ತಂದೆ ಹಾದಿಯಲ್ಲಿ ಸಾಗುವೆ: ಮಧು ಬಂಗಾರಪ್ಪ

| Published : Oct 22 2023, 01:00 AM IST

ಸಾರಾಂಶ

ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪನವರು ರಾಜ್ಯದ ರೈತರಿಗೆ ಉಚಿತ ವಿದ್ಯುತ್ ಹಾಗೂ ಗ್ರಾಮೀಣ ಕೃಪಾಂಕದ ಮೇಲೆ ಸಾಕಷ್ಟು ಶಿಕ್ಷಕರನ್ನು ನೇಮಿಸಿಕೊಂಡು ಅದೆಷ್ಟೋ ಜನರಿಗೆ ಬದುಕು ಕಲ್ಪಿಸಿಕೊಟ್ಟಿದ್ದರು

ಯಲಬುರ್ಗಾ: ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪನವರು ರಾಜ್ಯದ ರೈತರಿಗೆ ಉಚಿತ ವಿದ್ಯುತ್ ಹಾಗೂ ಗ್ರಾಮೀಣ ಕೃಪಾಂಕದ ಮೇಲೆ ಸಾಕಷ್ಟು ಶಿಕ್ಷಕರನ್ನು ನೇಮಿಸಿಕೊಂಡು ಅದೆಷ್ಟೋ ಜನರಿಗೆ ಬದುಕು ಕಲ್ಪಿಸಿಕೊಟ್ಟಿದ್ದರು ಎಂದು ಶಾಲಾ ಶಿಕ್ಷಣ ಸಚಿವ ಎಸ್.ಮಧು ಬಂಗಾರಪ್ಪ ಹೇಳಿದರು.ತಾಲೂಕಿನ ಮುಧೋಳ ಗ್ರಾಮದಲ್ಲಿ ನೂತನ ಬಾಲಕಿಯರ ಸರ್ಕಾರಿ ಪ್ರೌಢ ಶಾಲೆ ಉದ್ಘಾಟಿಸಿ ಮಾತನಾಡಿದ ಅವರು, ಅಂಥವರ ಮಗ ನಾನು ಸಚಿವನಾಗಿರುವುದು ನನಗೆ ಹೆಮ್ಮೆ ಎನಿಸುತ್ತಿದೆ. ಅವರ ಹಾದಿಯಲ್ಲಿ ಸಾಗುತ್ತಿದ್ದೇನೆ ಎಂದರು.ಮಾಜಿ ಸಚಿವ ಬಸವರಾಜ ರಾಯರಡ್ಡಿಯವರು ನಮ್ಮ ತಂದೆಯವರ ಗರಡಿಯಲ್ಲಿ ಪಾಳಗಿದವರು ಹಿರಿಯ ಅನುಭವಿ ರಾಜಕಾರಣಿಗಳು ಸಂಸದರಾಗಿ, ಸಚಿವರಾಗಿ ಅವರು ಈ ಕ್ಷೇತ್ರದಲ್ಲಿ ಎಂಜಿನಿಯರಿಂಗ್, ಕೌಶಲ್ಯಾಭಿವೃದ್ದಿ, ನವೋದಯ, ಮೊರಾರ್ಜಿ ವಸತಿ ಶಾಲೆಗಳು, ಪಾಲಿಟೆಕ್ನಿಕ್ ಕಾಲೇಜು, ಐಟಿಐ ಕಾಲೇಜುಗಳು ಸೇರಿದಂತೆ ಸಾಕಷ್ಟು ಶಿಕ್ಷಣ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಮಾಡಿದ್ದಾರೆ. ಅಂಥವರ ಮುಂದೆ ನಾನು ಇನ್ನೂ ಕಿರಿಯ ಸಚಿವ. ಅವರ ಮಾರ್ಗದರ್ಶನ ಪಡೆಯುತ್ತೇನೆ. ಕ್ಷೇತ್ರಕ್ಕೆ ಆರು ಸರ್ಕಾರಿ ಪ್ರೌಢಶಾಲೆ ಹಾಗೂ ಮೂರು ಜೂನಿಯರ್ ಕಾಲೇಜನ್ನು ನೀಡಿದ್ದೇನೆ. ರಾಯರಡ್ಡಿ ಯಾವುದೇ ಅಭಿವೃದ್ಧಿ ಕೆಲಸಕ್ಕೆ ಪಟ್ಟು ಹಿಡಿದರೆ ಅದು ಆಗುವವರೆಗೂ ಬಿಡುವುದಿಲ್ಲ. ಅಂತಹ ಅಭಿವೃದ್ಧಿ ಹರಿಕಾರರು. ಅಂಥ ಶಾಸಕರನ್ನು ಪಡೆದ ಕ್ಷೇತ್ರದ ಜನತೆ ಪುಣ್ಯವಂತರು ಎಂದು ಹೇಳಿದರು.ಶಾಸಕ ಬಸವರಾಜ ರಾಯರಡ್ಡಿ ಮಾತನಾಡಿ, ಸಚಿವ ಮಧು ಅವರ ತಂದೆ ಮಾಜಿ ಸಿಎಂ ಎಸ್. ಬಂಗಾರಪ್ಪನವರು ನನಗೆ ರಾಜಕೀಯ ಗುರು. ಅವರಿಂದ ರಾಜಕೀಯ ರಂಗದಲ್ಲಿ ಸಾಕಷ್ಟು ಬೆಳೆಯಲು ಸಾಧ್ಯವಾಯಿತು ಎಂದರು. ಮುಧೋಳ ಗ್ರಾಮದ ನೂತನ ಪ್ರೌಢಶಾಲೆಗೆ ₹೨.೫೦ ಕೋಟಿ ನೀಡಲಾಗಿದೆ. ಈ ಗ್ರಾಮಕ್ಕೆ ₹೨೫ ಕೋಟಿ ವೆಚ್ಚದಲ್ಲಿ ಮೊರಾರ್ಜಿ ವಸತಿ ಶಾಲೆಯನ್ನು ಶೀಘ್ರದಲ್ಲೇ ಮಂಜೂರು ಮಾಡಿಸಿಕೊಡುತ್ತೇನೆ. ಇದಕ್ಕೆ ೧೦ ಎಕರೆ ಜಮೀನು ಬೇಕಾಗಿದೆ. ಅದಕ್ಕೆ ಗ್ರಾಮಸ್ಥರು ಸಹಕಾರ ನೀಡಬೇಕಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ, ಹನುಮಂತಗೌಡ ಪಾಟೀಲ, ವೀರನಗೌಡ ಬಳೂಟಗಿ, ಯಂಕಣ್ಣ ಯರಾಶಿ, ಕೆರಿಬಸಪ್ಪ ನಿಡಗುಂದಿ, ಅಡಿವೆಪ್ಪ ಭಾವಿಮನಿ, ಸಂಗಣ್ಣ ಟೆಂಗಿನಕಾಯಿ,ರಾಜಶೇಖರ ನಿಂಗೋಜಿ, ಗ್ರಾಪಂ ಅಧ್ಯಕ್ಷ ಮಮತಾಜಬೇಗಂ ಹಿರೇಮನಿ, ಉಪಾಧ್ಯಕ್ಷ ಅಶೋಕ ಭಜಂತ್ರಿ ಇದ್ದರು.