ನನ್ನ ಉಸಿರಿರುವವರೆಗೂ ಕಾಂಗ್ರೆಸ್ ಪಕ್ಷದಲ್ಲೇ ಕೆಲಸ ಮಾಡುತ್ತೇನೆ. ಶಿಡ್ಲಘಟ್ಟ ಕ್ಷೇತ್ರದ ಜನರಿಗಾಗಿ ಏನು ಮಾಡಬೇಕಾದರೂ ಮಾಡಲು ನಾನು ಸಿದ್ಧ. ತಮ್ಮ ವಿರುದ್ಧ ರಾಜಕೀಯ ಷಡ್ಯಂತ್ರ ರೂಪಿಸಿ ಗುರಿಯಾಗಿಸಲಾಗಿದೆ.
ಕನ್ನಡಪ್ರಭ ವಾರ್ತೆ ಶಿಡ್ಲಘಟ್ಟ
ಯಾವುದೇ ಪಕ್ಷ ವಿರೋಧಿ ಚಟುವಟಿಕೆಗಳನ್ನು ಮಾಡದೇ ಇದ್ದರೂ ನನ್ನನ್ನು ಅನ್ಯಾಯದ ಕೂಪದಲ್ಲಿ ತಳ್ಳಿದ್ದಾರೆ. ಕುತಂತ್ರದ ಫಲವಾಗಿ ನನ್ನನ್ನು ಜೈಲಿಗೂ ಕಳುಹಿಸಲಾಯಿತು ಎಂದು ಎಬಿಡಿ ಟ್ರಸ್ಟ್ ಅಧ್ಯಕ್ಷ ಹಾಗೂ ಸಮಾಜ ಸೇವಕ ರಾಜೀವ್ ಗೌಡ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.ನಗರದ ಕನಕನಗರದಲ್ಲಿರುವ ಎಬಿಡಿ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆ ನಡೆಯಿತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನನ್ನ ಉಸಿರಿರುವವರೆಗೂ ಕಾಂಗ್ರೆಸ್ ಪಕ್ಷದಲ್ಲೇ ಕೆಲಸ ಮಾಡುತ್ತೇನೆ. ಶಿಡ್ಲಘಟ್ಟ ಕ್ಷೇತ್ರದ ಜನರಿಗಾಗಿ ಏನು ಮಾಡಬೇಕಾದರೂ ಮಾಡಲು ನಾನು ಸಿದ್ಧ. ತಮ್ಮ ವಿರುದ್ಧ ರಾಜಕೀಯ ಷಡ್ಯಂತ್ರ ರೂಪಿಸಿ ಗುರಿಯಾಗಿಸಲಾಗಿದೆ ಎಂದರು.ನಾನು, ನನ್ನ ಕುಟುಂಬದವರು ಹಾಗೂ ನನ್ನ ಕ್ಷೇತ್ರದ ನಿಷ್ಠಾವಂತ ಕಾರ್ಯಕರ್ತರು ಈ ಅನ್ಯಾಯವನ್ನು ಅನುಭವಿಸಿದ್ದೇವೆ. ಈ ಕುತಂತ್ರಕ್ಕೆ ತಕ್ಕ ಉತ್ತರವನ್ನು ಮುಂದಿನ ದಿನಗಳಲ್ಲಿ ನೀಡುವ ಸಮಯ ಖಂಡಿತ ಬರುತ್ತದೆ. ಜನಸಾಮಾನ್ಯರ ವಿಶ್ವಾಸ ಮತ್ತು ಕಾರ್ಯಕರ್ತರ ಬೆಂಬಲವೇ ನನ್ನ ದೊಡ್ಡ ಶಕ್ತಿ. ಯಾರು ಎಷ್ಟೇ ನನ್ನ ವಿರುದ್ಧ ಪಿತೂರಿ ನಡೆಸಿದರೂ ನಾನು ಎದೆಗುಂದದೆ ನನ್ನ ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಗುಡಹಳ್ಳಿ ನಾರಾಯಣಸ್ವಾಮಿ ಕೆಪಿಸಿಸಿ ಕೈಗೊಂಡಿರುವ ಅಮಾನತು ಕ್ರಮ ಸದ್ಯಕ್ಕೆ ತಾತ್ಕಾಲಿಕವಾಗಿದ್ದು, ಇದನ್ನು ಶಾಶ್ವತವಾಗಿ ಪರಿಗಣಿಸಬಾರದು ಎಂದರು. ಪಕ್ಷದ ಹಿರಿಯ ನಾಯಕರು ಹಾಗೂ ಕಾರ್ಯಕರ್ತರು ಒಟ್ಟಾಗಿ ಕೆಪಿಸಿಸಿಗೆ ಮನವರಿಕೆ ಮಾಡುವ ಮೂಲಕ ವಿಷಯವನ್ನು ಸಮಾಧಾನಕರವಾಗಿ ಬಗೆಹರಿಸಬಹುದು ಎಂಬ ವಿಶ್ವಾಸ ವ್ಯಕ್ತಪಡಿಸಿದರು.ಸಭೆಯಲ್ಲಿ ಹಿರಿಯ ಕಾಂಗ್ರೆಸ್ ಮುಖಂಡರಾದ ಗುಡಿಯಪ್ಪ, ಅಪ್ಸರ್ ಪಾಷ, ಡಾಲ್ಫಿನ್ ನಾಗರಾಜ್, ನಾಗ ನರಸಿಂಹ , ಮುತ್ತೂರ್ ವೆಂಕಟೇಶ್ , ನಾರಾಯಣ ಸ್ವಾಮಿ , ನರೇಂದ್ರ , ಮನು, ದೆವೇಂದ್ರ , ಡಿಶ್ ಶ್ರೀನಾಥ್ , ಗಾಯಿತ್ರಿ, ಯಾಸ್ಮಿನ್ ತಾಜ್ ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಸುದ್ದಿ ಚಿತ್ರ ೧ ನಗರದ ಕನಕನಗರದಲ್ಲಿರುವ ಎಬಿಡಿ ಕಚೇರಿಯಲ್ಲಿ ಭಾನುವಾರ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಎಬಿಡಿ ಟ್ರಸ್ಟ್ ಅಧ್ಯಕ್ಷ ಹಾಗೂ ಸಮಾಜ ಸೇವಕ ರಾಜೀವ್ ಗೌಡ