ಕನಕಗಿರಿ: ಸಮಾಜದ ಶ್ರೆಯೋಭಿವೃದ್ಧಿಗಾಗಿ ಶ್ರಮವಹಿಸಿ ಕೆಲಸ ಮಾಡುತ್ತೇನೆ ಎಂದು ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ತಾಲೂಕಾಧ್ಯಕ್ಷ ಪ್ರಶಾಂತ ಪ್ರಭುಶೆಟ್ಟರ್ ಹೇಳಿದರು.
ಅವರು ಪಟ್ಟಣದ ಎಪಿಎಂಸಿಯ ಶ್ರಮಿಕ ಭವನದಲ್ಲಿ ಹಮ್ಮಿಕೊಂಡಿದ್ದ ಬಣಜಿಗ ಸಮಾಜದ ಸಂಸ್ಥಾಪನಾ ದಿನಾಚರಣೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.ಬಣಜಿಗ ಸಮಾಜದ ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಯುವಕ/ತಿಯರು ಉತ್ತಮ ಸಾಧನೆ ಮಾಡುವಲ್ಲಿ ಯಶಸ್ಸು ಕಂಡಿದ್ದಾರೆ. ಆದರೆ, ಕೆಲ ಮಕ್ಕಳು ಬಡತನ, ಆರ್ಥಿಕ ಸಮಸ್ಯೆಯಿಂದ ಮುಂದಿನ ವಿದ್ಯಾಭ್ಯಾಸ ಹೋಗಲು ಸಾಧ್ಯವಾಗಿಲ್ಲ. ಅಂತಹ ಬಡ ಮಕ್ಕಳ ಏಳ್ಗೆಗಾಗಿ ಸಮಾಜ ಕೆಲಸ ಮಾಡಲಿದೆ. ಗ್ರಾಮೀಣ ಭಾಗದ ಮಕ್ಕಳಿಗೂ ಸರ್ಕಾರದಿಂದ ದೊರಕ ಬೇಕಾದ ಸೌಲಭ್ಯ ಕಲ್ಪಿಸಿ ಕೊಡಲು ಮುಂದಾಗುತ್ತೇನೆ ಎಂದರು.
ಯುವ ಘಟಕದ ಅಧ್ಯಕ್ಷ ಚಂದ್ರಶೇಖರ ಚೋಳಿನ್ ಮಾತನಾಡಿ, ಸಮಾಜದ ಬಹಳಷ್ಟು ಕುಟುಂಬಗಳು ಬಡತನದಲ್ಲಿವೆ.ಅಂತಹ ಕುಟುಂಬದ ಮಕ್ಕಳ ವಿದ್ಯಾವಂತರನ್ನಾಗಿ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ. ಜಾತಿ ಪ್ರಮಾಣ ಪತ್ರದ ಬಗ್ಗೆ ಯಾರಿಗೂ ಗೊಂದಲ ಬೇಡ. ತಹಸೀಲ್ದಾರರೊಂದಿಗೆ ಚರ್ಚಿಸಿ ಸಮಸ್ಯೆ ಸರಿಪಡಿಸುವುದಾಗಿ ತಿಳಿಸಿದರು.ಬಣಜಿಗ ಸಮಾಜದ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಯಡಿಯೂರು ಸಿದ್ದಲಿಂಗೇಶ್ವರ, ಬಸವೇಶ್ವರ ಹಾಗೂ ಅಕ್ಕಮಹಾದೇವಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಎರಡ್ಮೂರು ವರ್ಷಗಳಿಂದ ಕನಕಗಿರಿ ತಾಲೂಕಿನ ತಹಸೀಲ್ದಾರರಾಗಿ ಸೇವೆ ಸಲ್ಲಿಸುತ್ತಿರುವ ವಿಶ್ವನಾಥ ಮುರುಡಿ ಅವರನ್ನು ಸಮಾಜದಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಂಗಪ್ಪ ತೆಂಗಿನಕಾಯಿ, ವಿರೂಪಾಕ್ಷಪ್ಪ ಭತ್ತದ, ಸುರೇಶ ಗುಗ್ಗಳಶೆಟ್ರ, ಶರಣಪ್ಪ ಎಂ, ಭತ್ತದ,ಮಲ್ಲೇಶಪ್ಪ ಗುಗ್ಗಳಶೆಟ್ರ, ಶರಣಪ್ಪ ಕಲಿಕೇರಿ, ಶಿವಕುಮಾರ ಕೋರಿ, ಚಂದ್ರಶೇಖರ ಬೆಳ್ಳೂಳ್ಳಿ,ಶರಣಪ್ಪ ಮೇರನಾಳ,ಸಂತೋಷ ಹಾದಿಮನಿ, ಪ್ರಕಾಶ ಹಾದಿಮನಿ, ಆನಂದ ಭತ್ತದ, ಗೋಡಿನಾಳ, ಸುಳೇಕಲ್, ಚಿಕ್ಕಮಾದಿನಾಳ, ಕರಡೋಣ, ನವಲಿ ಸೇರಿದಂತೆ ಇತರರಿದ್ದರು.