ಇತ್ತೀಚೆಗೆ ಪತ್ರಿಕಾಗೋಷ್ಠಿ ನಡೆಸಿ ಸ್ವಪಕ್ಷದ ಹಿರಿಯ ನಾಯಕರ ಬಗ್ಗೆ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದ ಸೂಡಾ ಅಧ್ಯಕ್ಷ ಎಚ್.ಎಸ್ ಸುಂದರೇಶ್ ಅವರು ಶನಿವಾರ ಪತ್ರಿಕಾಗೋಷ್ಠಿ ನಡೆಸಿ ವಿಷಾಧ ವ್ಯಕ್ತಪಡಿಸಿದ್ದು, ಕೆಪಿಸಿಸಿ ಜಾರಿ ಮಾಡಿರುವ ಶೋಕಾಸ್ ನೋಟಿಸ್‌ಗೂ ಬುಧವಾರ ಉತ್ತರ ನೀಡುತ್ತೇನೆ. ಪಕ್ಷ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧನಾಗಿರುವುದಾಗಿ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಇತ್ತೀಚೆಗೆ ಪತ್ರಿಕಾಗೋಷ್ಠಿ ನಡೆಸಿ ಸ್ವಪಕ್ಷದ ಹಿರಿಯ ನಾಯಕರ ಬಗ್ಗೆ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದ ಸೂಡಾ ಅಧ್ಯಕ್ಷ ಎಚ್.ಎಸ್ ಸುಂದರೇಶ್ ಅವರು ಶನಿವಾರ ಪತ್ರಿಕಾಗೋಷ್ಠಿ ನಡೆಸಿ ವಿಷಾಧ ವ್ಯಕ್ತಪಡಿಸಿದ್ದು, ಕೆಪಿಸಿಸಿ ಜಾರಿ ಮಾಡಿರುವ ಶೋಕಾಸ್ ನೋಟಿಸ್‌ಗೂ ಬುಧವಾರ ಉತ್ತರ ನೀಡುತ್ತೇನೆ. ಪಕ್ಷ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧನಾಗಿರುವುದಾಗಿ ತಿಳಿಸಿದ್ದಾರೆ.

ಶನಿವಾರ ಖಾಸಗೀ ಹೋಟೆಲ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ನಾನು ಅನೇಕ ನಾಯಕರ ಬಗ್ಗೆ ಏಕವಚನದಲ್ಲಿ ಮಾತನಾಡಿದ್ದು ತಪ್ಪಾಗಿದೆ. ಅದಕ್ಕಾಗಿ ವಿಷಾದ ವ್ಯಕ್ತಪಡಿಸುತ್ತೇನೆ. ಕೆಪಿಸಿಸಿಯಿಂದ ಬಂದಿರುವ ಶೋಕಾಸ್ ನೋಟಿಸ್‌ಗೆ ಬುಧವಾರ ಉತ್ತರ ನೀಡುತ್ತೇನೆ. ಅವರು ಏನೇನು ಕೇಳಿದ್ದಾರೋ ಅದಕ್ಕೆ ಸಮಜಾಯಿಷಿ ನೀಡಲಿದ್ದು, ಪಕ್ಷ ಕೈಗೊಳ್ಳುವ ನಿರ್ಧಾರಕ್ಕೆ ನಾನು ಬದ್ಧನಾಗಿರುತ್ತೇನೆ ಎಂದು ಹೇಳಿದರು.

ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಮಂಜುನಾಥ್ ಗೌಡ ಹಾಗೂ ಮಂಜುನಾಥ್ ಭಂಡಾರಿ ಅವರ ಕುರಿತು ಏಕವಚನದಲ್ಲಿ ಮಾತನಾಡಿರುವುದು ತಪ್ಪಾಗಿದೆ. ಅವರೆಲ್ಲರೂ ಹಿರಿಯರು ಹಾಗೂ ರಾಜಕೀಯದಲ್ಲಿ ಉತ್ತಮ ಹೆಸರಿರುವವರು, ಅವರ ಬಗ್ಗೆ ವೈಯಕ್ತಿಕವಾಗಿ ಗೌರವವಿದೆ. ಸಚಿವ ಮಧು ಬಂಗಾರಪ್ಪ ಅವರ ಕುರಿತು ಮಾತನಾಡುವ ಸಂದರ್ಭದಲ್ಲಿಯೂ ಏಕವಚನ ಬಳಕೆಯಾಗಿರುವುದು ತಪ್ಪಾಗಿದೆ; ಅವರಿಗೆ ನೀಡಬೇಕಾದ ಗೌರವದ ವಿಚಾರದಲ್ಲಿ ನಾನು ಬದ್ಧನಾಗಿದ್ದೇನೆ. ಆದರೆ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್. ಸಿ. ಯೋಗೇಶ್ ಕುರಿತಾಗಿ ಹಿಂದೆ ನೀಡಿದ್ದ ಹೇಳಿಕೆಗಳಿಗೆ ಈಗಲೂ ನಾನು ಬದ್ಧನಾಗಿದ್ದೇನೆ ಎಂದು ಸ್ಪಷ್ಟಪಡಿಸಿದರು.

ತಮ್ಮ ವಿರುದ್ಧ ನಡೆಯುತ್ತಿರುವ ಚರ್ಚೆಗಳ ಹಿನ್ನೆಲೆಯಲ್ಲಿ ಸೋಮವಾರ ಬೆಳಿಗ್ಗೆ ೧೧ ಗಂಟೆಗೆ ತೀರ್ಥಹಳ್ಳಿಗೆ ತೆರಳುವುದಾಗಿ ಹೇಳಿದರು. ಯಾರಾದರೂ ಬರುವುದಿದ್ದರೆ ಬರಲಿ, ಅವರ ಪ್ರಶ್ನೆಗಳಿಗೆ ವೇದಿಕೆಯಲ್ಲೇ ಉತ್ತರ ನೀಡುತ್ತೇನೆ ಎಂದರು. ತೀರ್ಥಹಳ್ಳಿಗೆ ತೆರಳುತ್ತಿರುವುದು ನಿಮ್ಮ ವಿರುದ್ಧ ಹಾಕಲಾಗಿರುವ ಸವಾಲಿಗೆ ನೀಡುತ್ತಿರುವ ಉತ್ತರವೇ ಎಂಬ ಪ್ರಶ್ನೆಗೆ, ಅಲ್ಲಿ ಸಭೆ ನಡೆಯಲಿದ್ದು, ಆದ್ದರಿಂದ ನಾನು ತೆರಳುತ್ತಿದ್ದೇನೆ ಎಂದು ತಿಳಿಸಿದರು.

ಸಚಿವ ಸ್ಥಾನಕ್ಕೆ ಒತ್ತಾಯ: ಭದ್ರಾವತಿ ಶಾಸಕ ಸಂಗಮೇಶ್ ಹಾಗೂ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂಬ ತಮ್ಮ ಹಿಂದಿನ ಬೇಡಿಕೆಗೆ ಈಗಲೂ ಬದ್ಧನಾಗಿರುವುದಾಗಿ ಹೇಳಿದ ಅವರು, ಬೇಳೂರು ಗೋಪಾಲಕೃಷ್ಣ ಅವರಿಗೆ ಉತ್ತರ ಕನ್ನಡ (ಕಾರವಾರ) ಜಿಲ್ಲಾ ಉಸ್ತುವಾರಿ ಹಾಗೂ ಸಂಗಮೇಶ್ ಅವರಿಗೆ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ನೀಡಬೇಕು ಎಂಬ ಬೇಡಿಕೆಯನ್ನೂ ಅವರು ಪುನರುಚ್ಚರಿಸಿದರು.

ಇದೇ ವೇಳೆ, ಪಕ್ಷದಲ್ಲಿ ಅನೇಕ ಗೊಂದಲಕಾರರಿದ್ದಾರೆ. ಅವರನ್ನೆಲ್ಲ ಪಕ್ಷದಿಂದ ಹೊರಹಾಕಿದಾಗ ಮಾತ್ರ ಪಕ್ಷ ಶುದ್ಧಿಯಾಗಲು ಸಾಧ್ಯ, ಸೂಡಾದಲ್ಲಿ ಕಾರ್ಯಕ್ರಮವೊಂದಿದೆ ಆ ಕಾರ್ಯಕ್ರಮ ಮುಗಿದ ಮೇಲೆ ನಾನು ರಾಜೀನಾಮೆ ನೀಡುತ್ತೇನೆ. ಪಕ್ಷ ಯಾವುದೇ ಜವಾಬ್ದಾರಿ ಕೊಟ್ಟರು ನಾನು ನಿರ್ವಹಿಸುತ್ತೇನೆ ಎಂದರು.

ಮಧುಬಂಗಾರಪ್ಪ ಡಿಕೆಶಿಯ ಮುದ್ದು ಕಂದ

ಸಚಿವ ಮಧುಬಂಗಾರಪ್ಪನವರನ್ನು ಡಿ.ಕೆ. ಶಿವಕುಮಾರ್ ಅವರ ಮುದ್ದುಕಂದ ಎಂದು ವ್ಯಂಗ್ಯವಾಡಿದ ಎಚ್‌.ಎಸ್‌. ಸುಂದರೇಶ್, ಎರಡನೇ ಬಾರಿ ಮಧು ಬಂಗಾರಪ್ಪನವರನ್ನ ಸಚಿವರನ್ನಾಗಿ ಮಾಡುವಾಗ ಸಿಎಂ ಡಿ.ಕೆ. ಶಿವುಕುಮಾರ್‌ಗೆ ಅವರಿಗೆ ಬೇಡ ಎಂದು ನಾನು ಹೇಳಿದ್ದೆ. ಅದಕ್ಕೆ ಸಿಎಂ ಸಚಿವರನ್ನು ಮುದ್ದು ಕಂದ ಎಂದಿದ್ದರು. ನಾನು ಅದಕ್ಕೆ ಮುದ್ದು ಕಂದನನ್ನು ಕನಕಪುರ ಹಾಗೂ ರಾಮನಗರಕ್ಕೆ ಇಟ್ಟುಕೊಳ್ಳಿ ಎಂದು ಹೇಳಿದ್ದೆ ಎಂದು ಮತ್ತೆ ವಾಗ್ದಾಳಿ ನಡೆಸಿದರು.