ಕನ್ನಡಪ್ರಭ ವಾರ್ತೆ ಸಾಲಿಗ್ರಾಮ

ಮಹಾತ್ಮರ ಪ್ರತಿಮೆಗಳನ್ನು ನಿರ್ಮಿಸುವುದರ ಜೊತೆಗೆ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ಆದರ್ಶಮಯ ಬದುಕು ನಮ್ಮದಾಗಲಿದೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.

ತಾಲೂಕಿನ ಲಕ್ಷ್ಮಿಪುರ ಗ್ರಾಮದಲ್ಲಿ ಬುಧವಾರ ಏರ್ಪಡಿಸಿದ್ದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ಹಾಗೂ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಸಂಗೊಳ್ಳಿರಾಯಣ್ಣ ಎಂದೂ ಜಾತಿ ಧರ್ಮಕ್ಕೆ ಸೀಮಿತವಾದವರಲ್ಲ. ಅವರು ಸ್ವಾತಂತ್ರ್ಯದ ಮೊದಲ ಹೋರಾಟಗಾರ, ಪ್ರತಿಮೆಯನ್ನು ಸ್ಥಾಪಿಸಿ ಪೂಜಿಸಿದರೆ ಸಾಲದು, ಅವರ ಜೀವನ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದರು.

ಲಕ್ಷ್ಮಿಪುರ ಗ್ರಾಮದಲ್ಲಿ ಹಿಂದಿನಿಂದಲೂ ನನ್ನನ್ನು ಹಾಗೂ ನಮ್ಮ ಪಕ್ಷವನ್ನು ಬೆಂಬಲಿಸುತ್ತಾ ಬಂದಿದ್ದು, ಈ ಹಿಂದೆ ನಾನು ಜಿಪಂ ಸದಸ್ಯನಾದ ದಿನದಿಂದಲೂ ಗ್ರಾಮದ ಅಭಿವೃದ್ಧಿಗೆ ಕಟಿಬದ್ಧವಾಗಿದ್ದೇನೆ. ಈ ಹಿನ್ನೆಲೆ ಇಂದು ಗ್ರಾಮಕ್ಕೆ ನೂತನವಾಗಿ ಪಶು ಆಸ್ಪತ್ರೆ ಉದ್ಘಾಟನೆ, ಚಿಕ್ಕನಾಯಕನಹಳ್ಳಿ -ಲಕ್ಷ್ಮೀಪುರ ನಡುವಿನ ಸಂಪರ್ಕ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ಹಾಗೂ ಅಂಗನವಾಡಿ ಕೇಂದ್ರ ಉದ್ಘಾಟನೆ ಮಾಡಲಾಗಿದೆ. ಪಶು ಆಸ್ಪತ್ರೆಯನ್ನು ತಾತ್ಕಾಲಿಕ ಕಟ್ಟಡದಲ್ಲಿ ತೆರೆಯಲಾಗಿದ್ದು, 50 ಲಕ್ಷ ರು. ವೆಚ್ಚದಲ್ಲಿ ನೂತನ ಕಟ್ಟಡ ಸ್ಥಾಪಿಸಲಾಗುವುದು ಹಾಗೂ ಪಕ್ಕದ ಬಳ್ಳೂರು ಬೈಲಾಪುರ ಗ್ರಾಮ ಸಂಪರ್ಕ ರಸ್ತೆ ಅಭಿವೃದ್ಧಿಗೆ ಮತ್ತು ಚಿಕ್ಕನಾಯಕನಹಳ್ಳಿ ರಸ್ತೆ ಅಭಿವೃದ್ಧಿಗೆ ಪ್ರಗತಿಪಥ ಯೋಜನೆ ಅಡಿ 4 ಕೋಟಿ ಅನುದಾನ ಮಂಜೂರಾಗಿದೆ ಎಂದರು.

ಲಕ್ಷ್ಮಿಪುರ ಗ್ರಾಮದ ಬಹುದಿನಗಳ ಬೇಡಿಕೆಯಾದ ಅಂಬೇಡ್ಕರ್ ಭವನಕ್ಕೆ ಸ್ಥಳ ಪರಿಶೀಲನೆ ಮಾಡುವಂತೆ ತಹಸೀಲ್ದಾರ್ ಅವರಿಗೆ ಸೂಚಿಸಿದ ಅವರು, ಗ್ರಾಮದ ಹಾಲು ಉತ್ಪಾದಕ ಸಹಕಾರ ಸಂಘದ ಕಟ್ಟಡಕ್ಕೆ ಮೈಮುಲ್ ವತಿಯಿಂದ 5 ಲಕ್ಷ ರು. ಅನುದಾನ ನೀಡಿದ್ದು, ಹೆಚ್ಚಿನ ಅನುದಾನ ನೀಡಿ ಅಭಿವೃದ್ಧಿಪಡಿಸಲಾಗುವುದು ಎಂದರು.


ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ದೊಡ್ಡಸ್ವಾಮೇಗೌಡ, ತಾಪಂ ಮಾಜಿ ಸದಸ್ಯ ಸಣ್ಣಪ್ಪ, ತಹಸೀಲ್ದಾರ್ ರುಕಿಯ ಬೇಗಂ, ಪಶು ಇಲಾಖೆಯ ಡಿಡಿ ಡಾ. ನಾಗರಾಜ್, ಸಹಾಯಕ ನಿರ್ದೇಶಕ ಡಾ. ರಾಮು, ಡಾ. ಸುರೇಂದ್ರ, ಸಂಗೊಳ್ಳಿ ರಾಯಣ್ಣ ಯುವಕರ ಸಂಘದ ಸದಸ್ಯರು, ಗ್ರಾಮದ ಮುಖಂಡರು ಇದ್ದರು.

ಜಮೀನಿನ ದಾಖಲೆ ಹಸ್ತಾಂತರ: ಶಾಸಕ ಡಿ. ರವಿಶಂಕರ್ ಅವರು ನೀಡಿದ ಭರವಸೆಯಂತೆ ಆರ್ಟಿಸಿಯಲ್ಲಿ ತೊಂದರೆಯಾಗಿ ಜಮೀನನ್ನು ಪೋಡಿ ಮಾಡಿಸಲು ಸಾಧ್ಯವಾಗದೆ, ಇತ್ತೀಚಿಗೆ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಚಿಕ್ಕನಾಯಕನಹಳ್ಳಿ ಗ್ರಾಮದ ರೈತ ರಂಗೇಗೌಡ ಅವರ ಸಮಸ್ಯೆ ಬಗೆಹರಿಸಿ ಜಮೀನಿನ ದಾಖಲೆಗಳನ್ನು ಅವರಿಗೆ ಹಸ್ತಾಂತರಿಸಲಾಯಿತು.