ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿ ವಸತಿ ರಹಿತರಿಗೆ 50 ಸಾವಿರ ನಿವೇಶನ ಹಂಚಿಕೆಗೆ ಸರ್ಕಾರ ನಿರ್ಧರಿಸಿದೆ. ಹಾಗಾಗಿ ಜಿಲ್ಲೆಯ ಸರ್ಕಾರಿ ಜಮೀನುಗಳನ್ನು ತ್ವರಿತವಾಗಿ ಗುರುತಿಸುವಂತೆ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಸೂಚನೆ ನೀಡಿದರು.

ಹಾವೇರಿ: ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿ ವಸತಿ ರಹಿತರಿಗೆ 50 ಸಾವಿರ ನಿವೇಶನ ಹಂಚಿಕೆಗೆ ಸರ್ಕಾರ ನಿರ್ಧರಿಸಿದೆ. ಹಾಗಾಗಿ ಜಿಲ್ಲೆಯ ಸರ್ಕಾರಿ ಜಮೀನುಗಳನ್ನು ತ್ವರಿತವಾಗಿ ಗುರುತಿಸುವಂತೆ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಿವೇಶನ ರಹಿತ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಕುರಿತ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರದ ಮಾರ್ಗಸೂಚಿ ಅನುಸಾರ ಗ್ರಾಮೀಣ ಪ್ರದೇಶದಲ್ಲಿ 30*40 ಹಾಗೂ ನಗರ ಪ್ರದೇಶದಲ್ಲಿ 20*30 ಅಳತೆಯಲ್ಲಿ ನಿವೇಶನ ಹಂಚಿಕೆ ಮಾಡಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ನಿವೇಶನ ರಹಿತ ಅರ್ಹ ಫಲಾನುಭವಿಗಳನ್ನು ಗುರುತಿಸಬೇಕು ಎಂದು ಸೂಚಿಸಿದರು.

ಸೆ.15ರೊಳಗೆ ಲಭ್ಯವಿರುವ ಸರ್ಕಾರಿ ಜಮೀನುಗಳನ್ನು ಗುರುತಿಸುವ ಕಾರ್ಯ ಪೂರ್ಣಗೊಳಿಸಬೇಕು. ತಹಸೀಲ್ದಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು, ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚನೆ ನೀಡಿದರು.

ಇದೇ ಸಂದರ್ಭದಲ್ಲಿ ಹಾವೇರಿ ಹೊರವಲಯದಲ್ಲಿ ನಿರ್ಮಾಣವಾಗುತ್ತಿರುವ ಜಿ+1 ಮನೆಗಳ ನಿರ್ಮಾಣ ವಿಳಂಬದ ಕುರಿತು ರಾಜೀವಗಾಂಧಿ ನಿಗಮದ ಎಂ.ಡಿ. ಅವರಿಗೆ ಫೋನ್ ಕರೆಮಾಡಿ, ಮನೆಗಳ ನಿರ್ಮಾಣ ಶೀಘ್ರಪೂರ್ಣಗೊಳಿಸಲು ಗುತ್ತಿಗೆದಾರನಿಗೆ ಸೂಚನೆ ನೀಡುವಂತೆ ನಿರ್ದೇಶನ ನೀಡಿದರು.

ಮನೆಗಳ ನಿರ್ಮಾಣ ಸ್ಥಳದಲ್ಲಿ ರಸ್ತೆ, ನಿರ್ಮಾಣ, ಚರಂಡಿ, ವಿದ್ಯುತ್, ನೀರು ಪೂರೈಕೆ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ 403 ಎಕರೆ 18 ಗುಂಟೆ ಜಮೀನು, 120 ಸರ್ವೇ ನಂಬರ್‌ಗಳಲ್ಲಿ ಗುರುತಿಸಲಾಗಿತ್ತು. ಪರಿಶೀಲನೆ ಬಳಿಕ ಸುಮಾರು 150 ಎಕರೆ 18 ಗುಂಟೆ ಜಮೀನು ದೂರದ ಪ್ರದೇಶ ಹಾಗೂ ಇತರೆ ಕಾರಣಗಳಿಂದ ನಿವೇಶನಕ್ಕೆ ಸೂಕ್ತವಲ್ಲ ಎಂದು ಗುರುತಿಸಲಾಗಿದೆ. ಉಳಿದಂತೆ ಸುಮಾರು 253 ಎಕರೆ ಜಮೀನು, 59 ಸರ್ವೇ ನಂಬರ್‌ಗಳಲ್ಲಿ ಲಭ್ಯವಿದ್ದು, 20*30 ಅಡಿ ಅಳತೆಯಲ್ಲಿ ನಿವೇಶನಗಳನ್ನು ರೂಪಿಸಿದರೆ ಈ ಜಮೀನಿನಲ್ಲಿ ಸುಮಾರು 8,000-8,500 ನಿವೇಶನಗಳನ್ನು, 30*40 ಅಡಿ ಅಳತೆಯಲ್ಲಿ ರೂಪಿಸಿದರೆ ಸುಮಾರು 4 ರಿಂದ 5 ಸಾವಿರ ನಿವೇಶನಗಳನ್ನು ಅಭಿವೃದ್ಧಿ ಪಡಿಸಬಹುದಾಗಿದೆ. ಹಾವೇರಿ ವಿಧಾನಸಭಾ ಕ್ಷೇತ್ರದ 23 ಗ್ರಾಮಗಳಲ್ಲಿ ಸರ್ಕಾರಿ ಜಮೀನು ಗುರುತಿಸಲಾಗಿದೆ ಎಂದು ಎಂದು ಮಾಹಿತಿ ನೀಡಿದರು.

ಜಿಲ್ಲೆಯ ವಿವಿಧ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಒಟ್ಟು ಸುಮಾರು 68 ಎಕರೆ ಜಮೀನು ಲಭ್ಯವಿದ್ದು, ರಾಣಿಬೆನ್ನೂರಿನಲ್ಲಿ 10 ಎಕರೆ 20 ಗುಂಟೆ, ಬ್ಯಾಡಗಿಯಲ್ಲಿ ಸುಮಾರು 25 ಎಕರೆ ಪ್ರಸ್ತಾವಿತ ಜಮೀನು, ಹಾನಗಲ್ಲನಲ್ಲಿ 9 ಎಕರೆ, ಶಿಗ್ಗಾಂವಿಯಲ್ಲಿ 10 ಎಕರೆ, ಸವಣೂರಿನಲ್ಲಿ 6 ಎಕರೆ 20 ಗುಂಟೆ ಹಾಗೂ ಹಿರೇಕೆರೂರಿನಲ್ಲಿ ಸುಮಾರು 6 ಎಕರೆ ಸೇರಿದಂತೆ ವಿವಿಧೆಡೆ ಜಮೀನು ಗುರುತಿಸಲಾಗಿದೆ. ರಟ್ಟಿಹಳ್ಳಿಯಲ್ಲಿಯೂ ಜಮೀನು ಲಭ್ಯವಿದ್ದು ಎಂದು ಮಾಹಿತಿ ನೀಡಿದರು.

ಗ್ರಾಮೀಣ ಪ್ರದೇಶದಲ್ಲಿ ಹಿಂದೆ ನಡೆದ ಸಮೀಕ್ಷೆಯಲ್ಲಿ ಸುಮಾರು 9 ರಿಂದ 16 ಸಾವಿರದಷ್ಟು ನಿವೇಶನರಹಿತ ಕುಟುಂಬಗಳ ಮಾಹಿತಿ ಲಭ್ಯವಿದ್ದು, ಹೊಸದಾಗಿ ಅರ್ಹ ಫಲಾನುಭವಿಗಳನ್ನು ಗುರುತಿಸುವ ಅಗತ್ಯವಿದ್ದು, ಕುಟುಂಬ ವಿಭಜನೆ ಹಾಗೂ ವಿವಾಹದ ನಂತರ ಪ್ರತ್ಯೇಕವಾಗಿ ವಾಸಿಸುತ್ತಿರುವವರನ್ನೂ ಪರಿಗಣಿಸಿ ಸಮಗ್ರವಾಗಿ ಫಲಾನುಭವಿಗಳ ಪಟ್ಟಿಯನ್ನು ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅಕ್ರಮ-ಸಕ್ರಮ ಯೋಜನೆಯಡಿ ತಿರಸ್ಕತವಾದ ಫಲಾನುಭವಿಗಳು ಇದ್ದರೆ ಅವರನ್ನು ಗುರುತಿಸಿ, ಒಟ್ಟಾರೆ ಜಿಲ್ಲೆಯ ಅರ್ಹ ವಸತಿ ರಹಿತ ಫಲಾನುಭವಿಗಳನ್ನು ಸಮೀಕ್ಷೆ ಹಾಗೂ ಸರ್ಕಾರಿ ಜಮೀನು ಮತ್ತು ಖಾಸಗಿ ಜಮೀನುಗಳನ್ನು ಗುರುತಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಹುಡಾ ಅಧ್ಯಕ್ಷ ಎಸ್‌ಎಫ್‌ಎನ್ ಗಾಜಿಗೌಡ್ರ, ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ.ಎಂ. ಮೈದೂರ, ಜಿಪಂ ಸಿಇಒ ದಲ್ಜಿತ ಕುಮಾರ್, ಅಪರ ಜಿಲ್ಲಾಧಿಕಾರಿ ನಾಗರಾಜ್.ಎಲ್, ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬ್ಳೆ, ತಹಸೀಲ್ದಾರ ಶರಣಮ್ಮ, ಪೌರಾಯುಕ್ತ ಎಚ್.ಕಾಂತರಾಜು, ಕೆಸಿಸಿ ಬ್ಯಾಂಕ್ ನಿರ್ದೇಶಕ ಕೊಟ್ರೇಶಪ್ಪ ಬಸೇಗಣ್ಣಿ, ನಗರಸಭೆ ಮಾಜಿ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಆಶ್ರಯ ಸಮಿತಿ ಸದಸ್ಯರು, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು ಇತರರು ಇದ್ದರು.

ಕೆಲಸ ಮಾಡಿ ಇಲ್ಲ ಬೇರೆಕಡೆಗೆ ಹೋಗಿ..

ನಿವೇಶನ ಹಂಚಿಕೆ ವಿಷಯವಾಗಿ ಅಧಿಕಾರಿಗಳು ಬಹಳ ಜವಾಬ್ದಾರಿ ಹಾಗೂ ಮುತುವರ್ಜಿಯಿಂದ ಕೆಲಸ ಮಾಡಬೇಕು. ನಾನು ಎರಡೆರಡು ಬಾರಿ ಹೇಳುತ್ತೇನೆ, ಕೆಲಸ ಮಾಡಿಲ್ಲ ಅಂದರೆ ಬೇರೆಕಡೆಗೆ ಹೋಗಬಹುದು. ನಾನು ಏನು ಕ್ರಮಕೈಗೊಳ್ಳಲ್ಲ ಎಂದು ಅಧಿಕಾರಿಗಳು ಬಹಳ ಹಗುರವಾಗಿ ಪರಿಗಣಿಸಬೇಡಿ ಎಂದು ಎಚ್ಚರಿಕೆ ನೀಡಿದ ಸಚಿವರು, ಅಧಿಕಾರಿಗಳಿಂದ ಕೆಲಸ ತೆಗೆದುಕೊಳ್ಳಬೇಕು, ಕೆಲಸ ಮಾಡದ ಹಾಗೂ ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳನ್ನು ಮುಲಾಜಿಲ್ಲದೇ ಅಮಾನತುಳಿಸಿ ಎಂದು ಸಚಿವ ರುದ್ರಪ್ಪ ಲಮಾಣಿ ಅವರು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದರು.