ಅಯೋಧ್ಯೆ, ಕಾಶಿ, ಮಥುರಾ ದೇಶದ ಬಹುಸಂಖ್ಯಾತರ ಅಸ್ಮಿತೆ: ಕೇಂದ್ರ ಸಚಿವ ಎ.ನಾರಾಯಣಸ್ವಾಮಿ

| Published : Feb 12 2024, 01:31 AM IST

ಅಯೋಧ್ಯೆ, ಕಾಶಿ, ಮಥುರಾ ದೇಶದ ಬಹುಸಂಖ್ಯಾತರ ಅಸ್ಮಿತೆ: ಕೇಂದ್ರ ಸಚಿವ ಎ.ನಾರಾಯಣಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಅಯೋಧ್ಯೆ ಪ್ರವಾಸಿಗರಿಗೆ ಚಿತ್ರದುರ್ಗದ ರೇಲ್ವೆ ನಿಲ್ದಾಣದಲ್ಲಿ ಬೀಳ್ಕೊಟ್ಟು ಸಚಿವ ನಾರಾಯಣಸ್ವಾಮಿ ಮಾತನಾಡಿ, ನರೇಂದ್ರ ಮೋದಿಯವರ ಅಪೇಕ್ಷೆಯಂತೆ ಅಯೋಧ್ಯೆ ರಾಮ ಮಂದಿರದಲ್ಲಿ ರಾಮನ ದರ್ಶನ ಭಾಗ್ಯವನ್ನು ಕರುಣಿಸಲಾಗಿದೆ. ಕರ್ನಾಟಕದಿಂದಿ 35 ಸಾವಿರ ಮಂದಿಯನ್ನು ರಾಮನ ದರ್ಶನಕ್ಕೆ ಕಳುಹಿಸಲಾಗುತ್ತಿದೆ ಎಂದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಅಯೋಧ್ಯಾ, ಕಾಶಿ, ಮಥುರಾ ಈ ದೇಶದ ಬಹುಸಂಖ್ಯಾತರ ಅಸ್ಮಿತೆಯಾಗಿದೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವ ಎ.ನಾರಾಯಣಸ್ವಾಮಿ ಹೇಳಿದರು.

ಇಲ್ಲಿನ ರೇಲ್ವೆ ನಿಲ್ದಾಣದಲ್ಲಿ ಭಾನುವಾರ ಚಿತ್ರದುರ್ಗ ನಗರದಿಂದ ಆಯೋಧ್ಯೆಗೆ ಹೋಗುವ ರಾಮ ಭಕ್ತಾಧಿಗಳಿಗೆ ಹಮ್ಮಿಕೊಂಡಿದ್ದ ಬಿಳ್ಕೋಡುಗೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನರೇಂದ್ರ ಮೋದಿಯವರ ಅಪೇಕ್ಷೆಯಂತೆ ಅಯೋಧ್ಯೆ ರಾಮ ಮಂದಿರದಲ್ಲಿ ರಾಮನ ದರ್ಶನ ಭಾಗ್ಯವನ್ನು ಕರುಣಿಸಲಾಗಿದೆ. ಕರ್ನಾಟಕದಿಂದಿ 35 ಸಾವಿರ ಮಂದಿಯನ್ನು ರಾಮನ ದರ್ಶನಕ್ಕೆ ಕಳುಹಿಸಲಾಗುತ್ತಿದೆ. ದೇಶದ ಅನೇಕ ಕ್ಯಾಬಿನೆಟ್ ಸಚಿವರುಗಳಿಗೆ ರಾಮನ ದರ್ಶನ ಸಿಕ್ಕಿಲ್ಲ. ಆದರೆ ಅತನ ಭಕ್ತರಾದ ನಿಮಗೆ ರಾಮನ ದರ್ಶನ ಮಾಡುವ ಭಾಗ್ಯ ಬಂದಿದೆ ಎಂದರು.

ಚಿತ್ರದುರ್ಗದಿಂದ ಹೋಗುತ್ತಿರುವ 415 ರಾಮ ಭಕ್ತಾಧಿಗಳಿಗೆ ರಾಮನ ದರ್ಶನವಾಗುತ್ತದೆ. ರಾಮಮಂದಿರ ನಿರ್ಮಾಣಕ್ಕಾಗಿ ಅನೇಕರು ಹೋರಾಟ ಮಾಡಿದ್ದಾರೆ. ಹಲವಾರು ಜನತೆ ತಮ್ಮ ಪ್ರಾಣ ನೀಡಿದ್ದಾರೆ. ರಾಮರಾಜ್ಯದ ಕನಸು ಸಾಕಾರಗೊಳ್ಳಬೇಕಾದರೆ ರಾಮಮಂದಿರ ನಿರ್ಮಾಣವಾಗಬೇಕಿತ್ತೆಂಬುದು ಮೋದಿಯವರ ಕನಸಾಗಿತ್ತು. ಅದೀಗ ಈಡೇರಿದೆ. ದೇಶದಲ್ಲಿ ಸಂವಿಧಾನ ಎಷ್ಟು ಮುಖ್ಯವೂ ಅಷ್ಟೇ ಪ್ರಮಾಣದಲ್ಲಿ ರಾಮಾಯಣ ಮತ್ತು ಮಹಾಭಾರತ ಬಹು ಸಂಖ್ಯಾತ ಹಿಂದೂಗಳಿಗೆ ಅವಶ್ಯ ಜೀವನ ಪದ್ಧತಿಯಾಗಿದೆ. ರಾಮಮಂದಿರ ನಿರ್ಮಾಣದ 500 ವರ್ಷಗಳ ಹೋರಾಟಕ್ಕೆ ಜಯ ಸಿಕ್ಕಿದೆ. ಇದ್ಕಕಾಗಿ ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.

ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್ ಮಾತನಾಡಿ, ರಾಮನ ದರ್ಶನ ಪಡೆಯುವುದಕ್ಕೆ ಎಲ್ಲರಿಗೂ ಸಂತಸವಾಗಿದೆ. ಜಿಲ್ಲೆಯಿಂದ ಹೋಗುತ್ತಿರುವ ಭಕ್ತಾಧಿಗಳಿಗೆ ಒಳ್ಳೆಯ ದರ್ಶನವಾಗಲಿ. ರಾಮನ ದರ್ಶನದಿಂದ ಬಂದ ಮೇಲೆ ಕನಿಷ್ಠ 500 ಮನೆಗಾದರೂ ಶ್ರೀರಾಮನ ಪ್ರಸಾದ ತಲುಪಿಸುವ ಕಾರ್ಯ ಮಾಡಬೇಕು. ಶ್ರೀರಾಮ ಆದರ್ಶ ಮತ್ತು ತತ್ವಗಳನ್ನು ಸಾಧ್ಯವಾದಷ್ಟು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಮನವಿ ಮಾಡಿದರು.

ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ, ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗಬೇಕೆಂದು ಹಲವಾರು ವರ್ಷಗಳಿಂದ ಹೋರಾಟ ನಡೆಯುತ್ತಿತ್ತು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನನಸಾಗಿದೆ. ಪೂರ್ಣ ಪ್ರಮಾಣದಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕು. ಜ.22ರ ಕಾರ್ಯಕ್ರಮವನ್ನು ನಮ್ಮ ದೇಶ ಮಾತ್ರವಲ್ಲದೆ ಪ್ರಪಂಚದ ಎಲ್ಲಾ ಭಾರತೀಯರು ವೀಕ್ಷಣೆ ಮಾಡಿದ್ದಾರೆ. ಜ.22ರಿಂದ ಈವರೆವಿಗೂ ಸುಮಾರು 1 ಕೋಟಿ ಜನತೆ ರಾಮಮಂದಿರ ವೀಕ್ಷಣೆ ಮಾಡಿದ್ದಾರೆ. ಪ್ರತಿ ದಿನ 2 ರಿಂದ 4 ಲಕ್ಷ ಜನತೆ ರಾಮನನ್ನು ನೋಡುತ್ತಿದ್ದಾರೆ. ದೇಶದ ನಾನಾ ಭಾಗಗಳಿಂದ ಆಯೋಧ್ಯೆಗೆ ಹೋಗಲು ಕೇಂದ್ರ ಸರ್ಕಾರ ಮತ್ತು ರೈಲ್ವೆ ಇಲಾಖೆ ಅನುಕೂಲ ಮಾಡಿ ಕೊಟ್ಟಿದೆ. ಮುಂದಿನ 2024ರ ಲೋಕಸಭಾ ಚುನಾವಣೆಯಲ್ಲಿ ಮತ್ತೆ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಸ್ಥಿತ್ವಕ್ಕೆ ಬರಲಿದೆ. 400ಕ್ಕೂ ಹೆಚ್ಚು ಸ್ಥಾನ ಗೆಲ್ಲುವುದರ ಮೂಲಕ ಅಧಿಕಾರವನ್ನು ಪಡೆಯಲಿದೆ ಎಂದರು.

ಅಯೋಧ್ಯೆ ಶ್ರೀರಾಮ ದರ್ಶನ ಅಭಿಯಾನದ ಸಂಚಾಲಕ ಜಗದೀಶ್ ಹಿರೇಮನಿ ಮಾತನಾಡಿ, ರಾಮ ಮಂದಿರ ನಿರ್ಮಾಣದ ಕನಸು ಈಗ ನನಸಾಗಿದೆ. ಕೇಂದ್ರ ಸರ್ಕಾರ ದೇಶದಲ್ಲಿನ ಜನತೆಗೆ ವಿಶೇಷ ರೈಲು ಬಿಡುವುದರ ಮೂಲಕ ಎಲ್ಲರಿಗೂ ರಾಮನ ದರ್ಶನಕ್ಕೆ ಅವಕಾಶ ಕಲ್ಪಿಸಿದೆ. ತುಮಕೂರಿನಿಂದ ಪ್ರಥಮವಾಗಿ ಆಯೋಧ್ಯೆಗೆ ಭಕ್ತಾಧಿಗಳನ್ನು ಕಳುಹಿಸಲಾಗಿದೆ. ಈಗ ಕೋಟೆನಾಡು ಚಿತ್ರದುರ್ಗದಿಂದ 2ನೇ ರೈಲು ಹೋಗುತ್ತಿದೆ. ಭಾರತ ದೇಶ ಹಿಂದೂತ್ವದ ಅಲೆ ಮೇಲೆ ನಿರ್ಮಾಣವಾಗುತ್ತಿದೆ. ಭಾವೈಕತ್ಯೆ ಮೇಲೆ ರೂಪುಗೊಳ್ಳುತ್ತಿದೆ. ರಾಮ ರಾಜ್ಯ ನಿರ್ಮಾಣಕ್ಕೆ ಪಣ ತೂಡಬೇಕಿದೆ ಎಂದರು.

ಮಾಜಿ ಶಾಸಕ ತಿಪ್ಪೇಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ, ರೈಲ್ವೆ ಇಲಾಖೆಯ ಡಿಆರ್‌ಎಂ ಶಿಲ್ಪ ಆಗರವಾಲ್, ರವಿಚಂದನ್, ವಿಜಯೇಂದ್ರ, ಮೋಹನ್, ಶಿವಣ್ಣಚಾರ್, ನಾಗರಾಜ್ ಬೇದ್ರೇ, ದಗ್ಗೆ ಶಿವಪ್ರಕಾಶ್, ಸಂಪತ್ ಇದ್ದರು.