ಡಿಸಿ ಮಧ್ಯಸ್ಥಿಕೆಯಲ್ಲಿ ಕಸ ವಿಲೇವಾರಿಗೆ ಸ್ಥಳ ಗುರುತಿಸಿ

| Published : Oct 01 2024, 01:23 AM IST

ಡಿಸಿ ಮಧ್ಯಸ್ಥಿಕೆಯಲ್ಲಿ ಕಸ ವಿಲೇವಾರಿಗೆ ಸ್ಥಳ ಗುರುತಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಪೌರ ಕಾರ್ಮಿಕರ ಮಾಸಿಕ ಭತ್ಯೆಯನ್ನು ಅಭಿವೃದ್ಧಿಗೆ ಬಂದ ಹಣದಲ್ಲಿ ನೀಡದೆ ತೆರಿಗೆ ಹಣದಲ್ಲಿ ನೀಡಬೇಕು ಎಂದು ಕೆಲವು ಸದಸ್ಯರು ಸೂಚಿಸಿದರು.

ಕನ್ನಡಪ್ರಭ ವಾರ್ತೆ ಮಸ್ಕಿ

ಪಟ್ಟಣದಲ್ಲಿನ ಕಸ ವಿಲೇವಾರಿಗಾಗಿ ಬೇಕಾದ ಭೂಮಿ ಸಮಸ್ಯೆ ಬಗ್ಗೆ ಸೋಮವಾರ ಪುರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರು ಗಂಭೀರವಾಗಿ ಚರ್ಚೆ ನಡೆಸಿದರು.

ಮಲ್ಲಯ್ಯ ಅಂಬಾಡಿ ಅಧ್ಯಕ್ಷತೆಯಲ್ಲಿ ಪುರಸಭೆ ಸಭಾಂಗಣದಲ್ಲಿ ನಡೆದ ಸಭೆಯಯಲ್ಲಿ ಪಾಲ್ಗೊಂಡ ಬಹುತೇಕ ಸದಸ್ಯರು ಕಸ ವಿಲೇವಾರಿಗೆ ಸ್ಥಳ ದೊರೆಯದ ಕಾರಣ ಸಮಸ್ಯೆಯಾಗಿದೆ. ಅಧ್ಯಕ್ಷರು, ಉಪಾಧ್ಯಕ್ಷರು ಸದಸ್ಯರ ನಿಯೋಗವೊಂದನ್ನು ಜಿಲ್ಲಾಧಿಕಾರಿ ಬಳಿ ತೆಗೆದುಕೊಂಡು ಹೋಗಿ ಮಧ್ಯಸ್ಥಿಕೆ ವಹಿಸುವಂತೆ ಮನವಿ ಮಾಡಬೇಕು. ಆದಷ್ಟು ಬೇಗ ಭೂಮಿ ಗೊತ್ತುಪಡಿಸಿ ಸಮಸ್ಯೆ ಇತ್ಯರ್ಥಕ್ಕೆ ಎಲ್ಲರೂ ಶ್ರಮೀಸೋಣ ಎಂದರು. ಪುರಸಭೆ ಮುಂಭಾಗದಲ್ಲಿನ ಎರಡು ಹಳೆಯ ಮಳಿಗೆ ತೆರವುಗೊಳಿಸಿ ಕಂಪೌಂಡ್ ಗೋಡೆ ನಿರ್ಮಾಣ ಶೀಘ್ರ ಆರಂಭಿಸಲು ಗುತ್ತಿಗೆದಾರರಿಗೆ ಸೂಚಿಸಬೇಕು ಎಂದು ಸದಸ್ಯರು ಮುಖ್ಯಾಧಿಕಾರಿಗೆ ತಿಳಿಸಿದರು.

ಪೌರ ಕಾರ್ಮಿಕರ ಮಾಸಿಕ ಭತ್ಯೆಯನ್ನು ಅಭಿವೃದ್ಧಿಗೆ ಬಂದ ಹಣದಲ್ಲಿ ನೀಡದೆ ತೆರಿಗೆ ಹಣದಲ್ಲಿ ನೀಡಬೇಕು ಎಂದು ಕೆಲವು ಸದಸ್ಯರು ಸೂಚಿಸಿದರು. ಪಟ್ಟಣದಲ್ಲಿ ಅನಧಿಕೃತವಾಗಿ ಕಟ್ಟಡ ಕಟ್ಟುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಅಂತವರಿಗೆ ದಂಡ ಹಾಕಬೇಕು. ಪುರಸಭೆ ತೆರಿಗೆ ಹಣ ಇತರೆ ನಗರ ಹಾಗೂ ಪುರಸಭೆಗಳಿಗಿಂತ ಹೆಚ್ಚಿದೆ. ಕಡಿಮೆ ಮಾಡಲು ಏನೂ ಮಾಡಬೇಕು ಎಂಬುದರ ಬಗ್ಗೆ ಯೋಚಿಸಬೇಕು ಎಂದು ಹೇಳಿದರು. ಪಟ್ಟಣದಲ್ಲಿ ಟೆಂಡರ್ ಅವಧಿ ಮುಗಿದ ಕುಡಿಯುವ ನೀರಿನ ಘಟಕಗಳ ಮರು ಟೆಂಡರ್ ಕರೆಯಬೇಕು ಹಾಗೂ ಬೀದಿ ದನಗಳ ಹಾವಳಿ ನಿಯಂತ್ರಣಕ್ಕೆ ಮುಖ್ಯಾಧಿಕಾರಿ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಸದಸ್ಯರಾದ ರವಿಕುಮಾರ ಪಾಟೀಲ, ಶರಣಯ್ಯ ಸೊಪ್ಪಿಮಠ, ಮೌನೇಶ ಮುರಾರಿ, ಸುರೇಶ ಹರಸೂರು, ದೊಡ್ಡ ಕರಿಯಪ್ಪ, ರಮೇಶ ಗುಡಿಸಲಿ, ಚೇತನ ಪಾಟೀಲ, ಭರತಶೇಠ್, ರೇಣುಕಾ ಉಪ್ಪಾರ, ಹುಲಿಗೆಮ್ಮ ಬಸವರಾಜ, ಶಕೀರಾ ಎಂ. ಸೇರಿದಂತೆ ಅನೇಕ ಸದಸ್ಯರು ಸಭೆಯಲ್ಲಿ ಇದ್ದರು. ಉಪಾಧ್ಯಕ್ಷೆ ಗೀತಾ ಶಿವರಾಜ ಬುಕ್ಕಣ್ಣ, ಮುಖ್ಯಾಧಿಕಾರಿ ನರಸರೆಡ್ಡಿ ಸೇರಿ ಪುರಸಭೆ ಅಧಿಕಾರಿಗಳು ಇದ್ದರು.