ಭಾಷೆ ಸಮರ್ಪಕವಾಗಿ ಬಳಕೆಯಾದರೆ ಅಸ್ಮಿತೆ ಉಳಿಯಲಿದೆ: ಗುಂಡೂರು

| Published : Nov 10 2024, 01:46 AM IST

ಭಾಷೆ ಸಮರ್ಪಕವಾಗಿ ಬಳಕೆಯಾದರೆ ಅಸ್ಮಿತೆ ಉಳಿಯಲಿದೆ: ಗುಂಡೂರು
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡ ವಿಜ್ಞಾನ, ತಂತ್ರಜ್ಞಾನ, ಬ್ಯಾಂಕಿಂಗ್ ಕ್ಷೇತ್ರದ ಭಾಷೆಯಾಗಿ, ಸರ್ಕಾರದಲ್ಲಿ ಸಮರ್ಪಕವಾಗಿ ಬಳಕೆಯಾಗಬೇಕು.

ಕನ್ನಡಪ್ರಭ ವಾರ್ತೆ ಕಾರಟಗಿ

ಕನ್ನಡ ವಿಜ್ಞಾನ, ತಂತ್ರಜ್ಞಾನ, ಬ್ಯಾಂಕಿಂಗ್ ಕ್ಷೇತ್ರದ ಭಾಷೆಯಾಗಿ, ಸರ್ಕಾರದಲ್ಲಿ ಸಮರ್ಪಕವಾಗಿ ಬಳಕೆಯಾಗಬೇಕು. ಆಗ ಮಾತ್ರ ಕನ್ನಡದ ಅಸ್ಮಿತೆ ಉಳಿಯಲಿದೆ ಎಂದು ಸಾಹಿತಿ ಪವನಕುಮಾರ ಗುಂಡೂರು ಹೇಳಿದರು.

ಪಟ್ಟಣದ ಹೊರವಲಯದ ಸಿದ್ದಲಿಂಗನಗರದ ತೋಂಟದಾರ್ಯ ಕೇಂದ್ರದ ಸಿ. ಮಲ್ಲಿಕಾರ್ಜುನ ನಾಗಪ್ಪ ಪದವಿ ಮಹಾವಿದ್ಯಾಲಯದಲ್ಲಿ ತಾಲೂಕು ಕಸಾಪ ಹಮ್ಮಿಕೊಂಡಿದ್ದ ಪ್ರಸಕ್ತ ಸಾಲಿನ ರಾಜ್ಯೋತ್ಸವದಿಂದ ಕುವೆಂಪು ಅವರ ಜನ್ಮದಿನದ ವಿಶ್ವಮಾನವ ದಿನಾಚರಣೆಯವರೆಗಿನ ಕನ್ನಡ ಕಾರ್ತಿಕೋತ್ಸವ ಉದ್ಘಾಟಿಸಿ ಮಾತನಾಡಿದರು.ಕನ್ನಡ ಉಳಿಸಿ, ಬೆಳೆಸುವುದು ಎಂದರೆ ಅದು ಬರೀ ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಪರ ಸಂಘಟನೆಗಳ ಕೆಲಸವಲ್ಲ. ಕನ್ನಡ ಸಮೃದ್ಧವಾಗಬೇಕು. ಕನ್ನಡ ಉದ್ಯಮವಾಗಿ ಬೆಳೆಯಬೇಕು. ವಿಜ್ಞಾನ, ತಂತ್ರಜ್ಞಾನ, ಬ್ಯಾಂಕಿಂಗ್ ವಲಯ ಮತ್ತು ಸರ್ಕಾರದ ಮಟ್ಟದಲ್ಲಿ ಕನ್ನಡ ಸಮರ್ಪಕವಾಗಿ ಬಳಕೆಯಾಗಬೇಕು. ಆಗ ಕನ್ನಡಕ್ಕೆ ಗೌರವ, ಘನತೆ ಬರುತ್ತದೆ ಎಂದರು.

ತಂತ್ರಜ್ಞಾನದ ಯುಗದಲ್ಲಿ, ಅದರಲ್ಲಿ ಈ ವೇಗದ ಡಿಜಿಟಲ್ ಲೋಕದಲ್ಲಿ ಕನ್ನಡ ಭಾಷೆ ಹಿಂದುಳಿಯದಂತೆ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಜಾರಿಗೊಳಸಿದೆ. ಕನ್ನಡದಲ್ಲಿ ಯುನಿಕೋಡ್ ಅಕ್ಷರ ವಿನ್ಯಾಸ, ಪರಿವರ್ತಕಗಳು, ಮೊಬೈಲ್‌ನಲ್ಲಿ, ಬೈಲ್ ಲಿಪಿಯಲ್ಲಿ, ಟಿವಿ, ಅಂತರ್ಜಾಲ ಹೀಗೆ ಅನೇಕ ಕಡೆ ಕನ್ನಡ ಬಳಕೆ ಮತ್ತಿತರ ತಂತ್ರಾಂಶಗಳನ್ನು ಅಭಿವೃದ್ಧಿಪಡಿಸಿದೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲೂ ಕನ್ನಡ ಲಿಪಿಯು ಹೆಚ್ಚು ಬಳಕೆಯಾಗುತ್ತಿರುವುದು ಸಂತಸದ ಬೆಳವಣಿಗೆ. ವಿಜ್ಞಾನ, ತಂತ್ರಜ್ಞಾನದ ಜೊತೆ ಜೊತೆಗೆ ಕನ್ನಡವನ್ನು ಬೆಳೆಸಬೇಕಾಗಿದೆ. ಈ ನಿಟ್ಟಿನಲ್ಲಿ ಕನ್ನಡಿಗರು ಈ ವಿಚಾರದಲ್ಲೂ ಸದಾಕಾಲ ಸ್ಫೂರ್ತಿ ನೀಡಿದ್ದಾರೆ. ಇದರ ಬಗ್ಗೆ ಜಾಗೃತಿ ವಹಿಸಿ ಕಾಲಕಾಲಕ್ಕೆ ಕನ್ನಡಿಗರ ಎಚ್ಚರಿಸಿ ಆಧುನಿಕ ತಂತ್ರಜ್ಞಾನ ತೆರೆದುಕೊಳ್ಳಲು ನಮಗೆ ಸಹಾಯ-ಸಹಕಾರ ನೀಡಿದ್ದು, ಕನ್ನಡದ ಹಿರಿಯ ಸಾಹಿತಿ ಪೂರ್ಣ ಚಂದ್ರ ತೇಜಸ್ವಿ ಅವರ ಕಾರ್ಯವನ್ನು ನಾವು ಎಂದೆಂದಿಗೂ ಸ್ಮರಿಸಬೇಕಾಗಿದೆ ಎಂದು ತಿಳಿಸಿದರು.

ತಾಲೂಕು ಘಟಕದ ಕಸಾಪ ಅಧ್ಯಕ್ಷ ಶರಣಪ್ಪ ಕೊಟ್ಯಾಳ ಮಾತನಾಡಿ, ನಾಡು-ನುಡಿ, ನೆಲ-ಜಲ ಹಾಗೂ ಸಾಹಿತ್ಯ ಸಂಸ್ಕೃತಿಗಳ ಪರಂಪರೆ ನಡೆದು ಬಂದ ದಾರಿ ಹಾಗೂ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಪರಂಪರೆಯನ್ನು ಕಟ್ಟಿ ಬೆಳೆಸಿದ ಮಹನೀಯರನ್ನು ಸ್ಮರಿಸುವುದು ನಮ್ಮ ಆದ್ಯ ಕರ್ತವ್ಯ ಎಂದರು.

ಕಸಾಪ ನಿಕಟಪೂರ್ವ ಅಧ್ಯಕ್ಷ ಚನ್ನಬಸಪ್ಪ ವಕ್ಕಳದ, ಮಾಜಿ ಅಧ್ಯಕ್ಷ ಬಸವರಾಜ ರಾವಳದ, ಖಜಾನಾಧಿಕಾರಿ ಹನುಮಂತಪ್ಪ ತೊಂಡಿಹಾಳ ಮಾತನಾಡಿದರು.

ಪ್ರಾಂಶುಪಾಲ ನಾರಾಯಣ ವೈದ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ವಿರೂಪಾಕ್ಷೇಶ್ವರ ಕಾರ್ಯಕ್ರಮ ನಿರೂಪಿಸಿ, ಹಾಲಯ್ಯಸ್ವಾಮಿ ಸ್ವಾಗತಿಸಿ, ಮರುಳೀಧರ ಶಾಸ್ತ್ರಿ ನಿರ್ವಹಿಸಿದರು.

ಕಸಾಪದ ರಮೇಶ ಕುಲಕರ್ಣಿ, ಬಸವರಾಜ ಶೆಟ್ಟರ್, ಮಲ್ಲಿಕಾರ್ಜುನ ಯತ್ನಟ್ಟಿ, ರಮೇಶ ಮಾವಿನಮಡಗು, ಹುಲಗಪ್ಪ ದಿಡ್ಡಿಮನಿ ಇತರರಿದ್ದರು.