆ ಇತ್ತು. ಆದರೆ ಈ ಹಂತದಲ್ಲೂ ಇವುಗಳನ್ನು ಕೈಬಿಟ್ಟಿರುವುದು ನನಗೂ ನೋವು ತಂದಿದೆ. ವಿಜಯಪುರ ಜಿಲ್ಲೆಯ ಬರ ಪರಿಸ್ಥಿತಿ ಹಾಗೂ ರೈತರ ಸಂಕಷ್ಟದ ಕುರಿತು ಈಗಾಗಲೇ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಡಲಾಗಿದೆ. ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲು ಮತ್ತೆ ಮನವಿ ಮಾಡಲಾಗುವುದು. ರೈತರ ವಿಷಯದಲ್ಲಿ ರಾಜಕೀಯ ಮಾಡುವುದಿಲ್ಲ, ರೈತರ ಹಿತಕ್ಕೆ ನಾನು ಸದಾ ಬದ್ಧ ಎಂದು ಭರವಸೆ ನೀಡಿ, ರೈತರು ತಾಳ್ಮೆ ಕಳೆದುಕೊಳ್ಳದಂತೆ ಮನವಿ ಮಾಡಿದರು.
ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ, ರಾಜ್ಯ ಸಂಘಟನಾ ಕಾರ್ಯದರ್ಶಿ ವಿಠ್ಠಲ ಬಿರಾದಾರ ಮಾತನಾಡಿದರು.ತಾಲೂಕಾಧ್ಯಕ್ಷ ಬಾಲಪ್ಪಗೌಡ ಲಿಂಗದಹಳ್ಳಿ, ರಾಮನಗೌಡ ಹಾದಿಮನಿ, ಅಶೋಕ ಉಪ್ಪಲದಿನ್ನಿ, ಚಿದಾನಂದ ಬಡಿಗೇರ, ಮಂಜುನಾಥ ಬಡಿಗೇರ, ಪ್ರಕಾಶ್ ಬಡಿಗೇರ, ರಮೇಶ್ ಬಡಿಗೇರ, ಮಲ್ಲನಗೌಡ ಆಲರೆಡ್ಡಿ, ಸಂಗನಗೌಡ ಟಕ್ಕಳಕಿ, ಗೋಪಾಲ್ ನಾಯ್ಕೋಡಿ, ಸುಭಾಶ್ ಗುಂಡಗಿ, ಶಿವನಗೌಡ ಬಿರಾದಾರ ಹಾಗೂ ರೈತ ಮಹಿಳೆಯರಾದ ಕಸ್ತೂರಿ ಮುದ್ದನ್ನೂರ, ಬೇಬಿ ಮುದ್ದನ್ನೂರ, ಶಾಂತಮ್ಮ ಯಾಳವಾರ, ಸಂಗಮ್ಮ ಟಕ್ಕಳಕಿ, ಪುಷ್ಪ ಬಿರಾದಾರ, ಜಯಶ್ರೀ ಪಾಟೀಲ, ಶಂಕ್ರಮ್ಮ ಉಪ್ಪಲದಿನ್ನಿ, ಕಮಲಾಕ್ಷಿ ಬಿರಾದಾರ, ಸಂಗಮ್ಮ ನಾವಿ ಸೇರಿದಂತೆ ಹಲವರು ಭಾಗವಹಿಸಿದ್ದರು.