ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ: ಸಾಹಿತ್ಯಕ್ಕೆ ಸಮಾಜ ತಿದ್ದುವ ಶಕ್ತಿ ಇದ್ದು, ಸತ್ವಭರಿತ ಸಾಹಿತ್ಯ ಸಮಾಜವನ್ನು ಪರಿವರ್ತನೆ ಮಾಡುತ್ತದೆ. ಇಂದಿನ ಆಧುನಿಕ ಕವಿಗಳು ಹೆಚ್ಚಿನ ಅಧ್ಯಯನ ಮಾಡಬೇಕು. ಒಳ್ಳೆಯ ಅನುಭವಗಳು ದೊರೆಯುವುದರಿಂದ ಗಟ್ಟಿ ಸಾಹಿತ್ಯ ರಚಿಸಬಹುದು ಎಂದು ಮಂಗಳೂರಿನ ಹಿರಿಯ ಕವಿ ರಾಧಾಕೃಷ್ಣ ಹೇಳಿದರು.ನಗರದ ಚೇತನಾ ಕಾಲೇಜು ಆವರಣದಲ್ಲಿ ನಡೆದ ಕನ್ನಡ ಪುಸ್ತಕ ಪರಿಷತ್ ಸಮ್ಮೇಳನದಲ್ಲಿ ಸುವರ್ಣ ಕರ್ನಾಟಕ ಕಾವ್ಯೋತ್ಸವ ಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು. ಅನುಭವಗಳು ಕಾವ್ಯಕ್ಕೆ ಇಳಿದಾಗ, ಕಾವ್ಯಜ್ಞಾನ ಶ್ರೀಮಂತಿಕೆ ಹೊಂದುತ್ತದೆ. ಕವಿಗಳಾದವರು ಒಂದೇ ಜಾತಿಯ, ಒಂದೇ ಸಿದ್ಧಾಂತದ ಬೆನ್ನು ಹತ್ತಬಾರದು. ಸಮಾಜವನ್ನು ಪರಿವರ್ತನೆ ಮಾಡುವ ಕೆಲಸ ಕವಿಗಳಿಂದ ಆಗಬೇಕಿದೆ. ಪೆನ್ನು ಖಡ್ಗಗಿಂತ ಹರಿತವಾದದ್ದು, ಕವಿಗಳು ಬರೆಯುವ ಕವನಗಳು ಸಮ ಸಮಾಜದ ಪರಿಕಲ್ಪನೆಯನ್ನು ಒಳಗೊಂಡಿರಬೇಕು ಎಂದು ಅಭಿಪ್ರಾಯಪಟ್ಟರು.ಹಿರಿಯ ಸಾಹಿತಿ ಭಾರತಿ ಪಾಟೀಲ ಮಾತನಾಡಿ, ಕಾವ್ಯ ಎಂದೆಂದಿಗೂ ಜೀವಂತವಾಗಿರಬೇಕು. ಸರ್ವಕಾಲಕ್ಕೂ ಕಾವ್ಯ ತನ್ನ ಶಕ್ತಿಯನ್ನು ಕಳೆದುಕೊಳ್ಳಬಾರದು. ಶಕ್ತಿಯುತವಾದ ಕಾವ್ಯವನ್ನು ರಚಿಸುವ ಕವಿಗಳು ಹೆಚ್ಚಾಗಬೇಕು ಎಂದರು.
ಸಮ್ಮೇಳನದ ಸರ್ವಾಧ್ಯಕ್ಷ ಡಾ.ಪ್ರಕಾಶ ಖಾಡೆ, ಪರಿಷತ್ತಿನ ಸಂಚಾಲಕ ಎ.ಎಚ್.ಕೊಳಮಲಿ, ಅಧ್ಯಕ್ಷ ಪ.ಗು.ಸಿದ್ದಾಪುರ, ಪ್ರಧಾನ ಕಾರ್ಯದರ್ಶಿ ಶಂಕರ ಬೈಚಬಾಳ, ಸಿದ್ದರಾಮ ಬಿರಾದಾರ, ಡಿ.ಜೋಶಪ್ಪ, ಕೆ.ಎಸ್.ಬಾಗೇವಾಡಿ, ಗುರುಪಾದ ಬೈಚಬಾಳ ಉಪಸ್ಥಿತರಿದ್ದರು. ಸುಜ್ಞಾನಿ ಪಾಟೀಲ, ತ್ರಿವೇಣಿ ಬನಸೋಡೆ, ಸೋಮನಿಂಗ ಅಂಗಡಿ, ಮಹಾದೇವಿ ಪಾಟೀಲ, ಪ್ರಕಾಶ ಜಹಗೀರದಾರ, ಎಸ್.ಎಸ್.ಸಾತಿಹಾಳ, ಶಿವಾಜಿ ಮೋರೆ, ಪ್ರತಿಭಾ ತೊರವಿ, ಸಂತೋಷ ಬಂಡೆ, ಸೋಮು ಹಿಪ್ಪರಗಿ, ನಾಗಮ್ಮ ಉಮ್ಮರ್ಜಿ, ಅಶೋಕ ಗೆಣ್ಣೂರ, ಆಕಾಶ ಮ್ಯಾಗೇರಿ ಕವನ ವಾಚನ ಮಾಡಿದರು.