ಸಾರಾಂಶ
ಹೊಸದುರ್ಗ ಪಟ್ಟಣದಲ್ಲಿ ಶ್ರೀ ಸಂತ ಸದ್ಗುರು ಸೇವಾಲಾಲ್ ಮಹಾರಾಜರ 285ನೇ ಜಯಂತೋತ್ಸವ ನಡೆಯಿತು. ಕಾರ್ಯಕ್ರಮಕ್ಕೆ ಶಾಸಕ ಬಿ.ಜಿ.ಗೋವಿಂದಪ್ಪ ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ಹೊಸದುರ್ಗ
ನನ್ನ ರಾಜಕೀಯ ಜೀವನಕ್ಕೆ ಶಕ್ತಿ ತುಂಬುವ ಕೆಲಸ ಮಾಡಿರುವ ಎಲ್ಲಾ ಲಂಬಾಣಿ ತಾಂಡಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಆಹಾರ ಮತ್ತು ನಾಗರೀಕ ಸರಬರಾಜು ನಿಗದಮ ಅಧ್ಯಕ್ಷ ಹಾಗೂ ಶಾಸಕ ಬಿ.ಜಿ.ಗೋವಿಂದಪ್ಪ ಹೇಳಿದರು. ಪಟ್ಟಣದ ಬಂಜಾರ ಸಮುದಾಯ ಭವನದಲ್ಲಿ ತಾಲೂಕು ಬಂಜಾರ ಸಮಾಜ, ಯುವಕ ಸಂಘ, ನೌಕರರ ಸಂಘ ಇವರ ಆಶ್ರಯದಲ್ಲಿ ನಡೆದ ಶ್ರೀ ಸಂತ ಸದ್ಗುರು ಸೇವಾಲಾಲ್ ಮಹಾರಾಜರ 285ನೇ ಜಯಂತೋತ್ಸವ ಉದ್ಘಾಟಿಸಿ ಮಾತನಾಡಿದರು.ಬಂಜಾರ ಸಮುದಾಯ ಭವನ ನಿರ್ಮಾಣ ಮಾಡಿ ಸಮಾಜಕ್ಕೆ ಒಪ್ಪಿಸಿದ್ದೇವೆ. ಇಲ್ಲಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಲು 50 ಲಕ್ಷ ರು. ಮಂಜೂರು ಮಾಡಲಾಗುವುದು. ಪ್ರಾಥಮಿಕ ಹಂತವಾಗಿ ಸೋಮವಾರದೊಳಗೆ 25 ಲಕ್ಷ ರು.ಗಳನ್ನು ಮಂಜೂರು ಮಾಡುತ್ತೇನೆ. ಲಂಬಾಣಿ ತಾಂಡಗಳಲ್ಲಿ ಸಂತ ಸೇವಾಲಾಲ್ ದೇವಾ ಲಯ ನಿರ್ಮಾಣಕ್ಕೆ 1 ಕೋಟಿ ರು. ಅನುದಾನ ಒದಗಿಸಿದ್ದೇನೆ. ಈ ಸಮುದಾಯದ ಎಲ್ಲಾ ತಾಂಡಗಳ ಜನರ ಬೇಡಿಕೆ ಈಡೇರಿಸಲು ಸಿದ್ಧನಿರುವೆ. ಅಪೂರ್ಣ ಕಾಮಗಾರಿ ಗಳನ್ನು ಪೂರ್ಣಗೊಳಿಸಲು ಯೋಜನೆ ಸಿದ್ದಪಡಿಸಿರುವುದಾಗಿ ಹೇಳಿದರು. ರಾಜ್ಯ ಸರ್ಕಾರ ತಾಲೂಕಿಗೆ 1 ಸಾವಿರ ಮನೆ ಮಂಜೂರು ಮಾಡಿದೆ. ಪ್ರಸ್ತುತ 9 ಗ್ರಾ.ಪಂ.ಗಳಿಗೆ ಮನೆ ಹಂಚಿಕೆ ಮಾಡಿ ಸುಸಜ್ಜಿತ ವಸತಿ ಮನೆ ನಿರ್ಮಾಣಕ್ಕೆ ಸಹಕಾರ ನೀಡುವೆ. ಉಳಿದ ಪಂಚಾಯತಿಗಳಿಗೆ ಮೇ ತಿಂಗಳ ನಂತರ ವಸತಿ ಮನೆ ಹಂಚಿಕೆ ಮಾಡಲಾಗುವುದು. ಹಿಂದುಳಿದಿರುವ ತುಂಬಿನಕೆರೆ ಲಂಬಾಣಿಹಟ್ಟಿ ಗ್ರಾಮಕ್ಕೆ ಜಮೀನು ಮಂಜೂರಿಗೆ ಕ್ರಮ ಕೈಗೊಂಡಿದ್ದು, ಅಲ್ಲಿನ ಜನರಿಗೆ ನಿವೇಶನ ಹಂಚಿಕೆ ಮಾಡಿ ವಸತಿ ಮನೆ ನಿರ್ಮಾಣ ಮಾಡಿಕೊಡಲಾಗುವುದು ಎಂದರು. ಬಂಜಾರ ಗುರುಪೀಠದ ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಮಾತನಾಡಿ, ಉತ್ತರ ಕರ್ನಾಟಕದಲ್ಲಿ ಬಂಜಾರರ ಜೀವನ ನಿರ್ವಹಣೆ ತುಂಬಾ ಕಠಿಣವಾಗಿದೆ. ಅಲ್ಲಿನ ಜನರು ವಲಸೆ ಹೋಗಿ ಜೀವನ ನಡೆಸುತ್ತಿದ್ದಾರೆ. 2011ರ ಜನಗಣತಿಯ ಆಧಾರದ ಮೇಲೆ ಲಂಬಾಣಿ ಸಮಾಜವನ್ನು ಪರಿಶಿಷ್ಠ ಜಾತಿಯ ಒಳ ಮೀಸಲಾತಿಯಡಿ ವರ್ಗೀಕರಣಗೊಳಿಸಿ ಹೊರಗಿಡುವ ಕೆಲಸ ಮಾಡಲಾಗುತ್ತಿದೆ. ಯಾವುದೇ ಕಾರಣಕ್ಕೂ ಒಳ ಮೀಸಲಾತಿ ವರ್ಗೀಕರಣ ಆಗಬಾರದು. ಈ ಹಿಂದಿನ ಸರಕಾರ ಕೇಂದ್ರಕ್ಕೆ ಸಲ್ಲಿಸಿರುವ ಶಿಫಾರಸ್ಸನ್ನು ವಾಪಸ್ಸು ಪಡೆಯಬೇಕು. ಬಂಜಾರರ ಹಕ್ಕನ್ನು ಕಸಿದುಕೊಂಡ ಯಾವುದೇ ಸರಕಾರವಿರಲಿ ಖಂಡಿತ ಆಪತ್ತು ಎದುರಿಸಲಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಿದ್ದೇವೆ ಎಂದರು. ಬಂಜಾರ ಸಮಾಜದ ತಾಲೂಕು ಅಧ್ಯಕ್ಷ ಕೆ.ಹನುಮನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಿವಮೊಗ್ಗದ ಮುಖಂಡ ರಾಘವೇಂದ್ರ ನಾಯ್ಕ್, ಮಹಂತೇಶ್ ನಾಯ್ಕ್, ಎಚ್.ಕೃಷ್ಣನಾಯ್ಕ ಮತ್ತಿತರರು ಹಾಜರಿದ್ದರು.