ಕನ್ನಡಪ್ರಭ ವಾರ್ತೆ ಸಿದ್ದಾಪುರ
ತಾಲೂಕಿನ ಭುವನಗಿರಿ ಸಮೀಪದ ಹೊಸಳ್ಳಿಯಲ್ಲಿ ಕರ್ನಾಟಕ ಜಾನಪದ ಪರಿಷತ್ತು ಸಿದ್ದಾಪುರ ಘಟಕ ಹಾಗೂ ಶ್ರೀರಾಮ ದೇವಾಲಯ ಹೊಸಳ್ಳಿ ಇವುಗಳ ಸಹಯೋಗದಲ್ಲಿ ಜಾನಪದ ಸಂಗಮ ಕಾರ್ಯಕ್ರಮ ಜರುಗಿತು.ಕಾರ್ಯಕ್ರಮವನ್ನು ಕರ್ನಾಟಕ ಜಾನಪದ ಪರಿಷತ್ತಿನ ಉತ್ತರ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಡಾ. ವೆಂಕಟೇಶ್ ನಾಯ್ಕ ಉದ್ಘಾಟಿಸಿ ಮಾತನಾಡಿ, ಜಾನಪದವೆಂಬುದು ನಮ್ಮ ಗ್ರಾಮೀಣ ಬದುಕಿನ ಅಸ್ಮಿತೆ. ಜನಪದ ಸಾಹಿತ್ಯವು ನಮ್ಮ ಬದುಕಿನ ಎಲ್ಲವನ್ನೂ ಒಳಗೊಂಡಿದೆ. ಜಾನಪದ ವಿದ್ವಾಂಸ ಡಾ. ಎಚ್.ಎಲ್. ನಾಗೇಗೌಡರ ಕನಸಿನ ಕೂಸಾದ ಜಾನಪದ ಲೋಕವು ಜಗತ್ತಿನ ಗಮನ ಸೆಳೆಯುತ್ತಿದೆ. ನಾವು ನಮ್ಮ ಕಲೆ, ಸಂಸ್ಕೃತಿ ಮುಂತಾದವುಗಳನ್ನು ರಕ್ಷಿಸಿಕೊಂಡು ಅವುಗಳನ್ನು ಮೇಲಿಂದ ಮೇಲೆ ನೆನಪಿಸಿಕೊಳ್ಳಬೇಕಾಗಿದೆ ಎಂದರು.
ಉಪನ್ಯಾಸಕ ರತ್ನಾಕರ ನಾಯ್ಕ ಜಾನಪದ ಸಂಸ್ಕೃತಿಯಿಂದ ವಿಮುಖವಾಗುತ್ತಿರುವ ಹಳ್ಳಿಗಳು ಎಂಬ ವಿಷಯದ ಕುರಿತು ಉಪನ್ಯಾಸ ನೀಡಿ ಜಾನಪದ ಸಾಹಿತ್ಯವು ನಮ್ಮ ಜನರ ನೋವು ನಲಿವುಗಳನ್ನು ವ್ಯಕ್ತಪಡಿಸುವ ಮಾಧ್ಯಮವಾಗಿತ್ತು. ಅದು ನಿರಂತರವಾಗಿ ಮುಂದುವರಿಯುವ ಪ್ರಕ್ರಿಯೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಕಜಾಪದ ಅಧ್ಯಕ್ಷ, ಪ್ರಾಚಾರ್ಯ ಎಂ.ಕೆ. ನಾಯ್ಕ ಹೊಸಳ್ಳಿ ಮಾತನಾಡಿ ಜನಪದ ಕಥೆಗಳು ಮತ್ತು ಹಾಡುಗಳು ನಮ್ಮ ಬದುಕಿನ ಸಮಗ್ರತೆಯನ್ನು ಸೂಚಿಸುವ ಸಾಹಿತ್ಯ ಪ್ರಕಾರಗಳಾಗಿವೆ. ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಪರಂಪರೆಯೊಂದಿಗೆ ಜೀವಂತವಾಗಿದ್ದ ಕಲೆಗಳು ಈಗ ಕಣ್ಮರೆಯಾಗುತ್ತಿರುವುದು ನೋವಿನ ಸಂಗತಿ ಎಂದರು.
ಶ್ರೀರಾಮ ದೇವಾಲಯ ಸಮಿತಿಯ ಅಧ್ಯಕ್ಷ ಕನ್ನಪ್ಪ ಈರಾ ನಾಯ್ಕ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಶ್ರೀ ಸೇವಾ ಸಂಕಲ್ಪ ಟ್ರಸ್ಟ್ ನ ಅಧ್ಯಕ್ಷ ಪಿ.ಬಿ.ಹೊಸೂರು ಮಾತನಾಡಿದರು. ಕಜಾಪ ಕಾರ್ಯದರ್ಶಿ ಗೋಪಾಲ ಕಾನಳ್ಳಿ ಸನ್ಮಾನಪತ್ರ ವಾಚಿಸಿದರು. ಸಹಕಾರ್ಯದರ್ಶಿ ಚಂದ್ರಶೇಖರ ಕುಂಬ್ರಿಗದ್ದೆ, ಸುಷಿರ ಸಂಗೀತ ಪರಿವಾರದ ಸಂಚಾಲಕ ನಾರಾಯಣ ಹೆಗಡೆ ಕಲ್ಲಾರೆಮನೆ ವೇದಿಕೆಯಲ್ಲಿದ್ದರು. ಕಜಾಪ ಸದಸ್ಯೆ ಪ್ರಜ್ಞಾ ಹೆಗಡೆ ಹಿತ್ತಲಕೈ ಪ್ರಾರ್ಥಿಸಿದರು. ಜೈರಾಮ ಭಟ್ಟ ಗುಂಜಗೋಡ ಸ್ವಾಗತಿಸಿ ಜಾನಪದ ಸಂಗಮ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕೋಶಾಧ್ಯಕ್ಷ ಅಣ್ಣಪ್ಪ ಶಿರಳಗಿ ನಿರೂಪಿಸಿದರು. ರಾಘವೇಂದ್ರ ಶೆಟ್ಟಿ ಸಹಕರಿಸಿದರು.
ಕಾಂಚನಾ ಮತ್ತು ಪೂರ್ವಿಕಾ ಇವರ ಯಕ್ಷ ನೃತ್ಯದೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಹೊಸಳ್ಳಿಯ ಪುರುಷರು ಪ್ರಸ್ತುತ ಪಡಿಸಿದ ಭಜನೆ, ಬಿಂಗಿ ಹಾಡುಗಳು, ಮೂಡಲ ಪಾಯದ ಹಾಡುಗಳು, ಮಹಿಳೆಯರು ಹಾಡಿದ ಗೌರಿ ಹಬ್ಬದ ಹಾಡು, ಮದುವೆ ಹಾಡುಗಳು, ಕೋಲಸಿರ್ಸಿಯ ಮಹಿಳೆಯರ ತಂಡ ಹಾಡಿದ ಸೋಬಾನೆ ಪದ, ಬೀಸುವ ಹಾಡು, ಜಾನಪದ ಗೀತೆಗಳು, ರಾಜು ಮರನ್ ಕೋಲಸಿರ್ಸಿಯವರ ಜಾನಪದಗೀತೆ, ಲಕ್ಷ್ಮೀನಾರಾಯಣ ಹೆಗಡೆ ಕಾಶಿಗದ್ದೆ ಹಾಗೂ ಎಂ.ಐ. ನಾಯ್ಕ ಹಾಡಿದ ಲಾವಣಿಗಳು, ಗೋಪಾಲ ಕಾನಳ್ಳಿ ಮತ್ತು ತಂಡದವರು ಪ್ರಸ್ತುತ ಪಡಿಸಿದ ಸಂಗ್ಯಾಬಾಳ್ಯಾ ಸಣ್ಣಾಟದ ಪದಗಳು, ಜಾನಪದ ಗೀತೆಗಳು, ತತ್ವಪದ, ಮದುವೆಯಲ್ಲಿ ಬಳುವಳಿ ಕೇಳುವ ಪದಗಳನ್ನು ಪ್ರಸ್ತುತಪಡಿಸಲಾಯಿತು. ಹೊಸಳ್ಳಿ ನಾಗರಿಕರ ಸಹಕಾರದೊಂದಿಗೆ ನಲವತ್ತಕ್ಕೂ ಹೆಚ್ಚು ಕಲಾವಿದರು ಜಾನಪದ ಸಂಗಮ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಡಾ. ವೆಂಕಟೇಶ ನಾಯ್ಕ ಅವರನ್ನು ಶ್ರೀರಾಮ ಭಜನಾ ಮಂಡಳಿ ಹೊಸಳ್ಳಿ ಹಾಗೂ ಕಜಾಪ ವತಿಯಿಂದ ಅವರನ್ನು ಸನ್ಮಾನಿಸಲಾಯಿತು. ಚಂದ್ರಶೇಖರ ಕುಂಬ್ರಿಗದ್ದೆ ನಿರೂಪಿಸಿ, ವಂದಿಸಿದರು.