ಬಬಲೇಶ್ವರದ ಜನತೆ ಕೊಟ್ಟ ಪ್ರೀತಿ, ವಿಶ್ವಾಸದ ಋಣ ತೀರಿಸಲು ನಿರಂತರ ಅಭಿವೃದ್ಧಿ ಕಾರ್ಯದೊಂದಿಗೆ ಇಲ್ಲಿನ ಮಠಮಾನ್ಯಗಳಿಗೆ ಸದಾ ಬೆನ್ನೆಲುಬಾಗಿ ಇರುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಬಬಲೇಶ್ವರದ ಜನತೆ ಕೊಟ್ಟ ಪ್ರೀತಿ, ವಿಶ್ವಾಸದ ಋಣ ತೀರಿಸಲು ನಿರಂತರ ಅಭಿವೃದ್ಧಿ ಕಾರ್ಯದೊಂದಿಗೆ ಇಲ್ಲಿನ ಮಠಮಾನ್ಯಗಳಿಗೆ ಸದಾ ಬೆನ್ನೆಲುಬಾಗಿ ಇರುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದರು.ಬಬಲೇಶ್ವರದ ಪಟ್ಟಣದ ಶ್ರೀ ಗುರುಪಾದೇಶ್ವರ ಸಂಸ್ಥಾನ ಬೃಹನ್ಮಠದಲ್ಲಿ ನಡೆದ ಡಾ.ಮಹಾದೇವ ಶಿವಾಚಾರ್ಯ ಸ್ವಾಮೀಜಿಗಳ ವಜ್ರ ಮಹೋತ್ಸವ, ತುಲಾಭಾರ ಹಾಗೂ ಗುರು ಪಟ್ಟಾಧಿಕಾರ ಮಹೋತ್ಸವದಲ್ಲಿ ಮಾತನಾಡಿದ ಅವರು, ತಮ್ಮ ತಂದೆಯವರ ಕಾಲದಿಂದಲೂ ತಮ್ಮ ಮೇಲೆ ಬಬಲೇಶ್ವರದವರು ಪ್ರೀತಿ, ಅಭಿಮಾನ ತೋರುತ್ತ ಬಂದಿದ್ದಾರೆ ಎಂದರು.
ಗುರುಪಾದೇಶ್ವರರಿಂದ ಸ್ಥಾಪಿತವಾದ ಈ ಮಠ ಶಾಂತವೀರ ಶ್ರೀಗಳ ಕಾಲದಲ್ಲಿ ರಾಜ್ಯದಲ್ಲೆಲ್ಲ ಹೆಸರಾಯಿತು. ಸದ್ಯ ಹಾನಗಲ್ ಕುಮಾರಸ್ವಾಮಿಗಳ ನೆಲದಿಂದ ಕಿರಿಯ ಶ್ರೀಗಳಾಗಿ ಮಲ್ಲಿಕಾರ್ಜುನ ದೇವರು ಬಂದಿದ್ದು ಸಂತಸದ ಸಂಗತಿ. ನಮ್ಮ ಪೂರ್ವಜರಾದ ಶಿರಸಂಗಿ ಲಿಂಗರಾಜರು ಹಾನಗಲ್ ಶ್ರೀಗಳ ಜತೆಗೆ ಉತ್ತಮ ಬಾಂಧವ್ಯ ಹೊಂದಿ ವೀರಶೈವ ಲಿಂಗಾಯತ ಮಹಾಸಭೆಯ ಸ್ಥಾಪನೆಗೂ ಕಾರಣರಾಗಿದ್ದರು ಎಂದು ನೆನಪಿಸಿಕೊಂಡರು. ಮಠದಲ್ಲಿ ನಿರಂತರ ದಾಸೋಹ ನಡೆಸಲು ₹10 ಲಕ್ಷ ನೀಡುವುದಾಗಿ ಹೇಳಿದ ಸಚಿವರು, ಎಲ್ಲರೂ ಕೈಲಾದ ಸಹಾಯ ನೀಡುತ್ತ ದಾಸೋಹ ಪರಂಪರೆ ಮುಂದುವರಿಸಬೇಕು ಎಂದರು.ಇದಕ್ಕೂ ಮೊದಲು ಶಾಂತವೀರ ಶ್ರೀ ವೃತ್ತದಲ್ಲಿ ನಿರ್ಮಿಸಿರುವ ಸುಂದರವಾದ ಮಂಟಪದಲ್ಲಿನ ಶಾಂತವೀರ ಶ್ರೀಗಳ ಕಂಚಿನ ಪ್ರತಿಮೆ ಹಾಗೂ ಮಠದ ಆವರಣದಲ್ಲಿನ ಶಿಲಾ ಮೂರ್ತಿಯನ್ನು ಸಚಿವರು ಅನಾವಣ ಮಾಡಿದರು.
ವಿಜಯಪುರದ ಅಭಿನವ ಸಿದ್ಧಾರೂಢ ಶ್ರೀಗಳು ಪ್ರಾಸ್ತಾವಿಕ ಮಾತನಾಡಿ, ತಾಯಂದಿರು ತಮ್ಮ ಮಕ್ಕಳನ್ನು ಸನ್ಯಾಸಿಯಾಗಿಸಲು ಸಹಜವಾಗಿ ಒಪ್ಪಲ್ಲ. ಇಲ್ಲಿ ಪಟ್ಟಾಧಿಕಾರಗೊಳ್ಳುತ್ತಿರುವ ಮಲ್ಲಿಕಾರ್ಜುನ ದೇವರ ತಾಯಿ ತಮ್ಮ ಪುತ್ರನನ್ನು ಸನ್ಯಾಸಿಯಾಗಲು ಪುತ್ರನನ್ನು ದಾನ ಮಾಡುತ್ತಿರುವ ಈ ಘಳಿಗೆ ಅನನ್ಯವಾದದ್ದು ಎಂದರು.ಸಾಹಿತಿ ಶಂ.ಗು.ಬಿರಾದಾರ ರಚಿಸಿ, ಮರು ಮುದ್ರಣಗೊಂಡಿರುವ ಬಬಲೇಶ್ವರ ಬೆಳಕು ಕೃತಿಯನ್ನು ಸಚಿವರು ಹಾಗೂ ವೇದಿಕೆಯಲ್ಲಿದ್ದ ಶ್ರೀಗಳು ಬಿಡುಗಡೆ ಮಾಡಿದರು. ಸಚಿವರಿಗೆ ಬೃಹನ್ಮಠದಿಂದ ಕ್ಷೇತ್ರಕ್ಕೆ ಹಾಗೂ ಈ ನಾಡಿಗೆ ಸಲ್ಲಿಸಿರುವ ಅವರ ಸೇವೆಗಾಗಿ ಗೌರವ ಸಮರ್ಪಿಸಿ, ಅಭಿನಂದನಾ ಪತ್ರ ನೀಡಲಾಯಿತು.
ಮರೇಗುದ್ದಿಯ ನಿರುಪಾಧೀಶ್ವರ ಸ್ವಾಮೀಜಿ, ಹಾವೇರಿಯ ಸದಾಶಿವ ಶ್ರೀಗಳು, ಹಿರೇಪಡಸಲಗಿಯ ಸಿದ್ಧಲಿಂಗ ಶ್ರೀ, ಚಿಕ್ಕಪಡಸಲಗಿಯ ಅಭಿನವ ಸಿದ್ದಲಿಂಗ ಶ್ರೀ, ಕಾಖಂಡಕಿಯ ಶಿವಯೋಗಿ ದೇವರು, ಬುರಾಣಪುರದ ಸಿದ್ಧಾರೂಢ ಮಠದ ಯೋಗೇಶ್ವರಿ ಮಾತಾಜಿ, ಮನಗೂಳಿಯ ಸಂಗನಬಸವ ಶ್ರೀ, ಎರಡೆತ್ತಿನಮಠದ ಸಿದ್ದಲಿಂಗ ಮಹಾಸ್ವಾಮಿಗಳು, ಬೊಮ್ಮನಹಳ್ಳಿಯ ಗುರುಶಾಂತ ಶಿವಾಚಾರ್ಯರು, ಚಿಪ್ಪಲಕಟ್ಟಿಯ ಅಭಿನವ ಸಿದ್ದಲಿಂಗ ಶ್ರೀಗಳು, ಶಿವಾನಂದ ಶಿವಾಚಾರ್ಯರು, ಬಸವಕಲ್ಯಾಣ ಶ್ರೀ ಹಾಗೂ ದಾನಮ್ಮ ತಾಯಿ ಸಾನ್ನಿಧ್ಯ ವಹಿಸಿದ್ದರು.ಈ ಸಂದರ್ಭದಲ್ಲಿ ಮುಖಂಡರಾದ ವಿ.ಎನ್.ಬಿರಾದಾರ, ಆರ್.ಜಿ.ಯರನಾಳ, ವಿ.ಎಸ್.ಪಾಟೀಲ, ವಿಡಿಎ ಡಾ.ಅಧ್ಯಕ್ಷ ಗಂಗಾಧರ ಸಂಬಣ್ಣಿ, ಬಿ.ಎಸ್.ಬಿರಾದಾರ, ಶಾಂತವೀರ ಕೊಕಟನೂರ, ಧರ್ಮರಾಜ ಬೀಳೂರು, ಬೋರಮ್ಮ ಬೀಳೂರು, ಗ್ರಂಥ ದಾಸೋಹಿಗಳಾದ ಸಂತೋಷಕುಮಾರ ಅಡಿಹುಡಿ ದಂಪತಿ ಮುಂತಾದವರು ಉಪಸ್ಥಿತರಿದ್ದರು.