ಪಾಲಿಕೆಯಲ್ಲಿ ಲಂಚ ಕೇಳಿದರೆ ನಿರ್ದಾಕ್ಷಿಣ್ಯ ಕ್ರಮ ಗ್ಯಾರಂಟಿ

| Published : Jul 06 2024, 12:48 AM IST

ಪಾಲಿಕೆಯಲ್ಲಿ ಲಂಚ ಕೇಳಿದರೆ ನಿರ್ದಾಕ್ಷಿಣ್ಯ ಕ್ರಮ ಗ್ಯಾರಂಟಿ
Share this Article
  • FB
  • TW
  • Linkdin
  • Email

ಸಾರಾಂಶ

ದಾವಣಗೆರೆ ಪಾಲಿಕೆಯಲ್ಲಿ ಕೆಲ ಸೌಲಭ್ಯ, ದಾಖಲಾತಿ ಪಡೆಯಲು ಹಣ ಇಲ್ಲದೇ ಅಧಿಕಾರಿಗಳಿಂದ ಕೆಲಸವೇ ಆಗುವುದಿಲ್ಲ ಎಂಬ ಮಾತು ಕೇಳಿಬರುತ್ತಿದೆ. ಇನ್ನು ಮುಂದೆ ಅಂತಹ ದೂರು ಬಂದಲ್ಲಿ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಗ್ಯಾರಂಟಿ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಎಚ್ಚರಿಕೆ ನೀಡಿದ್ದಾರೆ.

- ಭ್ರಷ್ಟಾಚಾರಮುಕ್ತ ವ್ಯವಸ್ಥೆ ನಿರ್ಮಿಸಲು ಆಯುಕ್ತರಿಗೆ ಸಂಸದೆ ಡಾ.ಪ್ರಭಾ ತಾಕೀತು

- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ದಾವಣಗೆರೆ ಪಾಲಿಕೆಯಲ್ಲಿ ಕೆಲ ಸೌಲಭ್ಯ, ದಾಖಲಾತಿ ಪಡೆಯಲು ಹಣ ಇಲ್ಲದೇ ಅಧಿಕಾರಿಗಳಿಂದ ಕೆಲಸವೇ ಆಗುವುದಿಲ್ಲ ಎಂಬ ಮಾತು ಕೇಳಿಬರುತ್ತಿದೆ. ಇನ್ನು ಮುಂದೆ ಅಂತಹ ದೂರು ಬಂದಲ್ಲಿ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಗ್ಯಾರಂಟಿ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಎಚ್ಚರಿಕೆ ನೀಡಿದರು.

ನಗರದ ತಮ್ಮ ಗೃಹ ಕಚೇರಿಯಲ್ಲಿ ಪಾಲಿಕೆ ಆಯುಕ್ತೆ ರೇಣುಕಾ ಸೇರಿದಂತೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಪಾಲಿಕೆಯಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತಕ್ಕೆ ಕ್ರಮ ಕೈಗೊಳ್ಳಬೇಕು. ಇ-ಸ್ವತ್ತು, ಬಿಲ್ಡಿಂಗ್ ಲೈಸೆನ್ಸ್‌, ಟ್ರೇಡ್ ಲೈಸೆನ್ಸ್‌ ಪಡೆಯುವ ವೇಳೆ ಕೆಲವರು ಹಣ ಕೊಡದೇ, ದಾಖಲಾತಿಗಳನ್ನು ನೀಡುವುದಿಲ್ಲ, ಕೆಲಸವನ್ನೇ ಮಾಡಿಕೊಡುವುದಿಲ್ಲ ಎಂಬ ದೂರುಗಳು ಬರುತ್ತಿದೆ. ಇಂತಹವರ ಬಗ್ಗೆ ಆಯುಕ್ತರಾಗಿ ನೀವು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು.

ಭ್ರಷ್ಟರಿಗೆ ಚುರುಕು ಮುಟ್ಟಿಸಿ:

ಅನೇಕ ವರ್ಷಗಳಿಂದಲೂ ಪಾಲಿಕೆಯಲ್ಲಿ ಕೆಲವು ಅಧಿಕಾರಿಗಳು, ಸಿಬ್ಬಂದಿ ಒಂದೇ ಕಡೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದು ಸಹಜವಾಗಿಯೇ ಭ್ರಷ್ಟಾಚಾರಕ್ಕೂ ನಾಂದಿ ಹಾಡಿದಂತಾಗಿದೆ. ಇದಕ್ಕೆಲ್ಲಾ ಕಡಿವಾಣ ಹಾಕುವ ಕೆಲಸ ಆಗಬೇಕು. ಒಂದೇ ಕಡೆ, ಒಂದೇ ವಿಭಾಗದಲ್ಲಿ ಅನೇಕ ವರ್ಷದಿಂದ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು, ನೌಕರರನ್ನು ತಕ್ಷಣವೇ ಬದಲಾಯಿಸಿ. ಭ್ರಷ್ಟ ಅಧಿಕಾರಿ, ಸಿಬ್ಬಂದಿಗೆ ಮನೆಗೆ ಕಳಿಸಿ, ಪಾಲಿಕೆ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿ ಎಂದು ಸಂಸದರು ತಾಕೀತು ಮಾಡಿದರು.

ನಗರದ ಕಸ ವಿಲೇವಾರಿಯಲ್ಲೂ ಸಾಕಷ್ಟು ಲೋಪದೋಷಗಳಿವೆ. ಪಾಲಿಕೆ ವ್ಯಾಪ್ತಿಯ ಕಾಮಗಾರಿ ನಿರ್ಮಾಣದ ವೇಳೆ ಅಧಿಕಾರಿಗಳು ಗುಣಮಟ್ಟ ಕಾಯ್ದುಕೊಳ್ಳುವಂತೆ ಗುತ್ತಿಗೆದಾರರಿಗೆ ಸೂಚಿಸಬೇಕು. ಗುಣಮಟ್ಟದ ಕಾಮಗಾರಿ ನಂತರ ಗುತ್ತಿಗೆದಾರರಿಗೆ ಕಿರುಕುಳ ಕೊಡದೇ, ವಿಳಂಬ ಮಾಡದೇ ತಕ್ಷಣವೇ ಹಣ ಬಿಡುಗಡೆ ಮಾಡಬೇಕು ಎಂದು ಆದೇಶಿಸಿದರು.

ಪಾಲಿಕೆಯಿಂದ ವಿವಿಧ ಯೋಜನೆಗಳಡಿ ಜನರಿಗೆ ಹಲವಾರು ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಅರ್ಹರನ್ನು ಗುರುತಿಸುವ ವೇಳೆ ಯಾವುದೇ ಕಾರಣಕ್ಕೂ ಭ್ರಷ್ಟಾಚಾರಕ್ಕೆ ಅನುವು ಮಾಡಿಕೊಡಬಾರದು. ಪಾರದರ್ಶಕವಾಗಿ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು. ಮೊದಲು ಪಾಲಿಕೆಯಲ್ಲಿ ಒಂದೇ ಕಡೆ ಅನೇಕ ವರ್ಷದಿಂದ ಇರುವ ಅಧಿಕಾರಿ, ಸಿಬ್ಬಂದಿಯನ್ನು ಬೇರೆಡೆ ಕೆಲಸಕ್ಕೆ ನೇಮಿಸಿ ಎಂದು ಸಂಸದೆ ಡಾ.ಪ್ರಭಾ ಅವರು ಆಯುಕ್ತೆ ರೇಣುಕಾ ಅವರಿಗೆ ಸೂಚನೆ ನೀಡಿದರು.

ಈ ಸಂದರ್ಭ ಪಾಲಿಕೆ ಅಧಿಕಾರಿಗಳು ಇದ್ದರು.

- - - -5ಕೆಡಿವಿಜಿ19:

ದಾವಣಗೆರೆಯಲ್ಲಿ ಪಾಲಿಕೆ ಅಧಿಕಾರಿಗಳ ಸಭೆಯಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಆಯುಕ್ತೆ ರೇಣುಕಾ ಅವರಿಗೆ ಸೂಚನೆ ನೀಡಿದರು.