ಸಾರಾಂಶ
ತಾಲೂಕಿನ ಮುರಡಿ ಕೆರೆಗೆ ನೀರು ಭರ್ತಿಯಾದ ನಿಮಿತ್ತ ಗ್ರಾಮಸ್ಥರು ಹಮ್ಮಿಕೊಂಡಿದ್ದ ಗಂಗಾಪೂಜೆ ನೆರವೇರಿಸಿದ ಶಾಸಕ
ಕನ್ನಡಪ್ರಭ ವಾರ್ತೆ ಯಲಬುರ್ಗಾಸಿಎಂ ಸಿದ್ದರಾಮಯ್ಯ ಅವರು ಈಗಾಗಲೇ ಬಜೆಟ್‌ನಲ್ಲಿ ಯಲಬುರ್ಗಾ ಕ್ಷೇತ್ರದಲ್ಲಿ ಹೊಸ ಕೆರೆ ನಿರ್ಮಾಣಕ್ಕಾಗಿ ₹1 ಸಾವಿರ ಕೋಟಿ ಮೀಸಲಿಟ್ಟಿದ್ದು, ಇದಕ್ಕೆ ೧೨೦೦ ಎಕರೆ ಭೂಮಿ ಗುರುತಿಸಲಾಗಿದೆ. ರೈತರು ಶೀಘ್ರ ಭೂಮಿ ನೀಡಿದರೆ ಕೆರೆ ನಿರ್ಮಿಸಲು ಅನುಕೂಲವಾಗುತ್ತದೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.
ಕೃಷ್ಣಾ ನದಿಯಿಂದ ತಾಲೂಕಿನ ಮುರಡಿ ಕೆರೆಗೆ ನೀರು ಭರ್ತಿಯಾದ ನಿಮಿತ್ತ ಗ್ರಾಮಸ್ಥರು ಹಮ್ಮಿಕೊಂಡಿದ್ದ ಗಂಗಾಪೂಜೆ ನೆರವೇರಿಸಿ ಮಾತನಾಡಿದರು. ತಾಲೂಕಿನ ರೈತರ ಹಿತ ಕಾಪಾಡುವ ಉದ್ದೇಶದಿಂದ ಹೊಸ ಕೆರೆಗಳ ನಿರ್ಮಾಣ ಜತೆಗೆ ಕೆರೆಗಳಿಗೆ ನೀರು ತುಂಬಿಸಲಾಗುವುದು. ಇದರಿಂದ ಅಂತರ್ಜಲ ಹೆಚ್ಚಳದಿಂದ ರೈತರ ಬದುಕು ಹಸನಗೊಳ್ಳುತ್ತದೆ ಎಂದರು.ತಾಲೂಕಿನಲ್ಲಿ ಹೊಸ ಕೆರೆಗಳನ್ನು ನಿರ್ಮಿಸಿ ಅದಕ್ಕೆ ಕೃಷ್ಣಾ ತುಂಗೆ ನದಿಯಿಂದ ನೀರು ಹರಿಸಿ ರೈತರ ಬದುಕನ್ನು ಹಸನುಗೊಳಿಸುವ ಕಾರ್ಯಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಇಂತಹ ಅಭಿವೃದ್ಧಿ ಕಾರ್ಯಗಳಿಗೆ ಜನರು ಹೆಚ್ಚು ಸಹಕಾರ ನೀಡುವುದರಿಂದ ಅನುಕೂಲವಾಗುತ್ತದೆ. ಶೀಘ್ರದಲ್ಲಿ ಕೆರೆ ತುಂಬಿಸುವ ಕಾಮಗಾರಿ ಪ್ರಾರಂಭಗೊಳ್ಳಲಿದ್ದು, ನನ್ನ ಅಭಿವೃದ್ಧಿ, ಏಳ್ಗೆ ಸಹಿಸದೆ ಕೆಲವರು ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ನನ್ನ ರಾಜಕಾರಣ ಜೀವನದಲ್ಲಿ ಎಂದೂ ದ್ವೇಷ ರಾಜಕಾರಣ ಮಾಡಿಲ್ಲ, ಮಾಡುವುದೂ ಇಲ್ಲ. ಅಂತವರಿಗೆ ಅಭಿವೃದ್ಧಿ ಮೂಲಕ ಉತ್ತರಿಸುವ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಈ ಸಂದರ್ಭ ಗ್ರಾಪಂ ಅಧ್ಯಕ್ಷ ಯಮನಪ್ಪ ಮಾಳಿ, ಕೆಬಿಜೆಎನ್‌ಎಲ್ ಎಇಇ ಚನ್ನಪ್ಪ, ಮುಖಂಡರಾದ ಯಂಕಣ್ಣ ಯರಾಶಿ, ರುದ್ರಪ್ಪ ಮರಕಟ, ಅಪ್ಪಣ್ಣ ಜೋಶಿ, ಕನಕರಾಯ ಮಾರನಾಳ, ಪ್ರಕಾಶಗೌಡ ಮಾಲಿಪಾಟೀಲ್, ಶಂಕ್ರಗೌಡ ಪೂಜಾರ, ಶಶಿಧರ ಗಡಾದ ಹಾಗೂ ಸ್ಥಳೀಯ ಮುಖಂಡರು ಇದ್ದರು.