ಸಾರಾಂಶ
ಕನ್ನಡಪ್ರಭ ವಾರ್ತೆ ಪಿರಿಯಾಪಟ್ಟಣ
ಗ್ರಾಮಗಳಿಗೆ ಸ್ಮಶಾನದ ಜಾಗ ಒದಗಿಸಲು ನಿಯಮಗಳಲ್ಲಿ ಸರಳಿಕರಿಸಿ ಸೌಲಭ್ಯ ಒದಗಿಸಿ ಕೊಡಬೇಕೆಂದು ಜಿಲ್ಲಾಧಿಕಾರಿ ಜಿ. ಲಕ್ಷ್ಮಿಕಾಂತ ರೆಡ್ಡಿ ಅವರು ಅಧಿಕಾರಿಗಳಿಗೆ ಸೂಚಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ತಾಲೂಕು ಪ್ರವಾಸಕ್ಕೂ ಮುನ್ನ ವಿಧಾನ ಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ ಅವರನ್ನು ಭೇಟಿಯಾಗಿ ಸಾರ್ವಜನಿಕವಾಗಿ ಬಗೆಹರಿಸಬೇಕಾದ ಸಮಸ್ಯೆಗಳ ಬಗ್ಗೆ ಚರ್ಚಿಸಿ ಮಾತನಾಡಿದರು.
ತಾಲೂಕಿನ ಕೊಕ್ಕರೆ ಹೊಸಳ್ಳಿ ಸ್ಮಶಾನದ ಜಾಗದ ಸಮಸ್ಯೆ ಎದುರಾಗಿದ್ದು ಬಹಳಷ್ಟು ದಿನಗಳಿಂದ ಬಾಕಿಯಾಗಿ ಉಳಿದಿರುವುದಾಗಿ ಕರ್ನಾಟಕ ದಲಿತ ಚಳುವಳಿ ನವ ನಿರ್ಮಾಣ ವೇದಿಕೆ ಮುಖಂಡರಾದ ಸೀಗೂರು ವಿಜಯ ಕುಮಾರ್ ತಿಳಿಸಿದಾಗ, ಕೂಡಲೇ ಸ್ಥಳದಲ್ಲಿದ್ದ ತಹಸಿಲ್ದಾರ್ ಎನ್ಎ ಕುಂಜ್ಞಿ ಅಹಮದ್ ಅವರಿಗೆ ಜಾಗವನ್ನು ಗುರುತಿಸಿ. ಸಲ್ಲದ್ದನ್ನು ಹೇಳುವುದನ್ನು ಬಿಟ್ಟು ಗ್ರಾಮದ ಜನರಿಗೆ ಸ್ಮಶಾನದ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಇರುವ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಸೂಚಿಸಿದರು.ತಾಲೂಕಿನ ರಾವಂದೂರು ಗ್ರಾಮದ ಆದಿ ಜಾಂಬವ ಜನಾಂಗಕ್ಕೆ ಸೇರಿದ ಗ್ರಾಮ ಠಾಣಗಾಗಿ ಉಳಿಸಿಕೊಳ್ಳಲಾದ ರಸ್ತೆಯ ಜಾಗವನ್ನು ವಾಣಿಜ್ಯೋದಿಮಿಗಳು ಅತಿಕ್ರಮಸಿಕೊಂಡಿದ್ದಾರೆ. ಈ ಬಗ್ಗೆ ಅನೇಕ ಬಾರಿ ಹೋರಾಟ ಮಾಡಿದ್ದರೂ ಅಧಿಕಾರಿಗಳು ಯಾವುದೇ ರೀತಿ ಕ್ರಮವಹಿಸದೆ ವಿಳಂಬ ಮಾಡುತ್ತಿದ್ದಾರೆ ಎಂದು ಆರ್.ಡಿ. ಚಂದ್ರು ಪ್ರಸ್ತಾಪಿಸಿದರು.
ಸ್ಥಳದಲ್ಲಿದ್ದ ತಾಪಂ ಇಒ ಸುನಿಲ್ ಕುಮಾರ್ ಅವರಿಗೆ ಅಳತೆ ಮಾಡಿಸಿ ಸಂಪೂರ್ಣ ವರದಿಯನ್ನು ಸಲ್ಲಿಸುವಂತೆ ಆದೇಶಿಸಿದರು. ಗ್ರಾಮ ಠಾಣ ಜಾಗದಲ್ಲಿ ಈ ರೀತಿ ಅನ್ಯಾಯವಾಗಿದೆ ಎಂದರೆ ಸಹಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.ತಾಲೂಕು ದರಕಾಸ್ತು ಸಮಿತಿ ಸದಸ್ಯ ಟಿ. ಈರಯ್ಯ ಅವರು ಜಲ ಸಂಪನ್ಮೂಲ ಇಲಾಖೆ (ಸಣ್ಣ ನೀರಾವರಿ) ವ್ಯಾಪ್ತಿಗೆ ಒಳಪಡುವ ಅರಸನಕೆರೆಯಿಂದ ತಾತನಹಳ್ಳಿ ಕೆರೆಯ ಜೀವ ಜಲವಗಿಸಲು ಆಧಾರವಾಗಿರುವ ದೊಡ್ಡ ಕಾಲುವೆಯನ್ನು ಕೆಲವು ಜಮೀನು ಮಾಲೀಕರು ಅತಿಕ್ರಮಿಸಿಕೊಂಡಿದ್ದು, ಇನ್ನು ಕೆಲವರು ಪುರಸಭೆ ವತಿಯಿಂದ ಅನುಮತಿಯ ಆಧಾರದಲ್ಲಿ ಮಾಂಸದ ಅಂಗಡಿ ನಿರ್ಮಾಣ ಮಾಡಿಕೊಂಡಿದ್ದು ಕಾಲುವೆ ನಾಪತ್ತೆ ಮಾಡಲಾಗಿದೆ ಎಂದು ತಿಳಿಸಿದರು.
ಈ ಬಗ್ಗೆ ಸ್ಥಳ ಪರಿಶೀಲಿಸಿ ಅಗತ್ಯ ದಾಖಲೆಗಳನ್ನು ಪಡೆದು ಕ್ರಮ ವಹಿಸುವಂತೆ ತಿಳಿಸುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದರು.ಈ ವೇಳೆ ಕರ್ನಾಟಕ ದಲಿತ ಚಳುವಳಿ ನವ ನಿರ್ಮಾಣ ವೇದಿಕೆ ಮುಖಂಡರಾದ ಎಚ್.ಡಿ. ರಮೇಶ್, ತಾಲೂಕು ಆದಿ ಜಾಂಬವ ಕ್ಷೇಮಾಭಿವೃದ್ಧಿ ವೇದಿಕೆಯ ಗೌರವಾಧ್ಯಕ್ಷ ಭೂತನಹಳ್ಳಿ ಶಿವಣ್ಣ, ಜಯಸ್ವಾಮಿ, ದೇವಪುರ್ ಕುಮಾರ್, ಚಿಕ್ಕ ಕಮರವಳ್ಳಿ ಮಂಜು, ಬೇಗೂರು ಮಹಾದೇವ್, ಮುಖ್ಯ ಶಿಕ್ಷಕ ಚಂದ್ರಯ್ಯ ಮೊದಲಾದವರು ಇದ್ದರು.