ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಸಾಕಷ್ಟು ಅನುದಾನ ತಂದಿದ್ದೇನೆ, ವಿಜಯನಗರ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಅನುದಾನ ಹರಪನಹಳ್ಳಿ ಕ್ಷೇತ್ರಕ್ಕೆ ಬಂದಿದೆ
ಹರಪನಹಳ್ಳಿ: ಮಾಜಿ ಶಾಸಕ, ಸಹೋದರ ಎಂ.ಪಿ. ರವೀಂದ್ರ ಅವರು ಹರಪನಹಳ್ಳಿ ತಾಲೂಕಿಗೆ 371 ಜೆ ಸೌಲಭ್ಯ ಕಲ್ಪಿಸಿಕೊಟ್ಟಿದ್ದಕ್ಕೆ ಇಂದು ನಾನು ಇಷ್ಟೊಂದು ಅಭಿವೃದ್ಧಿ ಕೆಲಸ ಮಾಡಲು ಸಾಧ್ಯವಾಗಿದೆ ಎಂದು ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ತಿಳಿಸಿದ್ದಾರೆ.ಅವರು ತಾಲೂಕಿನ ಮೈದೂರು ಗ್ರಾಮದಲ್ಲಿ ಗೌರಿಪುರ ಗ್ರಾಮದವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಭಾನುವಾರ ಮಾತನಾಡಿದರು.
ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಸಾಕಷ್ಟು ಅನುದಾನ ತಂದಿದ್ದೇನೆ, ವಿಜಯನಗರ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಅನುದಾನ ಹರಪನಹಳ್ಳಿ ಕ್ಷೇತ್ರಕ್ಕೆ ಬಂದಿದೆ ಎಂದು ಅವರು ತಿಳಿಸಿದರು.ನರೇಗಾ ಯೋಜನೆಯಲ್ಲಿ ₹150 ರಿಂದ ₹160 ಕೋಟಿ ಅನುದಾನ ಬಂದು ವಿವಿಧ ಅಭಿವೃದ್ಧಿ ಕಾರ್ಯಗಳು ಆಗಿವೆ. ನಾನು ಶಾಸಕಿಯಾಗುವ ಕನಸ್ಸು ಕಂಡಿದ್ದಿಲ್ಲ. ಮುಂದೆ ಏನು ಆಗುತ್ತೋ ಗೊತ್ತಿಲ್ಲ. ಆದರೆ ಈಗ ಜನರ ಋಣವನ್ನು ಅಭಿವೃದ್ಧಿ ಕಾರ್ಯಗಳ ಮಾಡುವ ಮೂಲಕ ತೀರಿಸುತ್ತೇನೆ ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ ಮಾತನಾಡಿ, ಹರಪನಹಳ್ಳಿ ಕ್ಷೇತ್ರದಲ್ಲಿ ಸಾರ್ವಜನಿಕರ ಹಣ ಸಾರ್ವಜನಿಕರಿಗೆ ಮೀಸಲು ಎಂಬ ದೃಷ್ಟಿಯಿಂದ ರಸ್ತೆ, ಚರಂಡಿ, ಶಾಲಾ ಕಟ್ಟಡ, ವಿವಿಧ ವೃತ್ತಗಳ ಅಭಿವೃದ್ಧಿ ಸೇರಿದಂತೆ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗುತ್ತಿವೆ ಎಂದು ಹೇಳಿದರು. ರಸ್ತೆ ಅಭಿವೃದ್ಧಿಗೆ ರೈತರು ಸಾರ್ವಜನಿಕರು ಗುತ್ತಿಗೆದಾರರೊಂದಿಗೆ ಸಹಕರಿಸಬೇಕು ಎಂದು ಅವರು ಕೋರಿದರು.ಚಿಗಟೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುಬೇರಗೌಡ, ಪಿಕಾರ್ಡ ಬ್ಯಾಂಕ್ ಅಧ್ಯಕ್ಷ ಲಾಟಿದಾದಾಪೀರ ಮಾತನಾಡಿದರು. ಪ್ರಚಾರ ಸಮಿತಿ ಅಧ್ಯಕ್ಷ ದೇವೇಂದ್ರಗೌಡ, ತಾಪಂ ಮಾಜಿ ಸದಸ್ಯ ಮೈದೂರು ರಾಮಣ್ಣ, ಹೇಮಂತಪ್ಪ, ಮಂಜುನಾಥ, ಎಇಇ ಕುಬೇಂದ್ರನಾಯ್ಕ ಇದ್ದರು.
ಇದಕ್ಕೂ ಪೂರ್ವದಲ್ಲಿ ಕಂಚಿಕೇರಿ ಯಿಂದ ಚೌಡಾಪುರ ಕ್ರಾಸ್ ವರೆಗೂ ರಸ್ತೆ ಅಭಿವೃದ್ದಿಗೆ, ಮತ್ತೂರು ಮಾರ್ಗವಾಗಿ ದುಗ್ಗಾವತ್ತಿ ಹಲುವಾಗಲು ರಸ್ತೆ ಅಭಿವೃದ್ಧಿಗೆ, ಮೈದೂರು ಗ್ರಾಮದಿಂದ ತಾಲೂಕು ಗಡಿ ಭಾಗದವರೆಗೆ ರಸ್ತೆ ಅಭಿವೃದ್ದಿಗೆ ಭೂಮಿ ಪೂಜೆ ನೆರವೇರಿಸಿದರು. ಇಲ್ಲಿ ರೆಡ್ಡಿ ಶಾಂತಕುಮಾರ, ಸುನಿಲಕುಮಾರ ಬಿದ್ರಿ, ನಿಟ್ಟೂರು ಹನುಮಂತಪ್ಪ, ಮತ್ತೂರು ಬಸವರಾಜ ಇದ್ದರು.