ಸಾರಾಂಶ
ಬೀದರ್ : ಮಹಾತ್ಮ ಬಸವಣ್ಣನವರ ಬಗ್ಗೆ ಅವಹೇಳನಾಕಾರಿಯಾಗಿ ಮಾತನಾಡಿರುವ ವಿಜಯಪೂರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ತಪ್ಪೊಪ್ಪಿಕೊಂಡು ಲಿಂಗಾಯತರ ಕ್ಷಮೆ ಕೇಳದಿದ್ರೆ ಮುಂದಿನ ಬಾರಿ ಸೋಲು ಖಚಿತ, ಸೋಲದಿದ್ರೆ ನಾನೇ ಪೀಠ ತ್ಯಾಗ ಮಾಡುವೆ ಎಂದು ಹುಲಸೂರು ಶ್ರೀ ಗುರುಬಸವೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಶಿವಾನಂದ ಸ್ವಾಮಿಗಳು ಸವಾಲೆಸೆದಿದ್ದಾರೆ.
ಅವರು ಹುಲಸೂರು ಪಟ್ಟಣದ ಅಲ್ಲಮಪ್ರಭು ಶೂನ್ಯಪೀಠದ ಆವರಣದಲ್ಲಿ ನಡೆಯುತ್ತಿರುವ ಶರಣ ಸಂಸ್ಕೃತಿ ಉತ್ಸವ ಹಾಗೂ ವಚನ ರಥೋತ್ಸವ ಅಂಗವಾಗಿ ಭಾನುವಾರ ರಾತ್ರಿಯ ಆಶೀರ್ವಚನ ಕಾರ್ಯಕ್ರಮದಲ್ಲಿ ಮಾತನಾಡಿ, ಯತ್ನಾಳ್ ಅವರು ಕ್ಷಮೆ ಕೇಳದಿದ್ದಲ್ಲಿ ಇಲ್ಲಿಂದ ಓಡಿಸುವ ಯೋಜನೆಯನ್ನು ಕರ್ನಾಟಕದ ಜನತೆ ಹಾಕಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಬಸವಣ್ಣನ ಬಗ್ಗೆ ಹಗುರವಾಗಿ ಮಾತನಾಡುವವರು ಎಚ್ಚರಗೊಳ್ಳಲಿ. ನಾಲಿಗೆ ಬಿಗಿ ಹಿಡಿದು ಮಾತನಾಡಲಿ. ಯತ್ನಾಳ್ ಎಷ್ಟೇ ಸಿರಿವಂತ ರಾಗಿರಲಿ, ಶಾಸಕರಾಗಿರಲಿ. ದೀನ ದಲಿತರೂ ಉಗಿಯುವಂಥ ಕೆಲಸವನ್ನು ಮಾಡಿದ್ದಾರೆ. ಹೀಗಾಗಿ ಕರ್ನಾಟದ ಪ್ರತಿಯೊಬ್ಬರ ಬಳಿ ಕ್ಷಮೆ ಕೇಳಿದಲ್ಲಿ ಬಿಡ್ತೇವೆ, ಇಲ್ಲಾಂದ್ರೆ ಲಿಂಗಾಯತರೆಲ್ಲ ಸೇರಿ ಬಹುದೊಡ್ಡ ಹೋರಾಟ ಮಾಡ್ತೇವೆ ಎಂದು ಹುಲಸೂರು ಶಿವಾನಂದ ಸ್ವಾಮಿಗಳು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಚನ್ನಬಸವಾನಂದ ಸ್ವಾಮಿಗಳು, ಬೀದರ್ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಹಾಗೂ ಬಸವಕಲ್ಯಾಣ ಬಿಜೆಪಿ ಶಾಸಕ ಶರಣು ಸಲಗರ ಸೇರಿದಂತೆ ಮತ್ತಿತರರು ಇದ್ದರು.