ಮುಂಡರಗಿ ಪಟ್ಟಣದ ಅನ್ನದಾನೀಶ್ವರ ಸಂಸ್ಥಾನ ಮಠಕ್ಕೆ ಗುರುವಾರ ಸಂಜೆ ಭೇಟಿ ವಿಧಾನಸಭಾಧ್ಯಕ್ಷ ಜಿ.ಎಸ್. ಪಾಟೀಲ ನೀಡಿ, ಜ. ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳವರ ಆಶೀರ್ವಾದ ಪಡೆದರು.
ಮುಂಡರಗಿ: ಜನರ ಮತ್ತು ಶ್ರೀಗಳ ಆಶೀರ್ವಾದದಿಂದ ತಮಗೆ ಸಂವಿಧಾನಬದ್ಧವಾದ ಅತ್ಯುನ್ನತ ಸಭಾಧ್ಯಕ್ಷ ಸ್ಥಾನ ಲಭಿಸಿದ್ದು, ಈ ಪೀಠದ ಘನತೆ-ಗೌರವ ಕಾಪಾಡಿಕೊಂಡು ಮುಂಡರಗಿ ತಾಲೂಕು ಸೇರಿದಂತೆ ಗದಗ ಜಿಲ್ಲೆ ಹಾಗೂ ಇಡೀ ನಾಡಿನ ಸಮಗ್ರ ಅಭಿವೃದ್ಧಿಗೆ ಶ್ರಮಿಸುವುದಾಗಿ ವಿಧಾನಸಭಾಧ್ಯಕ್ಷ ಜಿ.ಎಸ್. ಪಾಟೀಲ ಹೇಳಿದರು.
ಪಟ್ಟಣದ ಅನ್ನದಾನೀಶ್ವರ ಸಂಸ್ಥಾನ ಮಠಕ್ಕೆ ಗುರುವಾರ ಸಂಜೆ ಭೇಟಿ ನೀಡಿ, ಜ. ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳವರ ಆಶೀರ್ವಾದ ಪಡೆದ ಬಳಿಕ ಅವರು ಮಾತನಾಡಿದರು. ಸಮಾಜಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ಶ್ರೀಗಳ ಆಶೀರ್ವಾದ ನನ್ನ ಮೇಲಿರುವುದರಿಂದಲೇ ಇಂತಹ ಉನ್ನತ ಸ್ಥಾನ ಅಲಂಕರಿಸಲು ಸಾಧ್ಯವಾಗಿದೆ. ಕ್ಷೇತ್ರದ ಮತದಾರರು ಹಾಗೂ ಅಭಿಮಾನಿಗಳು ನಾನು ಮಂತ್ರಿಯಾಗಬೇಕೆಂದು ಅಪೇಕ್ಷಿಸಿದ್ದರು, ಅದಕ್ಕಾಗಿ ಪಾದಯಾತ್ರೆ, ಹೋರಾಟಗಳನ್ನೂ ಮಾಡಿದ್ದರು. ಸಚಿವ ಸ್ಥಾನ ಲಭಿಸಿದರೆ ಕೇವಲ ಒಂದು ಇಲಾಖೆಗೆ ಸೀಮಿತವಾಗಬೇಕಿತ್ತು. ಆದರೆ ಇಂದು ದೊರೆತಿರುವ ಸಭಾಧ್ಯಕ್ಷ ಸ್ಥಾನದಿಂದ ಮುಖ್ಯಮಂತ್ರಿ ಸೇರಿದಂತೆ ಎಲ್ಲ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ, ಕ್ಷೇತ್ರದಲ್ಲಿ ಬಾಕಿ ಉಳಿದಿರುವ ಅಭಿವೃದ್ಧಿ ಕಾಮಗಾರಿಗಳನ್ನು ಕ್ಷಿಪ್ರಗತಿಯಲ್ಲಿ ಪೂರ್ಣಗೊಳಿಸಲು ಹೆಚ್ಚಿನ ಶಕ್ತಿ ಬಂದಿದೆ ಎಂದು ಹೇಳಿದರು.ನಾನೀಗ ರೋಣ ಕ್ಷೇತ್ರಕ್ಕಷ್ಟೇ ಸೀಮಿತವಾಗಿಲ್ಲ. ಇಡೀ ಗದಗ ಜಿಲ್ಲೆ ಸೇರಿದಂತೆ ನಾಡಿನಾದ್ಯಂತ ದೀರ್ಘಕಾಲದ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಈ ಜವಾಬ್ದಾರಿಯುತ ಸ್ಥಾನದಲ್ಲಿ ನಿಷ್ಪಕ್ಷಪಾತವಾಗಿ, ಗೌರವಯುತವಾಗಿ ಕಾರ್ಯನಿರ್ವಹಿಸಲು ಎಲ್ಲರ ಪ್ರೀತಿ-ವಿಶ್ವಾಸ ಹೀಗೆಯೇ ಇರಲಿ ಎಂದರು.
ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಮಾತನಾಡಿ, ಜಿ.ಎಸ್. ಪಾಟೀಲ ಅವರು ವಿಧಾನಸಭೆಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿರುವುದು ಇಡೀ ಗದಗ ಜಿಲ್ಲೆಗೆ ಹೆಮ್ಮೆ ತರುವ ಸಂಗತಿಯಾಗಿದೆ. ಅವರ ಘನತೆ, ವ್ಯಕ್ತಿತ್ವ ಮತ್ತು ಸುದೀರ್ಘ ರಾಜಕೀಯ ಅನುಭವಕ್ಕೆ ತಕ್ಕ ಗೌರವ ದೊರೆತಿದೆ. ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ನಡೆದ ಅಧಿವೇಶನವನ್ನು ಯಾರಿಗೂ ನೋವಾಗದಂತೆ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅತ್ಯಂತ ಯಶಸ್ವಿಯಾಗಿ ಮುನ್ನಡೆಸುವ ಮೂಲಕ ಸಭಾಧ್ಯಕ್ಷ ಪೀಠಕ್ಕೆ ಸೂಕ್ತ ನ್ಯಾಯ ಒದಗಿಸಿದ್ದಾರೆ ಎಂದರು.ಜ. ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳವರು ಮಾತನಾಡಿ, ಜಿ.ಎಸ್. ಪಾಟೀಲ ಅವರ ಕುಟುಂಬಕ್ಕೂ ಹಾಗೂ ಅನ್ನದಾನೀಶ್ವರ ಮಠಕ್ಕೂ ಅವಿನಾಭಾವ ಸಂಬಂಧವಿದೆ. ಎಲ್ಲರನ್ನೂ ಸಮಾನವಾಗಿ ಕಂಡು, ಈ ಸಾಂವಿಧಾನಿಕ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸುವ ಹಾಗೂ ನಾಡಿಗೆ ಉತ್ತಮ ಸೇವೆ ಸಲ್ಲಿಸುವ ಶಕ್ತಿಯನ್ನು ಅನ್ನದಾನೀಶ ತಮಗೆ ಕರುಣಿಸಲಿ ಎಂದು ಆಶೀರ್ವದಿಸಿದರು.
ಹೇಮಂತಗೌಡ ಪಾಟೀಲ, ಎಸ್.ಡಿ. ಮಕಾಂದಾರ, ರಾಮಚಂದ್ರ ಕಲಾಲ್, ಮಂಜುನಾಥ ಮುಂಡವಾಡ, ದಾನೇಶ್ವರಿ ಭಜಂತ್ರಿ, ಶೋಭಾ ಮೇಟಿ, ಜ್ಯೋತಿ ಕುರಿಯವರ, ರುದ್ರಗೌಡ ಪಾಟೀಲ, ಧ್ರುವಕುಮಾರ ಹೊಸಮನಿ, ರಾಘವೇಂದ್ರ ಕುರಿಯವರ, ಡಾ. ಬಿ.ಎಸ್. ಮೇಟಿ, ವಿನೋದ ವಡ್ಡರ, ನಬೀಸಾಬ್ ಕೆಲೂರ, ಮೆಹಬೂಬಸಾಬ್ ಹವಾಲ್ದಾರ್, ನಾಗರಾಜ ಸಜ್ಜನರ, ರಾಜು ಡಾವಣಗೇರಿ, ಪುಲಕೇಶಗೌಡ ಪಾಟೀಲ, ಸುರೇಶ ಮಾಳಗಿಮನಿ, ಶೇಖರಾಜ ಹೊಸಮನಿ, ವಿಶ್ವನಾಥಗೌಡ ಪಾಟೀಲ, ಡಿ.ಎಂ. ಕಾತರಕಿ, ರಾಜಾಭಕ್ಷಿ ಬೆಟಗೇರಿ, ನಾಗರಾಜ ಸಜ್ಜನರ, ಯಲ್ಲಪ್ಪ ಹೊಂಬಳಗಟ್ಟಿ, ಆರ್.ಎಂ. ಸೈದರ್, ರಾಘವೇಂದ್ರ ನೆರೇಗಲ್, ದಶರತಪ್ಪ ಕುರಿ, ಸುಲೇಮಾನ ಬೇವೂರ, ಸುರೇಶ ಮಾಗಡಿ, ಉಮೇಶ ಕಲಾಲ, ಇಸ್ಮಾಯಿಲ್ ನಮಾಜಿ, ರಾಮು ಭಜಂತ್ರಿ, ಸುರೇಶ ಉಪ್ಪಾರ, ಯಲ್ಲಪ್ಪ ಹೂಲಗೇರಿ, ಶ್ರೀಕಾಂತ ಡೊಣ್ಣಿ, ಗೋವಿಂದರಾಜ ಜ್ಯೋಶಿ, ವಿರೂಪಾಕ್ಷಪ್ಪ ಬಾರಕೇರ, ಎ.ಎಫ್. ದಂಡಿನ ಉಪಸ್ಥಿತರಿದ್ದರು.