ಸಾರಾಂಶ
ಜೇನುಹುಳುಗಳ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಹಾಗೂ ಜೇನು ಸಾಕಾಣಿಕೆಯಲ್ಲಿ ಗಮನಿಸಬಹುದಾದ ಅಂಶಗಳು ಮತ್ತು ಜೇನು ಗೂಡಿಗೆ ಭಾದಿಸುವ ಕೀಟ ಮತ್ತು ರೋಗಗಳ ಕುರಿತು ಮಾಹಿತಿ
ಕನ್ನಡಪ್ರಭ ವಾರ್ತೆ ಸುತ್ತೂರು
ಸುತ್ತೂರಿನ ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರವು ವಿಶ್ವಜೇನು ನೊಣ ದಿನದ ಅಂಗವಾಗಿ ಒಂದು ದಿನದ ಜೇನು ಕೃಷಿ ತರಬೇತಿ ಕಾರ್ಯಕ್ರಮವನ್ನು ಸೋಮವಾರ ಏರ್ಪಡಿಸಿತ್ತು.ಕಾರ್ಯಕ್ರಮದ ಆಯೋಜಕ ಡಾ.ವೈ.ಪಿ. ಪ್ರಸಾದ್ ಮಾತನಾಡಿ, ಪ್ರತೀ ವರ್ಷ ಮೇ 20ರಂದು ವಿಶ್ವ ಜೇನು ದಿನ ಆಚರಿಸಲಾಗುತ್ತಿದೆ. ಕೃಷಿಯಲ್ಲಿ ಪರಾಗಸ್ಪರ್ಷದ ಮಹತ್ವ ಮತ್ತು ಪ್ರಕೃತಿಯಲ್ಲಿ ಪರಾಗಸ್ಪರ್ಷಗಳ ಸಂರಕ್ಷಣೆಯನ್ನು ಸಾರುವುದು ಈ ದಿವಸದ ಮುಖ್ಯಉದ್ದೇಶ. ಈ ವರ್ಷ ಬೀ ಎಂಗೇಜ್ಡ್ ವಿತ್ ಯೂತ್ಎಂಬ ಶೀರ್ಷಿಕೆಯಡಿ ಆಚರಿಸಲಾಯಿತು ಎಂದರು.
ಮುಖ್ಯ ಅತಿಥಿಯಾಗಿದ್ದ ಡಾ. ರಾಜಗೋಪಾಲ್ ಮಾತನಾಡಿ, ಆಧುನಿಕ ಜೇನು ಸಾಕಾಣಿಕೆಯ ಹರಿಕಾರರಾದ ಆಂಟೋನ್ ಜಾನ್ಸಾ ಅವರ ಹುಟ್ಟು ಹಬ್ಬದ ಪ್ರಯುಕ್ತ ವಿಶ್ವ ಜೇನು ನೊಣ ದಿನ ಎಂದು ಆಚರಿಸಲಾಗುತ್ತಿದೆ ಎಂದರು.ನಂತರ ಅವರು ಜೇನುಹುಳುಗಳ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಹಾಗೂ ಜೇನು ಸಾಕಾಣಿಕೆಯಲ್ಲಿ ಗಮನಿಸಬಹುದಾದ ಅಂಶಗಳು ಮತ್ತು ಜೇನು ಗೂಡಿಗೆ ಭಾದಿಸುವ ಕೀಟ ಮತ್ತು ರೋಗಗಳ ಕುರಿತು ಮಾಹಿತಿ ನೀಡಿದರು.
ಬೇಸಾಯ ಶಾಸ್ತ್ರ ವಿಜ್ಞಾನಿ ಶಾಮರಾಜ್ ಮಾತನಾಡಿ, ಜೇನು ಕೃಷಿಯಲ್ಲಿ ಇರುವ ಲಾಭಗಳು ಮತ್ತು ರೈತರಿಗೆ ಸಮಗ್ರ ಕೃಷಿ ಪದ್ಧತಿಯಲ್ಲಿ ಜೇನು ಕೃಷಿಯನ್ನು ಅಳವಡಿಸಿಕೊಳ್ಳಲು ಮಾರ್ಗದರ್ಶನ ನೀಡಿದರು.ರೈತರು ಜೇನು ಕೃಷಿಯಲ್ಲಿ ತೊಡಗಿಸಿಕೊಂಡು ಉತ್ತಮ ಆದಾಯ ಪಡೆಯುವುದರ ಜೊತೆಗೆ ಆಹಾರ ಪದಾರ್ಥಗಳ ಇಳುವರಿ ಹೆಚ್ಚಿಸುವಲ್ಲಿ ಸಹಕಾರಿಯಾಗಬೇಕು ಎಂದರು.
ಸಂಪನ್ಮೂಲ ವ್ಯಕ್ತಿಯಾಗಿದ್ದ ಮಂಡ್ಯದ ರಾಜು ಮಾತನಾಡಿ, ಜೇನು ಕೃಷಿಯ ಇತಿಹಾಸ, ಜೇನಿನ ಪ್ರಯೋಜನಗಳು, ಕೃಷಿಯಲ್ಲಿ ಜೇನಿನ ಮಹತ್ವ, ಜೇನು ಸಾಕಾಣಿಕೆ, ಜೇನಿನ ಉಪ ಉತ್ಪನ್ನಗಳು ಮತ್ತು ಜೇನು ಸಾಕಾಣಿಕೆಯಲ್ಲಿ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳ ಕುರಿತು ಮಾಹಿತಿ ನೀಡಿದರು.ನಂತರ ಜೇನು ಸಾಕಾಣಿಕೆಯ ಪ್ರಾತ್ಯಕ್ಷಿಕೆ ನೀಡಲಾಯಿತು. ಡಾ.ಜಿ.ಎಂ. ವಿನಯ್, ಜೆ.ಜಿ. ರಾಜಣ್ಣ, ಡಾ. ರಕ್ಷಿತ್ ರಾಜ್, ಗಂಗಪ್ಪ ಹಿಪ್ಪರಗಿ ಮೊದಲಾದವರು ಇದ್ದರು.