ಹೋಬಳಿಗಳಲ್ಲಿ ರಸಗೊಬ್ಬರ ಗೋದಾಮಿಗೆ ಜಾಗ ಗುರುತಿಸಿ

| Published : Feb 19 2025, 12:47 AM IST

ಸಾರಾಂಶ

ಮಾಗಡಿ: ತಾಲೂಕಿನ ರೈತರಿಗೆ ಅನುಕೂಲವಾಗುವ ದೃಷ್ಟಿಯಿಂದ ಪ್ರತಿ ಹೋಬಳಿಯಲ್ಲೂ ದಾಸ್ತಾನು ಕೇಂದ್ರ ಕಟ್ಟಿಸಲು ಜಾಗ ಗುರುತಿಸುವಂತೆ ಕೃಷಿ ಅಧಿಕಾರಿಗಳಿಗೆ ಶಾಸಕ ಎಚ್.ಸಿ.ಬಾಲಕೃಷ್ಣ ತಾಕೀತು ಮಾಡಿದರು.

ಮಾಗಡಿ: ತಾಲೂಕಿನ ರೈತರಿಗೆ ಅನುಕೂಲವಾಗುವ ದೃಷ್ಟಿಯಿಂದ ಪ್ರತಿ ಹೋಬಳಿಯಲ್ಲೂ ದಾಸ್ತಾನು ಕೇಂದ್ರ ಕಟ್ಟಿಸಲು ಜಾಗ ಗುರುತಿಸುವಂತೆ ಕೃಷಿ ಅಧಿಕಾರಿಗಳಿಗೆ ಶಾಸಕ ಎಚ್.ಸಿ.ಬಾಲಕೃಷ್ಣ ತಾಕೀತು ಮಾಡಿದರು.

ಪಟ್ಟಣದ ತಾಪಂ ಆವರಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ರಸಗೊಬ್ಬರ ದಾಸ್ತಾನು ಮಾಡಲು ಕುದೂರು- ತಿಪ್ಪಸಂದ್ರ, ಮಾಡಬಾಳ್- ಕಸಬಾ ಹೋಬಳಿಯಲ್ಲಿ ಗೋದಾಮು ನಿರ್ಮಿಸಲು ಜಾಗ ಗುರುತಿಸುವಂತೆ ಕೃಷಿ ಅಧಿಕಾರಿ ವಿಜಯ ಸವಣೂರು ಅವರಿಗೆ ಸೂಚಿಸಿ, ಒಂದು ಗೋದಾಮು ನಿರ್ಮಾಣಕ್ಕೆ ₹25 ಲಕ್ಷ ಅಂದಾಜು ಆಗಲಿದ್ದು, ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಗೋದಾಮು ನಿರ್ಮಾಣ ಮಾಡಲಾಗುತ್ತದೆ. ಅಧಿಕಾರಿಗಳು ಜಾಗ ಗುರುತಿಸಿ ನನ್ನ ಗಮನಕ್ಕೆ ತರಬೇಕೆಂದು ಶಾಸಕರು ತಿಳಿಸಿದರು.

ಬಿತ್ತನೆ ಬೀಜ ರಸಗೊಬ್ಬರ ಸಂಗ್ರಹಿಸಿ:

ಬೇಸಿಗೆ ಮುಗಿದು ಮಳೆಗಾಲ ಆರಂಭವಾಗುವ ಮುನ್ನವೇ ಕೃಷಿ ಇಲಾಖೆ ಬಿತ್ತನೆ ಬೀಜ ಮತ್ತು ರಸಗೊಬ್ಬರ ಸಂಗ್ರಹಿಸುವ ಕೆಲಸ ಮಾಡಿಕೊಳ್ಳಬೇಕು. ನಮ್ಮ ತಾಲೂಕಿನಲ್ಲಿ ಅತಿ ಹೆಚ್ಚು ರಾಗಿ, ತೊಗರಿ, ಹಲಸಂದಿ ಬೆಳೆಗಳಿಗೆ ಸಾಕಷ್ಟು ಬೇಡಿಕೆ ಇದ್ದು, ಬಿತ್ತನೆ ಬೀಜ ಸಂಗ್ರಹಿಸುತ್ತ ಅಧಿಕಾರಿಗಳು ಗಮನ ಹರಿಸಬೇಕು. ರೈತರಿಗೆ ಇಲಾಖೆವಾರು ಸಿಗುವ ಸೌಲಭ್ಯಗಳ ಬಗ್ಗೆ ಸರಿಯಾದ ಮಾಹಿತಿ ನೀಡಬೇಕು. ಇಲ್ಲವಾದರೆ ಸರ್ಕಾರದ ಹಣ ವಾಪಸ್ ಹೋಗುತ್ತದೆ. ಇದು ಸರಿಯಲ್ಲ, ಅಧಿಕಾರಿಗಳು ರೈತರಿಗೆ ಸೂಕ್ತ ಮಾಹಿತಿ ನೀಡಬೇಕು ಎಂದು ತಿಳಿಸಿದರು.

ಯಂತ್ರೋಪಕರಣಗಳನ್ನು ರೈತರು ಏಕೆ ಬಳಸಿಕೊಳ್ಳುತ್ತಿಲ್ಲ. ಪರಿಕರಗಳ ಬಾಡಿಗೆ ದರ ಹೆಚ್ಚಿದ್ದರೆ ಸಚಿವರ ಬಳಿ ಚರ್ಚಿಸಿ ಬಾಡಿಗೆ ದರ ಕಡಿಮೆಗೊಳಿಸಲಾಗುವುದು. ಕೃಷಿ ಹೊಂಡದ ಯೋಜನೆಯಲ್ಲಿ ಮಾತ್ರ 470 ನಿರ್ಮಾಣ ಮಾಡಿದ್ದು ಉಳಿದ ಕೃಷಿ ಹೊಂಡಗಳನ್ನು ಏಕೆ ನಿರ್ಮಾಣ ಮಾಡಲು ರೈತರು ಮುಂದಾಗುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳು ರೈತರಿಂದ ಮಾಹಿತಿ ಪಡೆದು ಕಾಮಗಾರಿ ಆರಂಭಿಸಬೇಕು ಎಂದು ತಿಳಿಸಿದರು.

2 ಎಕರೆ ಜಮೀನು ಹೊಂದಿರುವ ಫಲನುಭವಿಗಳಿಗೆ ಕುರಿ ಸಾಕಾಣಿಕೆಗೆ ₹ 50 ಲಕ್ಷದಿಂದ 1 ಕೋಟಿವರೆಗೆ ಸಾಲ ನೀಡಲಾಗುವುದು. ಇದರಲ್ಲಿ ಶೇ.50 ಸಬ್ಸಿಡಿ ನೀಡಲಾಗುವುದು. ಯುವಕರು ನಗರ ಪ್ರದೇಶಗಳಿಗೆ 10 ಸಾವಿರ ಸಂಬಳಕ್ಕೆ ಕೆಲಸಕ್ಕೆ ಹೋಗದೆ ಈ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಿ. ಮಹಿಳೆಯರಿಗೂ ಅವಕಾಶವಿದ್ದು, 200 ಮಂದಿ ಅರ್ಜಿ ಸಲ್ಲಿಸಿದ್ದಾರೆ ಎಂದು ಪಶುಪಾಲನಾ ಅಧಿಕಾರಿಗಳು ತಿಳಿಸಿದರು.

ತಾಲೂಕಿನಲ್ಲಿ 64 ನೂತನ ಶಾಲಾ ಕೊಠಡಿ, 98 ಕೊಠಡಿಗಳ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು. ಈ ಬಾರಿಯ ಪಿಯುಸಿ ‌ಮತ್ತು ಎಸ್ಸೆಸ್ಸೆಲ್ಸಿಯಲ್ಲಿ ತಾಲೂಕಿನಲ್ಲಿ ಉತ್ತಮ ಫಲಿತಾಂಶಕ್ಕೆ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಕೊಡುಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ್‌ಗೆ ಶಾಸಕರು ತಿಳಿಸಿದರು.

ಸಮರ್ಪಕವಾಗಿ ಪರೀಕ್ಷೆ ನಡೆಸಿದರೆ 30 ಮಂದಿ ಉತ್ತೀರ್ಣರಾಗುವುದಿಲ್ಲ. ಇದಕ್ಕೆ ಪಾಲಕರ ಬೇಜವಾಬ್ದಾರಿಯೂ ಕಾರಣ. ಕೆಲ ಶಿಕ್ಷಕರಿಗೆ ಎಬಿಸಿಡಿ ಬರುವುದಿಲ್ಲ. ಮೊದಲು ಅವರಿಗೆ ತರಬೇತಿ ನೀಡುವ ಅಗತ್ಯವಿದೆ ಎಂದು ಶಾಸಕ ಬಾಲಕೃಷ್ಣ ಹೇಳಿದರು.

ಸಭೆಯಲ್ಲಿ ತಹಸೀಲ್ದಾರ್ ಶರತ್ ಕುಮಾರ್, ಇಒ ಜೈಪಾಲ್, ಕೆಡಿಪಿ ಸದಸ್ಯರಾದ ಪ್ರಕಾಶ್, ಕೃಷ್ಣಪ್ಪ, ಕೆಡಿಪಿ ಟಿ.ಜಿ.ವೆಂಕಟೇಶ್, ಮುನೀರ್ ಆಹಮದ್, ಸಿಡಿಪಿಒ ಸುರೇಂದ್ರ, ವಲಯ ಅರಣ್ಯಾಧಿಕಾರಿ ಚೈತ್ರಾ, ಕೆ.ಟಿ. ಮಂಜುನಾಥ್, ಡಾ.ಜ್ಞಾನಪ್ರಕಾಶ್ ಇತರರು ಭಾಗವಹಿಸಿದ್ದರು.

(ಫೋಟೋ ಕ್ಯಾಪ್ಷನ್‌)

ಮಾಗಡಿ ತಾಪಂ ಆವರಣದಲ್ಲಿ ಶಾಸಕ ಬಾಲಕೃಷ್ಣ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ತಹಸೀಲ್ದಾರ್ ಶರತ್ ಕುಮಾರ್, ತಾಪಂ ಇಒ ಜೈಪಾಲ್‌, ವಿವಿಧ ಇಲಾಖೆಗಳ ಅಧಿಕಾರಿಗಳು, ಸದಸ್ಯರು ಹಾಜರಿದ್ದರು.