ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರುಪ್ರಸ್ತುತ ಕಾಲಘಟ್ಟದಲ್ಲಿ ಅದ್ಭುತವಾಗಿ ಕಥೆಗಳನ್ನು ಬರೆಯುವವರಿದ್ದಾರೆ. ಆದರೆ ಅವುಗಳನ್ನು ಗುರುತಿಸುವವರ ಸಂಖ್ಯೆ ಕಡಿಮೆಯಾಗಿದೆ. ಕಥೆಗಳನ್ನು ಗುರುತಿಸುವ ಕೆಲಸ ಆಗಬೇಕಿದೆ ಎಂದು ಕಥೆಗಾರ, ‘ಕನ್ನಡಪ್ರಭ’ ಪುರವಣಿ ಸಂಪಾದಕ ಜೋಗಿ (ಗಿರೀಶ್ ರಾವ್ ಹತ್ವಾರ್) ಅಭಿಪ್ರಾಯಪಟ್ಟಿದ್ದಾರೆ.ನಗರದಲ್ಲಿ ಮಂಗಳೂರು ಲಿಟ್‌ಫೆಸ್ಟ್‌ನ ಮೂರನೇ ದಿನವಾದ ಭಾನುವಾರ ‘ಕಥಾ ಸಮಯ’ ಗೋಷ್ಠಿಯಲ್ಲಿ ಅವರು ತಮ್ಮ ವಿಚಾರಗಳನ್ನು ಪ್ರಸ್ತುತಪಡಿಸಿದರು.ಎಲ್ಲ ಭಾಷೆಗಳಲ್ಲೂ ಕಥೆಗಳು ಹೆಚ್ಚಿನ ಸಂಖ್ಯೆಯಲ್ಲಿ ಹೊರಬರುತ್ತಿವೆ. ಕನ್ನಡದಲ್ಲೇ ತಿಂಗಳಿಗೆ ಏನಿಲ್ಲವೆಂದರೂ 100- 150ರಷ್ಟು ಕತೆಗಳು ಬರುತ್ತಿವೆ. ಅವುಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ಅಗತ್ಯವಿದೆ ಎಂದು ಜೋಗಿ ಆಶಿಸಿದರು.ಕಥೆ ಎಂದರೆ ಪ್ರತಿಕ್ರಿಯೆ: ಕತೆಯ ಓದುಗನೇ ಬೇರೆ, ಲೇಖಕನೇ ಬೇರೆ. ಇವೆರಡು ಭಿನ್ನ ಕಂಪಾರ್ಟ್‌ಮೆಂಟ್‌ಗಳು. ಲೇಖಕ ಬರೆಯುವ ಹೊತ್ತಿಗೆ ಆ ಹೊತ್ತಿನ ಸನ್ನಿವೇಶ, ಜೀವನ, ಅನುಭವ ಎಲ್ಲವನ್ನು ಒಳಗೊಳ್ಳುತ್ತದೆ. ಓದು ಅರಿವನ್ನು ವಿಸ್ತಾರ ಮಾಡಿದರೆ, ಕತೆ ಎನ್ನುವುದು ಅನುಭವದ ತುಣುಕನ್ನು ಹೇಳುವಂಥದ್ದು. ಕತೆ ಎಂದರೆ ನನ್ನ ಕಾಲಕ್ಕೆ ನಾನು ಕೊಡುವ ಪ್ರತಿಕ್ರಿಯೆ ಎಂದು ವಿಶ್ಲೇಷಿಸಿದರು.ಕಟ್ಟಿದ ಕಥೆಗಳು, ಹುಟ್ಟಿದ ಕಥೆಗಳು: ಕಟ್ಟಿದ ಕಥೆಗಳು ಮತ್ತು ಹುಟ್ಟಿದ ಕಥೆಗಳಿರುತ್ತವೆ. ಹುಟ್ಟಿದ ಕಥೆಗಳಲ್ಲಿ ಸಹಜವಾಗಿ ಪ್ರಾದೇಶಿಕತೆ ಇರುತ್ತದೆ. ತೇಜಸ್ವಿಯವರ ಅಷ್ಟೂ ಕಥೆಗಳು ಮೂಡಿಗೆರೆಯನ್ನು ದಾಟಿಲ್ಲ. ನಾನು ಬರೆದ ಹೆಚ್ಚಿನ ಕಥೆಗಳು ಗುರುವಾಯನಕೆರೆ ಮೂಲದ್ದು. ನಾವು ಪ್ರಾದೇಶಿಕವಾಗಿ ನೋಡಿದ ಪಾತ್ರಗಳು ಕಥೆಯೊಳಗೆ ರಿಕ್ರಿಯೇಟ್ ಆಗುತ್ತವೆ. ಆದರೆ ಓಹೆನ್ರಿಯಂಥವರದ್ದು ಕಟ್ಟಿದ ಕಥೆಗಳು. ಒಂದು ಸನ್ನಿವೇಶವನ್ನು ಕಲ್ಪಿಸಿಕೊಂಡು, ಪೂರಕ ಪಾತ್ರಗಳನ್ನು ಸೃಷ್ಟಿಸಿ ದೇಶಾತೀತವಾಗಿ ಜೇಮ್ಸ್ ಬಾಂಡ್ ಸಿನೆಮಾಗಳಂತೆ ಇರುತ್ತವೆ. ಕಟ್ಟಿದ ಕಥೆಗಳನ್ನು ಬರೆಯುವಾಗ ಪ್ರದೇಶ ಯಾವುದೂ ಮುಖ್ಯವಾಗಲ್ಲ, ಅದಕ್ಕೆ ಕೌಶಲ್ಯ ಬೇಕಾಗುತ್ತದೆ. ಆದರೆ ಹುಟ್ಟಿದ ಕಥೆಗಳನ್ನು ಓದುವಾಗ ನಮ್ಮದಾಗಿಬಿಡುವ ಭಾವ ಹುಟ್ಟುತ್ತದೆ ಎಂದು ಜೋಗಿ ಹೇಳಿದರು.ನವ್ಯ, ದಲಿತ, ಬಂಡಾಯ ಹೀಗೆ ಸಾಹಿತ್ಯ ಪ್ರಕಾರಗಳ ವಿಂಗಡಣೆಯನ್ನು ವಿಮರ್ಶಕರು ಮಾಡಿದ್ದೇ ವಿನಾ ಕಥೆಗಾರರಲ್ಲ. ಇಂದು ವಿಮರ್ಶಕರು ಕಡಿಮೆ ಇರುವುದರಿಂದ ಸಾಹಿತ್ಯದ ವಿಂಗಡಣೆ ಮಾಡುವ ಪರಿಸ್ಥಿತಿ ಇಲ್ಲ. ಆದರೆ ಕಥೆಗಳು ಮಾತ್ರ ಹೊರಬರುತ್ತಲೇ ಇವೆ. ಕೆಲವೊಮ್ಮ ಒಬ್ಬನೇ ಲೇಖಕ ಹಲವು ಪ್ರಕಾರಗಳಲ್ಲಿ ಬರೆಯುವುದೂ ನಡೆದಿದೆ. ಕೆಎಸ್‌ನ, ಅಡಿಗರಲ್ಲಿ ಇಂಥ ಬದಲಾವಣೆ ಆಗಿದೆ ಎಂದು ವಿಶ್ಲೇಷಿಸಿದರು.
‘ವಾದ’ದ ಕಥೆಗಳು ಬಾಳಲ್ಲ:ಲೇಖಕ ತನ್ನ ವಿಚಾರವನ್ನು ಓದುಗರ ಮೇಲೆ ಹೇರಿಕೆ ಮಾಡುವ ಪ್ರಯತ್ನ ನಡೆಯುತ್ತದೆಯೇ ಎಂಬ ಪ್ರೇಕ್ಷಕರ ಪ್ರಶ್ನೆಗೆ ಉತ್ತರಿಸಿದ ಜೋಗಿ, ಲೇಖಕ ಮಾಡುವುದೇ ಪ್ರಪಗಾಂಡ, ಒಂದು ವಿಚಾರ ಇದ್ದರೆ ಅದು ನೂರಾರು ಮಂದಿಗೆ ಗೊತ್ತಾಗಬೇಕು. ಓದುಗ ಓದುವುದು ಕೂಡ ಅದಕ್ಕಾಗಿಯೇ. ಮ್ಯಾಕ್ಸಿಂ ಗೋರ್ಕಿಯ ‘ಮದರ್’ ಕಾದಂಬರಿ ಓದಿದಾಗ ದೇಶದಲ್ಲಿ ಆ ಕಾಲಕ್ಕೆ ಏನು ನಡೀತಿತ್ತು, ರಾಜಕೀಯ ಏನಿತ್ತು, ಧಾರ್ಮಿಕತೆ.. ಎಲ್ಲವೂ ಅರಿವಿಗೆ ಬರುತ್ತದೆ. ಒಳ್ಳೆಯ ಕತೆ ಅದು ಹುಟ್ಟಿಸುವ ಸಹಾನುಭೂತಿಯಿಂದ ಇಷ್ಟವಾಗುತ್ತದೆ. ಆದರೆ ವಾದ, ಸಿದ್ಧಾಂತಗಳಿಂದ ಹುಟ್ಟಿದ ಕಥೆ ಹೆಚ್ಚು ಸಮಯ ಬಾಳಲ್ಲ ಎಂದರು.ಸತ್ಯಬೋಧ ಜೋಶಿ ಅವರು ಗೋಷ್ಠಿಯನ್ನು ನಡೆಸಿಕೊಟ್ಟರು.ಪ್ರಕಾರಗಳನ್ನು ಮೀರೋ ಶಕ್ತಿ ಸಾಹಿತ್ಯಕ್ಕಿದೆ: ಬಳಗಾರಕಥೆಯ ಪ್ರಾದೇಶಿಕತೆ ಎನ್ನುವುದು ಲೇಖಕನ ಅಂತರಂಗದ ಅನನ್ಯ ಭಾವನೆ. ಅನನ್ಯವಾದದ್ದರಲ್ಲಿ ಅನ್ಯವಾದುದನ್ನು ಧಾರಣೆ ಮಾಡುವ ಶಕ್ತಿಯನ್ನು ಕಥೆ ಪಡೆದುಕೊಂಡಾಗ ಅದು ಸರ್ವ ದೇಶೀಯತೆ ಆಗುತ್ತದೆ ಎಂದು ಕಥೆಗಾರ, ಲೇಖಕ ಶ್ರೀಧರ ಬಳಗಾರ ಹೇಳಿದರು.ಕಾರಂತರ ‘ಚೋಮನ ದುಡಿ’ ಕಾದಂಬರಿಯಲ್ಲಿ ಚೋಮನ ಪ್ರದೇಶದ ವಿವರಗಳು, ದುಡಿ ಇತ್ಯಾದಿಗಳೆಲ್ಲವೂ ತೀರ ಪ್ರಾದೇಶಿಕ. ಆದರೆ ಆ ದುಡಿಯಿಂದ ಹೊರಟ ಧ್ವನಿ, ಯಾತನೆ, ಸಂಕಟ, ಶೋಷಣೆಯ ಧ್ವನಿ ಜಾಗತಿಕವಾದುದು. ಪಂಪನಲ್ಲೂ ಅದು ಕಾಣಸಿಗುತ್ತದೆ ಎಂದು ವಿಶ್ಲೇಷಿಸಿದರು.ಸಾಹಿತ್ಯದ ಪ್ರಕಾರಗಳನ್ನು ಸಾಹಿತ್ಯದ ಚರಿತ್ರೆ ಮಾಡೋರು ಸೃಷ್ಟಿಸಿದ್ದು. ವಿದ್ಯಾರ್ಥಿಗಳಿಗೆ ಪರೀಕ್ಷೆಗಾಗಿ ವಿಂಗಡಣೆ ಮಾಡಿರುವಂಥದ್ದು. ಆದರೆ ಇಂಥ ಪ್ರಕಾರಗಳನ್ನು ಮೀರುವ ಶಕ್ತಿ ಸಾಹಿತ್ಯಕ್ಕಿದೆ ಎಂದು ಶ್ರೀಧರ ಬಳಗಾರ ಹೇಳಿದರು.ಯಾವುದೇ ಕೃತಿ ತನ್ನ ಕಲಾತ್ಮಕ ಧೋರಣೆಯಿಂದ, ಪ್ರೀತಿ, ಸಹಾನುಭೂತಿಯನ್ನು ಅನಂತ ಕಾಲದವರೆಗೆ ಬರೆಯುವಂಥ ಧಾರಣಾ ಶಕ್ತಿಯನ್ನು ಹೊಂದಿದ್ದರೆ ಅದು ಉತ್ತಮ ಕೃತಿ ಎಂದ ಅವರು, ಲೇಖಕನು ತನ್ನ ತೀರ್ಮಾನಗಳನ್ನು ಓದುಗರ ಮೇಲೆ ಹೇರುವವನಲ್ಲ. ಲೇಖಕ ಬರೆಯೋದು ಮಾತ್ರ. ಅದರ ಮುಂದುವರಿಕೆಯ ಕಟ್ಟುವಿಕೆ ಓದುಗರ ಅನುಭವದ ಮೇಲೆ ಆಗುವಂಥದ್ದು ಎಂದರು.