ಸಾರಾಂಶ
ಕನ್ನಡಪ್ರಭ ವಾರ್ತೆ ಶಿರಾ
ಶಿರಾ ತಾಲೂಕಿನ ಮಾದಿಗ ಜನಾಂಗ ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ ಅಭಿವೃದ್ಧಿ ಹೊಂದಲು ಹಗಲಿರುಳು ಶ್ರಮಿಸುತ್ತೇನೆ. ನನ್ನ ಮೇಲೆ ನಂಬಿಕೆ ಇಟ್ಟು ಆಯ್ಕೆ ಮಾಡಿದ ಎಲ್ಲಾ ನನ್ನ ಸಮುದಾಯಕ್ಕೆ ಧನ್ಯವಾದ ತಿಳಿಸುತ್ತೇನೆ ಎಂದು ತಾಪಂ ಮಾಜಿ ಸದಸ್ಯ ಹಾಗೂ ಶಿರಾ ತಾಲೂಕು ಮಾದಿಗ ಮಹಾಸಭಾದ ನೂತನ ಅಧ್ಯಕ್ಷ ಪಿ.ಬಿ.ನರಸಿಂಹಯ್ಯ ಹೇಳಿದರು.ಅವರು ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ತಾಲೂಕು ಮಾದಿಗ ಜನಾಂಗದ ಸಭೆಯಲ್ಲಿ ಶಿರಾ ತಾಲೂಕು ಮಾದಿಗ ಮಹಾಸಭಾದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿ ನಂತರ ಅವರು ಮಾತನಾಡಿದರು. ನಾನು ಯಾವುದೇ ಪಕ್ಷಕ್ಕೆ ಸೀಮಿತವಾಗಿ ನಡೆದುಕೊಳ್ಳದೆ ಸಮುದಾಯದ ಅಭಿವೃದ್ಧಿಗೆ ಶ್ರಮಿಸುತ್ತೇನೆ. ನನ್ನಿಂದ ಯಾವುದೇ ತಪ್ಪು ನಡೆದರೂ ನಾನು ಅಂದೇ ರಾಜೀನಾಮೆ ನೀಡುತ್ತೇನೆ. ಮಾದಿಗ ಜನಾಂಗದ ಋಣ ತೀರಿಸುತ್ತೇನೆ. ಶಿರಾ ತಾಲೂಕಿನಲ್ಲಿ ಮಾದಿಗ ಜನಾಂಗ ಮತದಾರರು ಸುಮಾರು ೬೫ ಸಾವಿರ ಇದ್ದು, ನಾವು ಹೆಚ್ಚು ಸಂಖ್ಯೆಯಲ್ಲಿರುವ ಸಮುದಾಯವಾಗಿದ್ದು, ಮುಂದೆ ಬರುವ ತಾಪಂ, ಜಿಪಂ ಚುನಾವಣೆಗಳಲ್ಲಿ ಹೆಚ್ಚು ಅಭ್ಯರ್ಥಿಗಳು ಸ್ಪರ್ಧಿಸಿ ಅವರ ಗೆಲುವಿಗಾಗಿ ನಾವೆಲ್ಲ ಶ್ರಮಿಸಬೇಕಾದೆ.ತಾಲೂಕಿನಲ್ಲಿ ನಮ್ಮ ಜನಾಂಗದ ರಾಜಕೀಯ ಪ್ರಾತಿನಿಧ್ಯ ಪ್ರತಿನಿಧಿಸಬೇಕಿದೆ ಎಂದರು.
ತುಮಕೂರು ವಿವಿ ಮಾಜಿ ಸಿಂಡಿಕೇಟ್ ಸದಸ್ಯ ಕೊಟ್ಟ ಶಂಕರ್ ಮಾತನಾಡಿ, ಮಾದಿಗ ಸಮುದಾಯವನ್ನು ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಕಟ್ಟಲು ಶಿರಾ ತಾಲೂಕು ಮಾದಿಗ ಮಹಾ ಸಭಾ ಸ್ಥಾಪಿಸಲಾಗಿದೆ. ಇಂದು ಎಲ್ಲಾ ಹೋಬಳಿಂದ ಪ್ರತಿನಿಧಿಗಳನ್ನು ಚುನಾವಣೆ ಮೂಲಕ ಆಯ್ಕೆ ಮಾಡಲಾಗಿದೆ. ಇಲ್ಲಿ ಪಕ್ಷ ಇಲ್ಲ ಸಮುದಾಯ ಮುಖ್ಯ ಸಮುದಾಯದ ಅಭಿವೃದ್ದಿಗೆ ಎಲ್ಲರೂ ಸಹಕರಿಸಬೇಕು ಎಂದರು.ನಿವೃತ್ತ ಉಪಪ್ರಾಂಶುಪಾಲ ಆರ್.ಸಿ.ರಾಮಚಂದ್ರಪ್ಪ ಮಾತನಾಡಿ ಮಾದಿಗ ಸಮುದಾಯವನ್ನು ಒಟ್ಟಿಗೆ ತರಬೇಕೆಂದು ಒಬ್ಬ ನೇತಾರನನ್ನು ಇಡೀ ಸಮುದಾಯ ಆಯ್ಕೆ ಮಾಡಿದೆ. ನೂತನ ಅಧ್ಯಕ್ಷರು, ಉಪಾಧ್ಯಕ್ಷರು ಜನಾಂಗಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಶ್ರಮಿಸಬೇಕು ಸಮುದಾಯದವರನ್ನು ಜಾಗೃತಿಗೊಳಿಸೋಣ ಎಂದರು.
ಈ ಸಂದರ್ಭದಲ್ಲಿ ಶಿರಾ ತಾಲೂಕು ಮಾದಿಗ ಮಹಾಸಭಾದ ಉಪಾಧ್ಯಕ್ಷರಾಗಿ ಮದ್ದಕ್ಕನಹಳ್ಳಿ ತಿಪ್ಪೇಸ್ವಾಮಿ ಆಯ್ಕೆಯಾದರು. ಕೆಪಿಸಿಸಿ ಸದಸ್ಯ ಟಿ.ಲೋಕೇಶ್, ದಿಶಾ ಸಮಿತಿ ಸದಸ್ಯ ಮದಲೂರು ಮೂರ್ತಿ ಮಾಸ್ಟರ್, ಬಿಜೆಪಿ ಮಧುಗಿರಿ ಸಂಘಟನಾತ್ಮಕ ಜಿಲ್ಲೆಯ ಪ್ರಧಾನ ಕಾರ್ಯದರ್ಶಿ ಎಂಜಲಗೆರೆ ಮೂರ್ತಿ, ಡಿಎಸ್ಎಸ್ ಜಿಲ್ಲಾಧ್ಯಕ್ಷ ಟೈರ್ ರಂಗನಾಥ್, ತಾಲೂಕು ಅಧ್ಯಕ್ಷ ಶಿವಾಜಿನಗರ ತಿಪ್ಪೇಸ್ವಾಮಿ, ಎಪಿಎಂಸಿ ಮಾಜಿ ಉಪಾಧ್ಯಕ್ಷ ಹನುಮಂತಪ್ಪ, ಮಾಜಿ ನಗರಸಭಾ ಸದಸ್ಯ ಮಂಜುನಾಥ್, ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ಜಿಲ್ಲಾ ಸಂಯೋಜಕ ಜಿ.ಎಸ್.ಮಂಜುನಾಥ್, ಶಿರಾ ಮಾತಂಗ ನೌಕರರ ಬಳಗದ ರಾಮರಾಜ್, ರಾಜಣ್ಣ, ಡಾ.ಶಂಕರ್, ದ್ವಾರನಕುಂಟೆ ಲಕ್ಷ್ಮಣ್, ಶ್ರೀನಿವಾಸ್.ಎನ್, ಮಹದೇವಪ್ಪ, ಮದ್ದಕ್ಕನಹಳ್ಳಿ ಮಹಾಲಿಂಗಪ್ಪ, ಕಳ್ಳಂಬೆಳ್ಳ ಜಯರಾಮ್, ಹಾವನೂರು ಮೂರ್ತಿ, ಜಯರಾಮಕೃಷ್ಣ, ನವೀನ್ ಕುಮಾರ್ ಸೇರಿದಂತೆ ಹಲವರು ಹಾಜರಿದ್ದರು.