ಸಾರಾಂಶ
‘ . ನಾಯಕತ್ವಕ್ಕಾಗಿ ಡಿಕೆಶಿ ಹಾಗೂ ನನ್ನ ನಡೆದ ಚುನಾವಣೆಯಲ್ಲಿ ಗೆದ್ದು ನಾನು ಸಿಎಂ ಆಗಿದ್ದೇನೆ. ನಾನೇ ಐದು ವರ್ಷ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಪೂರೈಸುತ್ತೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹೇಳಿದ್ದು, ಭಾರಿ ಸಂಚಲನಕ್ಕೆ ಕಾರಣವಾಗಿದೆ.
ನವದೆಹಲಿ : ‘ರಾಜ್ಯದಲ್ಲಿ ಅಧಿಕಾರ ಹಂಚಿಕೆ ಕುರಿತು ನನ್ನ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡುವೆ ಯಾವುದೇ ಒಪ್ಪಂದ ಆಗಿಲ್ಲ. ನಾಯಕತ್ವಕ್ಕಾಗಿ ಡಿಕೆಶಿ ಹಾಗೂ ನನ್ನ ನಡೆದ ಚುನಾವಣೆಯಲ್ಲಿ ಗೆದ್ದು ನಾನು ಸಿಎಂ ಆಗಿದ್ದೇನೆ. ನಾನೇ ಐದು ವರ್ಷ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಪೂರೈಸುತ್ತೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹೇಳಿದ್ದು, ಭಾರಿ ಸಂಚಲನಕ್ಕೆ ಕಾರಣವಾಗಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ‘ಅಧಿಕಾರ ಹಂಚಿಕೆ ಒಪ್ಪಂದ’ದ ಕುರಿತು ಹೇಳಿಕೆಗಳು ಬರುತ್ತಿದ್ದವು. ಅಂತಹ ಒಪ್ಪಂದವೇ ಆಗಿಲ್ಲ ಎಂದು ಸಿದ್ದರಾಮಯ್ಯ ಮೊದಲ ಸಲ ಹೇಳಿದ್ದಾರೆ. ಮತ್ತೊಂದೆಡೆ, ರಾಜ್ಯದಲ್ಲಿ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆ ವೇಳೆ ಆಂತರಿಕ ಚುನಾವಣೆಯಾಗಿತ್ತು ಎಂಬುದನ್ನೂ ಇದೇ ಪ್ರಥಮ ಬಾರಿಗೆ ಸಿಎಂ ಬಹಿರಂಗಪಡಿಸಿರುವುದು ಭಾರಿ ಚರ್ಚೆಗೆ ನಾಂದಿ ಹಾಡಿದೆ. ಈ ಎರಡೂ ಹೇಳಿಕೆಗಳ ಮೂಲಕ ಸ್ವಪಕ್ಷ ಹಾಗೂ ವಿಪಕ್ಷ ಸೇರಿದಂತೆ ಎಲ್ಲರಿಗೂ ಸಿಎಂ ‘ಐದು ವರ್ಷ ನಾನೇ ಸಿಎಂ, ಅಧಿಕಾರ ಹಂಚಿಕೆ ಇಲ್ಲ’ ಎಂಬ ಸ್ಪಷ್ಟ ಸಂದೇಶವನ್ನು ರವಾನೆ ಮಾಡಿದ್ದಾರೆ.
ಗೆದ್ದು ಸಿಎಂ ಆಗಿದ್ದೇನೆ?:‘ನ್ಯೂಸ್ 18’ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಸಿಎಂ ಹುದ್ದೆ ಸ್ಥಾನದ ಜಟಾಪಟಿ, ಈ ಹಿಂದೆ ನಾಯಕತ್ವಕ್ಕಾಗಿ ನಡೆದಿದ್ದ ಚುನಾವಣೆ ಕುರಿತು ಮೊದಲ ಬಾರಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಈ ಹಿಂದೆ ನಾಯಕತ್ವ ವಿಷಯದಲ್ಲಿ ನನ್ನ ಮತ್ತು ಡಿ.ಕೆ.ಶಿವಕುಮಾರ್ ನಡುವೆ ಚುನಾವಣೆ ನಡೆದಿತ್ತು. ಅದನ್ನು ಮಹಾರಾಷ್ಟ್ರದ ಹಿರಿಯ ನಾಯಕರಾದ ಶಿಂಧೆ ನಡೆಸಿದ್ದರು. ಆದರೆ ಅದರ ಫಲಿತಾಂಶ ಪ್ರಕಟಿಸಿರಲಿಲ್ಲ. ಬಳಿಕ ನೀವೇ ಗೆದ್ದಿದ್ದೀರಿ ಎಂದು ಹೈಕಮಾಂಡ್ ನನಗೆ ಹೇಳಿತ್ತು. ಅದರಂತೆ ನಾನು ಇದೀಗ ಸಿಎಂ ಸ್ಥಾನದಲ್ಲಿದ್ದೇನೆ. 5 ವರ್ಷಗಳ ಕಾಲ ನಾನೇ ಸಿಎಂ ಹುದ್ದೆಯಲ್ಲಿ ಮುಂದುವರೆಯುತ್ತೇನೆ. ಹೈಕಮಾಂಡ್ ಹೇಳಿದನ್ನು ನಾವಿಬ್ಬರೂ ಪಾಲಿಸಬೇಕು. ಅದು ನನಗೂ ಅನ್ವಯ, ಡಿ.ಕೆ.ಶಿವಕುಮಾರ್‌ಗೂ ಅನ್ವಯ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.ಜೊತೆಗೆ ಸಿಎಂ ಸ್ಥಾನದ ಕುರಿತು ಡಿ.ಕೆ.ಶಿವಕುಮಾರ್ ಅವರನ್ನು ಬೆಂಬಲಿಸುವವರೂ ಇದ್ದಾರೆ, ನನ್ನನ್ನು ಬೆಂಬಲಿಸುವವರೂ ಇದ್ದಾರೆ. ಅವರವರ ಅಭಿಪ್ರಾಯಗಳನ್ನು ಅವರು ಹೇಳಿದ್ದಾರೆ. ಆದರೆ ಅಂಥವರ ಸಂಖ್ಯೆ ಹೆಚ್ಚೇನೂ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಬದಲಾವಣೆ ಊಹಾಪೋಹ:
ನಂತರ ಗುರುವಾರ ನವದೆಹಲಿಯ ಕರ್ನಾಟಕ ಭವನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ರಾಜ್ಯದಲ್ಲಿ ಶಾಸಕರನ್ನು ಭೇಟಿ ಮಾಡುತ್ತಿರುವ ಉದ್ದೇಶ ಮುಖ್ಯಮಂತ್ರಿಗಳ ಬದಲಾವಣೆಗೆ ಸಂಬಂಧಿಸಿದ್ದಲ್ಲ. ವಿಷಯವನ್ನು ಅವರೇ ಸ್ಪಷ್ಟಪಡಿಸಿರುವಾಗ ಊಹಾಪೋಹಕ್ಕೆ ಅವಕಾಶವೇ ಇಲ್ಲ ಎಂದರು.
ಹಸ್ತಾಂತರ ಒಪ್ಪಂದವಾಗಿಲ್ಲ:
ಸರ್ಕಾರಕ್ಕೆ ಎರಡೂವರೆ ವರ್ಷವಾಗಿರುವ ಸಂದರ್ಭದಲ್ಲಿ ಅಧಿಕಾರ ಹಸ್ತಾಂತರದ ವಿಷಯ ಏಳುವುದು ಸಹಜ. ಆದರೆ ಈ ಬಗ್ಗೆ ಯಾವುದೇ ಒಪ್ಪಂದವಾಗಿಲ್ಲ. ಇತ್ತೀಚೆಗಷ್ಟೇ ಐದು ವರ್ಷವೂ ನಾನೇ ಸಿಎಂ ಆಗಿ ಮುಂದುವರಿಯಲಿದ್ದೇನೆ ಎಂದು ಸ್ಪಷ್ಟಪಡಿಸಿದ್ದೇನೆ. ಜೊತೆಗೆ ಖುದ್ದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ಮುಖ್ಯಮಂತ್ರಿಗಳ ಸ್ಥಾನ ಖಾಲಿಯಿಲ್ಲ ಎಂದಿದ್ದಾರೆ. ಈ ವಿಷಯದ ಬಗ್ಗೆ ಪಕ್ಷದ ವರಿಷ್ಠರ ತೀರ್ಮಾನವನ್ನು ಸಿಎಂ, ಡಿಸಿಎಂ ಸಹಮತಿಸಬೇಕೆಂದು ಹೈಕಮಾಂಡ್ ಸ್ಪಷ್ಟ ಸೂಚನೆ ನೀಡಿದ್ದು, ವರಿಷ್ಠರ ತೀರ್ಮಾನಕ್ಕೆ ತಲೆಬಾಗುವುದಾಗಿ ನಾವಿಬ್ಬರೂ ಹಲವು ಬಾರಿ ತಿಳಿಸಿದ್ದೇವೆ. ಹೀಗಿರುವಾಗ ಮಾಧ್ಯಮಗಳಲ್ಲಿ ಇಂತಹ ಗಾಳಿಸುದ್ದಿಗಳು ಏಕೆ ಹಬ್ಬಿಸಲಾಗುತ್ತಿದೆ ಎಂದು ಸಿಎಂ ಮರುಪ್ರಶ್ನೆ ಹಾಕಿದರು.
ಶಾಸಕರ ಅಭಿಪ್ರಾಯ ಅಂತಿಮ ಅಲ್ಲ:
ಕೆಲವು ಶಾಸಕರು ತಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ತಿಳಿಸುತ್ತಿದ್ದಾರೆಯೇ ಹೊರತು, ಇದು ಪಕ್ಷದ ತೀರ್ಮಾನವಲ್ಲ. ಅಧಿಕಾರ ಹಸ್ತಾಂತರದ ಊಹೆಗೆ ಯಾವುದೇ ಅರ್ಥವಿಲ್ಲ. ಕರ್ನಾಟಕದಲ್ಲಿ ಸಿಎಂ ಸ್ಥಾನ ಖಾಲಿ ಇಲ್ಲ ಎಂದು ನಾನು ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಬ್ಬರೂ ಪುನರುಚ್ಚರಿಸಿದ್ದೇವೆ. ಕರ್ನಾಟಕದ ಮುಖ್ಯಮಂತ್ರಿ ನಾನೇ. ಡಿ.ಕೆ.ಶಿವಕುಮಾರ್ ಆಗಲಿ ಅಥವಾ ಶಾಸಕರು ಯಾರೇ ಆಗಲಿ ಮುಖ್ಯಮಂತ್ರಿಯಾಗಬೇಕೆಂಬ ಆಸೆ ಇಟ್ಟುಕೊಂಡಿದ್ದರೆ ಅದರಲ್ಲಿ ತಪ್ಪೇನಿಲ್ಲ ಎಂದು ಹೇಳಿದ ಅವರು, ಸಚಿವ ಸಂಪುಟ ಪುನರ್ರಚನೆ ಬಗ್ಗೆ ಯಾವುದೇ ಚರ್ಚೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.