ಪುರಾಣದಲ್ಲಿ ಭಸ್ಮಾಸುರ ಶಿವನಿಂದ ವರ ಪಡೆದು ಶಿವನ ತಲೆ ಮೇಲೆಯೇ ಕೈ ಇಡಲು ಹೋಗಿ ಕೊನೆಗೆ ತಾನೇ ಭಸ್ಮವಾದ. ಅದೇ ರೀತಿ ಕುಮಾರಣ್ಣ ಎಲ್ಲಿಗೆ ಹೋಗುತ್ತಾರೋ ಅಲ್ಲಿ ಅವರವರ ತಲೆ ಮೇಲೆಯೇ ಕೈ ಇಡುತ್ತಾರೆಂದು ಬಾಲಕೃಷ್ಣ ವ್ಯಂಗ್ಯವಾಡಿದರು.
ಕನ್ನಡಪ್ರಭ ವಾರ್ತೆ ಮಾಗಡಿ
ಮಾಗಡಿಯಲ್ಲಿ ೧೫೦ ಎಕರೆ ಜಾಗ ಕೊಡುತ್ತೇನೆ, ಕೈಗಾರಿಕೆ ಸ್ಥಾಪಿಸಿ ಯುವಕರಿಗೆ ಉದ್ಯೋಗ ಕೊಡಿಸಿ ಎಂದು ಎಚ್.ಡಿ. ಕುಮಾರಸ್ವಾಮಿಯವರಿಗೆ ಪೌರಾಡಳಿತ ಸಚಿವ ಎಚ್.ಸಿ. ಬಾಲಕೃಷ್ಣ ಸವಾಲು ಹಾಕಿದರು.ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ಕಾಂಕ್ರೀಟ್ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಬರೀ ಕಥೆ ಹೇಳಿಕೊಂಡು ಓಡಾಡುವುದನ್ನು ಬಿಟ್ಟು, ಕೇಂದ್ರದಿಂದ ರಾಜ್ಯಕ್ಕೆ ಸಾಮಾಜಿಕ ನ್ಯಾಯ ಕೊಡಿಸಲಿ. ಮಾಗಡಿಯಲ್ಲಿ ನಾನು ೧೫೦ ಎಕರೆ ಜಾಗ ಕೊಡಿಸುತ್ತೇನೆ, ಅಲ್ಲಿ ಒಂದು ಬೃಹತ್ ಕೈಗಾರಿಕೆ ಸ್ಥಾಪಿಸಿ ನಮ್ಮ ಕ್ಷೇತ್ರದ ಯುವಕರಿಗೆ ಉದ್ಯೋಗ ಕೊಡಿಸಲಿ ಎಂದು ಸವಾಲು ಹಾಕಿದರು.
ಪುರಾಣದಲ್ಲಿ ಭಸ್ಮಾಸುರ ಶಿವನಿಂದ ವರ ಪಡೆದು ಶಿವನ ತಲೆ ಮೇಲೆಯೇ ಕೈ ಇಡಲು ಹೋಗಿ ಕೊನೆಗೆ ತಾನೇ ಭಸ್ಮವಾದ. ಅದೇ ರೀತಿ ಕುಮಾರಣ್ಣ ಎಲ್ಲಿಗೆ ಹೋಗುತ್ತಾರೋ ಅಲ್ಲಿ ಅವರವರ ತಲೆ ಮೇಲೆಯೇ ಕೈ ಇಡುತ್ತಾರೆಂದು ಬಾಲಕೃಷ್ಣ ವ್ಯಂಗ್ಯವಾಡಿದರು.ಎಚ್.ಡಿ.ಕುಮಾರಸ್ವಾಮಿ ಚುನಾವಣೆಯಲ್ಲಿ ಗೆದ್ದು ಮೂರು ವರ್ಷವಾಗುತ್ತಾ ಬಂತು. ಮೇಕೆದಾಟು ಯೋಜನೆಗೆ ಮಂಜೂರಾತಿ ಕೊಡಿಸಲಿಲ್ಲ, ರಾಜ್ಯದಲ್ಲಿ ಎಲ್ಲಿಯೂ ಒಂದೇ ಒಂದು ಕೈಗಾರಿಕೆ ಸ್ಥಾಪಿಸಲಿಲ್ಲ. ಎಲ್ಲರಿಗೂ ಬರೀ ಚಾಕೊಲೇಟ್ ಕೊಟ್ಟುಕೊಂಡು ಓಡಾಡುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಯಾರು ಅಧಿಕಾರಕ್ಕೆ ಬರಬೇಕು ಎಂಬುದನ್ನು ಜನರೇ ತೀರ್ಮಾನಿಸುತ್ತಾರೆ ಎಂದರು.
ರಾಜ್ಯ ಸರ್ಕಾರದಿಂದ ಹಗಲು ದರೋಡೆಯಾಗುತ್ತಿದೆ ಎಂಬ ಕುಮಾರಸ್ವಾಮಿ ಅವರ ಆರೋಪಕ್ಕೆ ಉತ್ತರಿಸಿದ ಬಾಲಕೃಷ್ಣ, ಯಾವ ವಿಚಾರದಲ್ಲಿ ಹಗಲು ದರೋಡೆಯಾಗಿದೆ ಎಂಬುದಕ್ಕೆ ಒಂದು ನಿರ್ದಿಷ್ಟ ಉದಾಹರಣೆ ಕೊಡಲಿ. ವಿರೋಧ ಪಕ್ಷದವರು ಹೊಗಳಲು ಸಾಧ್ಯವಿಲ್ಲ, ಬೈಯುತ್ತಾರೆ ಬೈಯಲಿ ಬಿಡಿ ಎಂದು ತಿರುಗೇಟು ನೀಡಿದರು.ಹೊಸಹಳ್ಳಿ ಗ್ರಾಮಸ್ಥರ ಬಹುದಿನಗಳ ಬೇಡಿಕೆಯಂತೆ ಉಪಾಧ್ಯಕ್ಷ ಶಿವಕುಮಾರಣ್ಣ ಹಾಗೂ ಸದಸ್ಯ ರಮೇಶ್ ಅವರ ಒತ್ತಾಯದ ಮೇರೆಗೆ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಸಚಿವ ಸ್ಥಾನದ ಒತ್ತಡವಿರುವುದರಿಂದ ಬಾಕಿ ಇರುವ ಕೆಲಸಗಳನ್ನು ೬ ತಿಂಗಳೊಳಗೆ ಪೂರ್ಣಗೊಳಿಸಲು ಪ್ರತ್ಯೇಕ ಸಮಿತಿ ರಚಿಸಲಾಗಿದ್ದು, ವಾರಕ್ಕೆ ಎರಡು ಬಾರಿ ಸಭೆ ನಡೆಸಿ ಕಾಮಗಾರಿ ಮುಗಿಸಲು ಸೂಚಿಸಲಾಗಿದೆ ಎಂದರು.
ಬೆಂಗಳೂರು ಮಾಗಡಿ ಕೆಶಿಫ್ ರಸ್ತೆ ಕಾಮಗಾರಿ ವಿಳಂಬದ ಕುರಿತು ಪ್ರಶ್ನಿಸಿದಾಗ, ಒಮ್ಮೆ ಟೆಂಡರ್ ಆದ ಮೇಲೆ ಗುತ್ತಿಗೆದಾರರನ್ನು ಏಕಾಏಕಿ ಕಿತ್ತುಹಾಕಿದರೆ ಕೋರ್ಟ್- ಕಚೇರಿ ಎಂದು ಕಾಮಗಾರಿ ನಾಲ್ಕೈದು ವರ್ಷ ಮುಂದಕ್ಕೆ ಹೋಗುತ್ತದೆ. ಹೀಗಾಗಿ ಗುತ್ತಿಗೆದಾರರ ಮೂಗು ಹಿಡಿದು ಕೆಲಸ ತೆಗೆಸುತ್ತಿದ್ದೇವೆ. ಇನ್ನೊಂದು ವಾರದಲ್ಲಿ ಕೆಲಸ ಆರಂಭಿಸುವುದಾಗಿ ಗುತ್ತಿಗೆದಾರ ಒಪ್ಪಿಕೊಂಡಿದ್ದು, ಶೀಘ್ರ ಕಾಮಗಾರಿ ಆರಂಭವಾಗಲಿದೆ ಎಂದು ಬಾಲಕೃಷ್ಣ ತಿಳಿಸಿದರು.ಜುಟ್ಟನಹಳ್ಳಿ ವಿಎಸ್ಎಸ್ಎನ್ ಅಧ್ಯಕ್ಷ ಜೆ.ಪಿ.ಚಂದ್ರೇಗೌಡ, ತಗ್ಗೀಕುಪ್ಪೆ ಗ್ರಾಪಂ ಅಧ್ಯಕ್ಷೆ ಪದ್ಮ, ಉಪಾಧ್ಯಕ್ಷ ಶಿವಕುಮಾರ್, ಮಾಜಿ ಅಧ್ಯಕ್ಷೆ ತೇಜಸ್ವಿನಿ ರಮೇಶ್, ಸದಸ್ಯ ರಮೇಶ್, ಹೊಸಹಳ್ಳಿ ಗ್ರಾಮದ ಮುಖಂಡರಾದ ಬೇಕರಿ ಶಿವರಾಜು, ರಾಜವರ್ಮ, ಮುನಿರಾಜು, ರೂಪೇಶ್ಕುಮಾರ್, ಮುರುಳಿ, ಕೆ.ಕೃಷ್ಣಮೂರ್ತಿ, ವೆಂಕಟೇಶ್, ಮುಕುಂದ, ರುದ್ರೇಶ್, ತಹಸೀಲ್ದಾರ್ ರಂಜಿತ್, ಇಒ ಜೈಪಾಲ್, ಆರಕ್ಷಕ ವೃತ್ತ ನಿರೀಕ್ಷಕ ಶ್ರೀನಿವಾಸ್, ಕಾವೇರಿ ನೀರಾವರಿ ನಿಗಮ ಎಇಇ ಹುಮೀರಹಷ್ಮಿ, ಆರ್ಎಫ್ಒ ನೇತ್ರಾವತಿ, ಸಿಡಿಪಿಒ ಸುರೇಂದ್ರ ಮತ್ತೀತರರು ಇದ್ದರು.