ಸಾರಾಂಶ
ಐಸಿಐಸಿಐ ಫೌಂಡೇಶನ್ ನವರು ರಂಗೇನಹಳ್ಳಿ ಗ್ರಾಪಂ ವ್ಯಾಪ್ತಿಯ ಹಳ್ಳಿಗಳ ಜನರಿಗೆ ತಾಡ್ ಪಾಲ್ ವಿತರಣೆ ಮಾಡುತ್ತಿರುವುದು.
ಕನ್ನಡಪ್ರಭ ವಾರ್ತೆ ಹಿರಿಯೂರು
ತಾಲೂಕಿನ ರಂಗೇನಹಳ್ಳಿ ಗ್ರಾಪಂ ವ್ಯಾಪ್ತಿಯ ಹಳ್ಳಿಗಳ ರೈತರಿಗೆ ಐಸಿಐಸಿಐ ಫೌಂಡೇಶನ್ ನವರು ಕೆಲವು ಸೌಲಭ್ಯ ಉಚಿತವಾಗಿ ಹಾಗೂ ರಿಯಾಯಿತಿ ದರದಲ್ಲಿ ಒದಗಿಸುತ್ತಿರುವ ಯೋಜನೆ ಹಳ್ಳ ಹಿಡಿದು ಕುಳಿತಿದೆ.ರೈತರಿಗೆ ಉಪಕಾರವಾಗಲಿ ಎಂಬ ಉದ್ದೇಶದಿಂದ ಫೌಂಡೇಶನ್ ಒದಗಿಸುತ್ತಿರುವ ಸೌಲಭ್ಯಗಳು ಪಂಚಾಯಿತಿ ಎಲ್ಲಾ ಹಳ್ಳಿಗಳಲ್ಲೂ ಕೆಲವರ ಪಾಲಾಗುತ್ತಿವೆ ಎಂದು ರಂಗೇನಹಳ್ಳಿ ಗ್ರಾಪಂ ಸದಸ್ಯೆ ಗಾಯಿತ್ರಮ್ಮ ಆರೋಪಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಫೌಂಡೇಶನ್ ವತಿಯಿಂದ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳ ರೈತರಿಗೆ ಹಣ್ಣಿನ ಗಿಡಗಳು, ಕೃಷಿ ಹೊಂಡ, ರೀ ಚಾರ್ಜ್ ಫಿಟ್, ಕೋಳಿ ಮರಿಗಳು, ತಾಡ್ ಪಾಲ್, ಬಿತ್ತನೆ ಬೀಜಗಳು ಹೀಗೆ ಹಲವು ರೈತೋಪಯೋಗಿ ಸೌಲಭ್ಯ ಒದಗಿಸುತ್ತಿದ್ದು ಅವುಗಳ ಸದ್ಭಳಕೆ ಆಗುತ್ತಿಲ್ಲ. ಪ್ರತಿ ಸಲವೂ ಪಡೆದವರೇ ಮತ್ತೆ ಮತ್ತೆ ಸೌಲಭ್ಯ ಪಡೆಯುತ್ತಿದ್ದು ಅವಶ್ಯಕತೆ ಇರುವ ಬಡ ರೈತರಿಗೆ ಸೌಲಭ್ಯ ಮರೀಚಿಕೆಯಾಗಿದೆ. ಈಗಾಗಲೇ ಫೌಂಡೇಶನ್ ನಿಂದ ಉಚಿತವಾಗಿ ಕೃಷಿಹೊಂಡ ತೆಗೆಸಿ ಅದೇ ಕೃಷಿ ಹೊಂಡಕ್ಕೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಮತ್ತೆ ಬಿಲ್ ಪಡೆಯುವ ಹುನ್ನಾರ ಬಯಲಿಗೆ ಬಿದ್ದಿತ್ತು. ಗ್ರಾಮ ಪಂಚಾಯಿತಿ ಸದಸ್ಯರನ್ನು ಗಣನೆಗೆ ತೆಗೆದುಕೊಳ್ಳುವ ಮಾತು ಅತ್ಲಾಗಿರಲಿ. ಐಸಿಐಸಿಐ ಫೌಂಡೇಶನ್‌ನ ನಿಯಮಗಳನ್ನೇ ಗಾಳಿಗೆ ತೂರಿ ಸೌಲಭ್ಯಗಳನ್ನು ಹಂಚಲಾಗುತ್ತಿದೆ. ಇನ್ನಾದರೂ ದಾನಿಗಳ ಸಹಾಯ ಬಡ ರೈತರಿಗೆ ಸಿಗುವಂತಾಗಲಿ ಮತ್ತು ಫೌಂಡೇಶನ್ ಹಿರಿಯ ಅಧಿಕಾರಿಗಳು ಈ ಭಾಗದ ಜವಾಬ್ದಾರಿ ಹೊತ್ತವರ ಬಗ್ಗೆ ಒಂದು ನಿಗಾ ಇಡಲಿ ಎಂದಿದ್ದಾರೆ.ಗ್ರಾಪಂ ಸದಸ್ಯ ಅನಿಲ್ ಕುಮಾರ್ ಮತ್ತು ಕವಿತಾ ಪ್ರತಿಕ್ರಿಯಿಸಿ ಇದುವರೆಗೂ ಫೌಂಡೇಶನ್ ನವರು ನಮ್ಮನ್ನು ಯಾವುದೇ ವಿಚಾರಕ್ಕೂ ಸಲಹೆ ಸಹಕಾರ ಕೇಳಿಲ್ಲ. ಹಳ್ಳಿಗಳಲ್ಲಿ ಯಾರೋ ಇಬ್ಬರು ಮೂವರು ಹೇಳಿದವರಿಗೆ ಸೌಲಭ್ಯ ಒದಗಿಸಿ ಹೋಗುತ್ತಿದ್ದು ಗ್ರಾಮಗಳಲ್ಲಿ ಇರಿಸು ಮುರಿಸಿನ ವಾತಾವರಣ ಸೃಷ್ಟಿ ಮಾಡುತ್ತಿದ್ದಾರೆ ಎಂದರು.