ವರಿಷ್ಠರ ನೋಟಿಸ್‌ಗೆ 72 ತಾಸೊಳಗೆ ಉತ್ತರಿಸುತ್ತೇನೆ: ಹರೀಶ

| Published : Mar 27 2025, 01:03 AM IST

ವರಿಷ್ಠರ ನೋಟಿಸ್‌ಗೆ 72 ತಾಸೊಳಗೆ ಉತ್ತರಿಸುತ್ತೇನೆ: ಹರೀಶ
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿ ಹೈಕಮಾಂಡ್‌ ಶೋಕಾಸ್ ನೋಟಿಸ್‌ ನೀಡಿದ್ದರಿಂದ ಉತ್ತರ ನೀಡಲು ನಮಗೆ ಅವಕಾಶ ಸಿಕ್ಕಂತಾಗಿದೆ. ನಿಗದಿಪಡಿಸಿದ ಅವಧಿಯಲ್ಲೇ ಉತ್ತರ ನೀಡುತ್ತೇನೆ ಎಂದು ಹರಿಹರ ಶಾಸಕ ಬಿ.ಪಿ.ಹರೀಶ ದಾವಣಗೆರೆಯಲ್ಲಿ ಹೇಳಿದ್ದಾರೆ.

- ದಾವಣಗೆರೆ ಲೋಕಸಭೆ ಸೋಲಿನ ಬಗ್ಗೆಯೂ ಉತ್ತರಿಸುವೆ । ನೋಟಿಸ್ ನೀಡಿಕೆಯಲ್ಲಿ ವಿಜಯೇಂದ್ರ ಕೈವಾಡ ಇಲ್ಲ - - - ಕನ್ನಡಪ್ರಭ ವಾರ್ತೆ ದಾವಣಗೆರೆ

ಬಿಜೆಪಿ ಹೈಕಮಾಂಡ್‌ ಶೋಕಾಸ್ ನೋಟಿಸ್‌ ನೀಡಿದ್ದರಿಂದ ಉತ್ತರ ನೀಡಲು ನಮಗೆ ಅವಕಾಶ ಸಿಕ್ಕಂತಾಗಿದೆ. ನಿಗದಿಪಡಿಸಿದ ಅವಧಿಯಲ್ಲೇ ಉತ್ತರ ನೀಡುತ್ತೇನೆ ಎಂದು ಹರಿಹರ ಶಾಸಕ ಬಿ.ಪಿ.ಹರೀಶ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಸೋಲಿಗೆ ಯಾರು ಕಾರಣವೆಂಬುದನ್ನು ಈಗಾಗಲೇ ಹೇಳಿದ್ದೇವೆ. ಬಿಜೆಪಿಯ ಕೆಲವು ನಾಯಕರು ಕಾಂಗ್ರೆಸ್‌ನವರ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಇದುವರೆಗೂ ಗಾಯತ್ರಿ ಸಿದ್ದೇಶ್ವರ ಸೋಲಿನ ಬಗ್ಗೆ ಪಕ್ಷದಲ್ಲಿ ಆತ್ಮಾವಲೋಕನ ಸಭೆಯೇ ನಡೆದಿಲ್ಲ ಎಂದರು.

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿನ ಬಗ್ಗೆ ಆತ್ಮಾವಲೋಕನ ಸಭೆ ಕರೆಯದ ಇಂತಹ ವಿಶೇಷ ವಿಚಾರವನ್ನೂ ಸಮಿತಿ ಮುಂದೆ ತರುತ್ತೇನೆ. 72 ಗಂಟೆಯಲ್ಲೇ ನಮ್ಮ ಪಕ್ಷದ ವರಿಷ್ಠರ ಗಮನಕ್ಕೆ ಈ ಎಲ್ಲ ಸಂಗತಿಯನ್ನೂ ತರುತ್ತೇನೆ. ಮೇಲಾಗಿ ಪಕ್ಷದಲ್ಲಿ ಹೊಂದಾಣಿಗೆ ರಾಜಕೀಯ ನಡೆಯುತ್ತಿದ್ದು, ಅದು ಮೊದಲು ಕೊನೆಗೊಳ್ಳಬೇಕು ಎಂದು ಹೇಳಿದರು.

ಎಲ್ಲರೂ ಒಂದಾಗಬೇಕೆಂಬುದೇ ನಮ್ಮ ಗುರಿಯಾಗಿದೆ. ಕಾಂಗ್ರೆಸ್‌ ಜೊತೆಗೆ ಹೊಂದಾಣಿಕೆ ಮಾಡಿಕೊಂಡವರಿಗೆ ಉತ್ತರಿಸಲು ಅವಕಾಶವೂ ಶೋಕಾಸ್ ನೋಟಿಸ್ ಮೂಲಕ ಸಿಕ್ಕಿದೆ. ವಿಜಯೇಂದ್ರ ಅವರ ಪಕ್ಷ ವಿರೋಧಿ ನೀತಿ ಬಗ್ಗೆ ಮಾತನಾಡಿದ್ದಕ್ಕೆ ನನಗೆ ತೊಂದರೆಯಾಗಿದೆ. ನೋಟಿಸ್ ವಿಚಾರದಲ್ಲಿ ಬಿ.ವೈ.ವಿಜಯೇಂದ್ರ ಕೈವಾಡ ಇಲ್ಲ ಎಂದು ಸ್ಪಷ್ಟಪಡಿಸಿದರು.

- - -

(ಬಾಕ್ಸ್‌) * ಕಾಂಗ್ರೆಸ್‌ ಹೈಕಮಾಂಡ್‌ ರಾಜಣ್ಣನ ಬಾಯಿ ಮುಚ್ಚಿದೆ?

- ಡಿಕೆಶಿ ಸಂವಿಧಾನ ಬದಲಾವಣೆ ಮಾತು ಹೇಳಬಾರದಿತ್ತು: ಹರಿಹರ ಶಾಸಕ ಕನ್ನಡಪ್ರಭ ವಾರ್ತೆ ದಾವಣಗೆರೆ

ಹನಿಟ್ರ್ಯಾಪ್ ವಿಚಾರದ ವಿರುದ್ಧ ಧ್ವನಿ ಎತ್ತಿದ್ದ ಸಹಕಾರ ಸಚಿವ ಕೆ.ಎನ್.ರಾಜಣ್ಣಗೆ ಕಾಂಗ್ರೆಸ್ ಹೈಕಮಾಂಡ್ ಸೈಲೆಂಟ್ ಮಾಡಿರುವ ಶಂಕೆ ಇದೆ ಎಂದು ಹರಿಹರದ ಬಿಜೆಪಿ ಶಾಸಕ ಬಿ.ಪಿ. ಹರೀಶ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದನದಲ್ಲೇ ಸಚಿವ ರಾಜಣ್ಣ ಹನಿಟ್ರ್ಯಾಪ್ ವಿಚಾರ ಪ್ರಸ್ತಾಪಿಸಿದ್ದು, ಇದರೊಂದಿಗೆ ಕಾಂಗ್ರೆಸ್ ಪಕ್ಷದ ಬಹುತೇಕ ನಾಯಕರ ಮಾನವೇ ಹರಾಜಾಗಿದೆ. ಇದು ಕಾಂಗ್ರೆಸ್ ಪಕ್ಷಕ್ಕೂ ಮುಜುಗರ ತಂದಿದೆ ಎಂದರು.

ಸಚಿವ ರಾಜಣ್ಣ ಹೋರಾಟಗಾರ. ಯಾವುದಕ್ಕೂ ಜಗ್ಗುವ ಮನುಷ್ಯನಲ್ಲ. ಇಂತಹ ರಾಜಣ್ಣನ ಬಾಯಿ ಮುಚ್ಚಿಸುವ ಕೆಲಸ ಕಾಂಗ್ರೆಸ್ ಹೈಕಮಾಂಡ್ ಮಾಡಿದಂತಿದೆ. ಸದ್ಯ ಇಂತಹದ್ದೊಂದು ಬೆಳವಣಿಗೆ ಕಾಂಗ್ರೆಸ್‌ನಲ್ಲಿ ಆಗಿರುವುದು ನಿಜಕ್ಕೂ ಕುತೂಹಲಕಾರಿಯಾಗಿದೆ ಎಂದು ತಿಳಿಸಿದರು.

ರಾಜ್ಯದ ಹನಿಟ್ರ್ಯಾಪ್ ವಿಚಾರಕ್ಕೆ ಕೆಲವು ರಾಜಕಾರಣಿಗಳ ಬಗ್ಗೆಯೇ ಅಸಹ್ಯ ಉಂಟು ಮಾಡಿದೆ. ಹನಿಟ್ರ್ಯಾಪ್ ವಿಚಾರವಾಗಿ ಸದನದಲ್ಲಿ ಹೋರಾಟ ನಡೆಸಿದ ಸಂಬಂಧ ತಾವು ಸೇರಿದಂತೆ ಬಿಜೆಪಿ ಶಾಸಕರನ್ನು 6 ತಿಂಗಳ ಕಾಲ ಸಸ್ಪೆಂಡ್ ಮಾಡಿದ್ದು, ಅಮಾನತು ಆದೇಶ ವಾಪಸ್‌ ಪಡೆಯುವ ವಿಶ್ವಾಸವಿದೆ ಎಂದರು.

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಬಣಗಳ ಬಡಿದಾಟದಲ್ಲಿ ಡಿಕೆಶಿ ಸ್ಥಿಮಿತ ಕಳೆದುಕೊಂಡಿದ್ದಾರೆ. ಸಂವಿಧಾನ ಬದಲಾವಣೆಯ ಮಾತುಗಳನ್ನು ಡಿ.ಕೆ.ಶಿವಕುಮಾರ ಹೇಳಬಾರದಿತ್ತು. ಸಂವಿಧಾನ ಬದಲಾವಣೆಯ ಮಾತನ್ನು ಯಾವ ದೇಶಭಕ್ತನೂ ಒಪ್ಪುವುದಿಲ್ಲ. ಸಂವಿಧಾನ ವಿಚಾರದಲ್ಲಿ ಅಂಬೇಡ್ಕರ್ ಹೇಳಿದ್ದಕ್ಕೆ ವಿರೋಧವಾಗಿ ಕೆಪಿಸಿಸಿ ಅಧ್ಯಕ್ಷರೂ ಆದ ಡಿ.ಕೆ.ಶಿವಕುಮಾರ ನಡೆದುಕೊಳ್ಳುತ್ತಿದ್ದಾರೆ. ಅವರು ಸ್ಥಿಮಿತತೆ ಕಳೆದುಕೊಂಡಿದ್ದಾರೆ. ಇದಕ್ಕಿಂತ ಹೆಚ್ಚಿನದನ್ನು ಡಿಕೆಶಿ ಬಗ್ಗೆ ಮಾತನಾಡಲಾರೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

- - - -26ಕೆಡಿವಿಜಿ1, 2: ಬಿ.ಪಿ.ಹರೀಶ