ರಾಜ್ಯದೆಲ್ಲೆಡೆ ಪ್ರವಾಸ ಮಾಡಿ ರೈತರ ಸಂಕಷ್ಟ ಕೇಳುತ್ತೇನೆ: ಬಿ.ಎಸ್‌. ಯಡಿಯೂರಪ್ಪ

| Published : Jan 15 2024, 01:46 AM IST

ಸಾರಾಂಶ

ಪ್ರಸಕ್ತ ವರ್ಷ ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗುವ ಸಾಧ್ಯತೆಯಿದ್ದು, ನೀರು ತಂದು ರೈತರ ಬಾಳು ಬೆಳಗುವ ಕೆಲಸ ಮಾಡಲಾಗುತ್ತಿಲ್ಲ. ರಾಜ್ಯದೆಲ್ಲೆಡೆ ಪ್ರವಾಸ ಮಾಡಿ ರೈತರ ಸಂಕಷ್ಟ ಕೇಳುತ್ತೇನೆ.

ಕನ್ನಡಪ್ರಭ ವಾರ್ತೆ ಬ್ಯಾಡಗಿ

ಕೆರೆಕಟ್ಟೆಗಳನ್ನು ನಿರ್ಮಿಸಿ ಕಳೆದ 800 ವರ್ಷಗಳ ಹಿಂದೆ ಶ್ರೀ ಗುರುಸಿದ್ಧರಾಮೇಶ್ವರರ ಮಾಡಿದ ಪುಣ್ಯದ ಕೆಲಸವನ್ನು ನಾವೆಲ್ಲ ನೆನೆಸಿಕೊಳ್ಳುವಂತಾಗಿದೆ. ಪ್ರಸಕ್ತ ವರ್ಷ ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗುವ ಸಾಧ್ಯತೆಯಿದ್ದು, ನೀರು ತಂದು ರೈತರ ಬಾಳು ಬೆಳಗುವ ಕೆಲಸ ಮಾಡಲಾಗುತ್ತಿಲ್ಲ. ರಾಜ್ಯದೆಲ್ಲೆಡೆ ಪ್ರವಾಸ ಮಾಡಿ ರೈತರ ಸಂಕಷ್ಟ ಕೇಳುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.

ತಾಲೂಕಿನ ಚಿಕ್ಕಬಾಸೂರ ಗ್ರಾಮದಲ್ಲಿ ಎರಡು ದಿನ ಆಯೋಜಿಸಲಾಗಿರುವ ಶ್ರೀ ಗುರು ಸಿದ್ದರಾಮೇಶ್ವರ 851ನೇ ಜಯಂತಿ ಹಾಗೂ ಲಿಂಗಾಯತ ನೊಳಂಬ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಕಾಯಕಕ್ಕೆ ಮತ್ತೊಂದು ಹೆಸರು ಸಿದ್ಧರಾಮೇಶ್ವರರು, ಅವರ ದೂರದೃಷ್ಟಿ ವಿಚಾರಗಳಿಂದ ನಾವೆಲ್ಲರೂ ನೀರಿನ ಸಮಸ್ಯೆಯಿಂದ ಮುಕ್ತವಾಗಿದ್ದೇವೆ, ಆದರೆ ಅವರ ಹೆಸರಿನಲ್ಲಿ ಇಂದಿಗೂ ನಾವ್ಯಾರೂ ಕೆರೆಕಟ್ಟೆಗಳನ್ನು ನಿರ್ಮಿಸಲು ಸಾಧ್ಯವಾಗಿಲ್ಲ. ಆದರೆ ನನ್ನ ಅಧಿಕಾರದ ಅವಧಿಯಲ್ಲಿ ಸಾವಿರಾರು ಕೋಟಿ ರೂ. ಅನುದಾನ ನೀಡುವ ಮೂಲಕ ಶ್ರೀಗಳು ನಿರ್ಮಿಸಿದಂತಹ ಕೆರೆಗಳಿಗೆ ನೀರು ಹರಿಸುವ ಪ್ರಯತ್ನ ಮಾಡಿದ್ದೇನೆ ಎಂದರು.

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಗುರು ಸಿದ್ಧರಾಮೇಶ್ವರರು ಕಾಯಕದಿಂದ ಶಿವಯೋಗ ಸ್ವೀಕರಿಸಿದವರು, ಆದರೆ ಇತ್ತೀಚೆಗೆ ಕಾಯಕ ಮಾಡದೇ ಶ್ರೀಮಂತರಾಗುವ ಮನೋಭಾವ ಬೆಳೆಸಿಕೊಳ್ಳುತ್ತಿರುವುದು ದುರಂತ ಎಂದರು.

ಪ್ರಜಾಪ್ರಭುತ್ವದಲ್ಲಿ ಸಂಖ್ಯಾಬಲದಿಂದ ಎಲ್ಲವೂ ನಿರ್ಣಯವಾಗುತ್ತದೆ. ಸಂಘಟಿತರಾಗಿ ತಮ್ಮ ಸಂಖ್ಯಾಬಲವನ್ನು ತಿಳಿಸುವ ಪ್ರಯತ್ನಗಳು ನಡೆಯಬೇಕಾಗಿದೆ. ಸಮಾಜದಿಂದ ನಮಗೇನಾಗಿದೆ ಎನ್ನುವುದಕ್ಕಿಂತ ಸಮಾಜಕ್ಕಾಗಿ ನಾವು ಏನು ಮಾಡಿದ್ದೇವೆ ಎಂಬುದು ಬಹಳ ಮುಖ್ಯವಾಗಿದೆ. ಮುಂದೊಂದು ದಿವಸ ಪ್ರಸ್ತುತ ಸಮಾಜ ದೇಶದ ಆಸ್ತಿಯಾಗಲಿದೆ ಎಂದರು.

ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ ಮಾತನಾಡಿ, ಸಾಮಾಜಿಕ ಸಮಾನತೆಯನ್ನು ನೇರವಾಗಿ ಹೇಳಿದ್ದೇ ಲಿಂಗಾಯತ ಧರ್ಮ, ಹೀಗಾಗಿ ಲಿಂಗಾಯತ ಸಮಾಜ ಅಶಕ್ತವಲ್ಲ, ನಮ್ಮಲ್ಲಿ ಎಲ್ಲವೂ ಇದೇ. ನಮ್ಮ ಶಕ್ತಿಯನ್ನು ಅರಿತುಕೊಳ್ಳಲಾಗದೇ ಇನ್ನೊಬ್ಬರ ಹೇಳಿಕೆ ಮಾತು ಕೇಳುವಂತಹ ಮನಸ್ಥಿತಿಗೆ ಬಂದಿರುವುದು ದುರಂತ ಎಂದರು.

ಕಾರ್ಯಕ್ರಮದಲ್ಲಿ ಸಿರಿಗೆರೆ ತರಳಬಾಳು ಬೃಹ್ಮನ್ಮಠದ ಶಿವಮೂರ್ತಿ ಶಿವಾಚಾರ್ಯ ಶ್ರೀ, ನಂದಿಗುಡಿಮಠದ ಸಿದ್ದರಾಮೇಶ್ವರ ಶ್ರೀ, ಮಡ್ಲೂರಿನ ಮುರುಘರಾಜೇಂದ್ರ ಶ್ರೀ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಶಾಸಕ ಬಸವರಾಜ ಶಿವಣ್ಣವರ, ಹರಿಹರ ಶಾಸಕ ಬಿ.ಪಿ. ಹರೀಶ್, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಮಾಜಿ ಶಾಸಕರಾದ ವಿರೂಪಾಕ್ಷಪ್ಪ ಬಳ್ಳಾರಿ, ಸುರೇಶಗೌಡ ಪಾಟೀಲ, ಶಿವರಾಜ ಸಜ್ಜನ ಇತರರಿದ್ದರು.

ಇದೇ ವೇಳೆ ಸುರೇಂದ್ರಪ್ಪ ಕಿರವಾಡಿ ಇವರಿಗೆ ನೊಳಂಬಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು, ಎಂ.ಕೆ. ಭಾಗ್ಯ ರಚಿಸಿದ ಅಜ್ಜಯ್ಯನ ಗ್ರಂಥವನ್ನು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಿಡುಗಡೆಗೊಳಿಸಿದರು. ಸೋಮಲಿಂಗಪ್ಪ ಕಣಗಲಭಾವಿ ಸ್ವಾಗತಿಸಿದರು, ನೊಳಂಬ ಸಮಾಜದ ರಾಜ್ಯಾಧ್ಯಕ್ಷ ಎಸ್.ಆರ್. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಸವಿತಾ ಶಿವಕುಮಾರ ನಿರೂಪಿಸಿದರು.