ಕೆಎಂಸಿಆರ್‌ಐನಲ್ಲಿ ತೀವ್ರ ನಿಗಾ ಘಟಕ ಶೀಘ್ರ

| Published : Sep 23 2025, 01:05 AM IST

ಸಾರಾಂಶ

ಜನರಿಗೆ ತುರ್ತು ವೈದ್ಯಕೀಯ ಚಿಕಿತ್ಸೆ ಒದಗಿಸಲು 50 ಹಾಸಿಗೆಗಳ ಸಿಸಿಬಿ ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಿದೆ. ಇದು ಅತ್ಯಾಧುನಿಕ ತಂತ್ರಜ್ಞಾನ ಮತ್ತು ಎಲ್ಲ ವೈದ್ಯಕೀಯ ಸೌಲಭ್ಯಗಳನ್ನು ಹೊಂದಿದ್ದು, ₹16.40 ಕೋಟಿ ವೆಚ್ಚದಲ್ಲಿ ಸಜ್ಜುಗೊಳ್ಳಲಿದೆ.

ಮಹಮ್ಮದ ರಫೀಕ್ ಬೀಳಗಿ

ಹುಬ್ಬಳ್ಳಿ:

ಕರ್ನಾಟಕ ವೈದ್ಯಕೀಯ ಕಾಲೇಜು- ಸಂಶೋಧನಾ ಸಂಸ್ಥೆಯಲ್ಲಿ (ಕೆಎಂಸಿಆರ್‌ಐ) ಕ್ರಿಟಿಕಲ್ ಕೇರ್ ಬ್ಲಾಕ್ (ತೀವ್ರ ನಿಗಾ ಘಟಕ) ನಿರ್ಮಾಣ ಕಾರ್ಯ ಆರಂಭವಾಗಿದೆ.

ಎಲ್ಲ ಇಲಾಖೆಯ ಕ್ರಿಟಿಕಲ್ ಕೇರ್ ಬ್ಲಾಕ್‌ ಪ್ರತ್ಯೇಕವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ₹16.40 ಕೋಟಿ ವೆಚ್ಚದಲ್ಲಿ ಈ ಬ್ಲಾಕ್ ಅನ್ನು ನಿರ್ಮಿಸಲಾಗುತ್ತಿದೆ. ಇಲ್ಲಿ ಐಸಿಯು, ಪ್ರಮುಖ ಮತ್ತು ಸಣ್ಣ ಆಪರೇಷನ್ ಥಿಯೇಟರ್‌ಗೆ ಅವಕಾಶ ಕಲ್ಪಿಸಲಾಗುತ್ತಿದ್ದು, ಒಂದು ವರ್ಷದೊಳಗೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ಕೆಎಂಸಿಆರ್‌ಐಗೆ ವಿವಿಧ ಸ್ಥಳಗಳಿಂದ ಬರುವ ತುರ್ತು ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಈಗಾಗಲೇ ಕೆಎಂಸಿಆರ್‌ಐ ತುರ್ತು ಪರಿಸ್ಥಿತಿಗಳಲ್ಲಿ ಅತ್ಯುತ್ತಮ ಚಿಕಿತ್ಸೆ ನೀಡುತ್ತಿದ್ದು, ಸುಮಾರು 30 ಆಪರೇಷನ್ ಥಿಯೇಟರ್ ಕಾರ್ಯನಿರ್ವಹಿಸುತ್ತಿದೆ. ತುರ್ತು ವಿಭಾಗದಲ್ಲಿ, ತಕ್ಷಣದ ತುರ್ತು 35 ಹಾಸಿಗೆಗಳು, ಎಂ-ಐಸಿಯು, ಎಸ್‌ಐಸಿಯು, ಎನ್ಐಸಿಯು ಸೇರಿದಂತೆ ಸುಮಾರು 300 ಐಸಿಯು ಹಾಸಿಗೆಗಳು ಲಭ್ಯ ಇವೆ.

ಕೆಎಂಸಿ-ಆರ್‌ಐನ ಸೂಪರಿಟೆಂಡೆಂಟ್ ಡಾ. ಈಶ್ವರ್ ಹಸಬಿ ಅವರು ಈ ಕುರಿತು ಮಾಹಿತಿ ನೀಡಿ, ಉತ್ತರ ಕರ್ನಾಟಕದ 2,000-2,500 ಜನರು ಹೊರರೋಗಿ ವಿಭಾಗಕ್ಕೆ ಭೇಟಿ ನೀಡುತ್ತಾರೆ. 200ಕ್ಕೂ ಅಧಿಕ ತುರ್ತು ರೋಗಿಗಳು ಆಸ್ಪತ್ರೆಗೆ ಬರುತ್ತಾರೆ. ಅಂತಹ ಜನರಿಗೆ ತುರ್ತು ವೈದ್ಯಕೀಯ ಚಿಕಿತ್ಸೆ ಒದಗಿಸಲು 50 ಹಾಸಿಗೆಗಳ ಸಿಸಿಬಿ ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಿದೆ. ಇದು ಅತ್ಯಾಧುನಿಕ ತಂತ್ರಜ್ಞಾನ ಮತ್ತು ಎಲ್ಲ ವೈದ್ಯಕೀಯ ಸೌಲಭ್ಯಗಳನ್ನು ಹೊಂದಿದ್ದು, ₹16.40 ಕೋಟಿ ವೆಚ್ಚದಲ್ಲಿ ಸಜ್ಜುಗೊಳ್ಳಲಿದೆ ಎಂದು ಮಾಹಿತಿ ನೀಡಿದ್ದಾರೆ.

ತುರ್ತು ವೈದ್ಯಕೀಯ ಸೌಲಭ್ಯಗಳು, ಡಯಾಲಿಸಿಸ್ ಯಂತ್ರಗಳು ಸೇರಿದಂತೆ ವೈದ್ಯಕೀಯ ಸೌಲಭ್ಯಗಳು, 10 ಐಸಿಯು ಹಾಸಿಗೆಗಳು (ಮಕ್ಕಳ ಹಾಸಿಗೆಗಳು), ಶಸ್ತ್ರಚಿಕಿತ್ಸಾ ಘಟಕ (ಓಟಿ), ಹಲವಾರು ಐಸೋಲೇಷನ್ ವಾರ್ಡ್‌ಗಳು, ಎಂಸಿಎಚ್ ಹಾಸಿಗೆಗಳು ಮತ್ತು ಇನ್ನೂ ಹೆಚ್ಚಿನ ಚಿಕಿತ್ಸೆ ಒದಗಿಸುವ ಉದ್ದೇಶಕ್ಕಾಗಿ 50 ಹಾಸಿಗೆಗಳನ್ನು ಘಟಕದಲ್ಲಿ ಒದಗಿಸಲಾಗುವುದು ಎಂದು ಅವರು ಹೇಳಿದರು.

ಕೆಎಂಸಿಆರ್‌ಐ ನಿರ್ದೇಶಕ ಡಾ. ಈಶ್ವರ್ ಹೊಸಮನಿ ಈ ಕುರಿತು ಮಾಹಿತಿ ನೀಡಿ, 50 ಹಾಸಿಗೆಗಳ ಕ್ರಿಟಿಕಲ್ ಕೇರ್ ಬ್ಲಾಕ್ ಅನ್ನು ಕೇಂದ್ರ ಸರ್ಕಾರ ಮಂಜೂರು ಮಾಡಿದೆ. ರಾಜ್ಯದ ಕೆಲವು ವೈದ್ಯಕೀಯ ಕಾಲೇಜುಗಳಿಗೆ ಸಿಸಿಬಿ ಮಂಜೂರಾಗಿದೆ. ಜಿ+2 ಅಂತಸ್ತಿನ ಕಟ್ಟಡ ನಿರ್ಮಿಸಲಾಗುವುದು. ಕೆಲಸ ಆರಂಭಗೊಂಡಿದ್ದು, ಒಂದು ವರ್ಷದೊಳಗೆ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.

ತುರ್ತು ಚಿಕಿತ್ಸೆಗಾಗಿ ಬರುವ ಜನರಿಗೆ ಕ್ರಿಟಿಕಲ್ ಕೇರ್ ಬ್ಲಾಕ್ ತುಂಬಾ ಅನುಕೂಲಕರವಾಗಲಿದೆ. ತುರ್ತು ಚಿಕಿತ್ಸೆಗೆ ಅಗತ್ಯವಿರುವ ಎಲ್ಲ ವೈದ್ಯಕೀಯ ಸೌಲಭ್ಯಗಳನ್ನು ಒಂದೇ ಸೂರಿನಡಿ ಲಭ್ಯವಾಗುವಂತೆ ಮಾಡುವುದು ಕ್ರಿಟಿಕಲ್ ಕೇರ್ ಬ್ಲಾಕ್ ಆಸ್ಪತ್ರೆಯ ಉದ್ದೇಶವಾಗಿದೆ.

ಕೆಎಂಸಿ-ಆರ್‌ಐ ಆಸ್ಪತ್ರೆಯ ಆವರಣದಲ್ಲಿರುವ ಬಾಲಕಿಯರ ಹಾಸ್ಟೆಲ್ ಪಕ್ಕದಲ್ಲಿ ಸಿಸಿಬಿ ನಿರ್ಮಾಣವಾಗುತ್ತಿದೆ. ಜಿ+2 ಸಿಸಿಬಿಯ ಕೆಲಸ ಆಗಸ್ಟ್‌ನಿಂದ ಆರಂಭವಾಗಿದೆ. ಆಸ್ಪತ್ರೆಗೆ ಬರುವ ಮತ್ತು ತುರ್ತು ಚಿಕಿತ್ಸೆ ಪಡೆಯುವ ರೋಗಿಗಳಿಗೆ ಅನುಕೂಲಕರವಾದ ಸ್ಥಳದಲ್ಲಿ ಬ್ಲಾಕ್ ನಿರ್ಮಾಣವಾಗುತ್ತಿದೆ.

ಡಾ. ಈಶ್ವರ್ ಹೊಸಮನಿ, ಕೆಎಂಸಿಆರ್‌ಐ ನಿರ್ದೇಶಕ