ಬಂಟ್ವಾಳ ತಾಲೂಕಿನಲ್ಲಿ ಮಳೆ ಆರ್ಭಟಕ್ಕೆ ವ್ಯಾಪಕ ಹಾನಿ

| Published : Jul 06 2024, 12:48 AM IST

ಸಾರಾಂಶ

ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣ ತೀರಾ ದುಸ್ಥಿತಿಗೆ ತಲುಪಿದ್ದು, ವಾಹನ ಸವಾರರು ಕಲ್ಲಡ್ಕ ದಾಟಲು ಹರಸಾಹಸ ಪಡುತ್ತಿದ್ದಾರೆ. ಕಲ್ಲಡ್ಕ ಪೇಟೆಯ ಪ್ರಯಾಣ ಘಾಟಿ ರಸ್ತೆಯ ಪ್ರಯಾಣದ ಅನುಭವ ನೀಡುತ್ತಿದೆ.

ಕನ್ನಡಪ್ರಭ ವಾರ್ತೆ ಬಂಟ್ವಾಳ

ತಾಲೂಕಿನಾದ್ಯಂತ ಮಳೆಯ ಆರ್ಭಟ ಜೋರಾಗಿದ್ದು, ಬೆಳ್ತಂಗಡಿ ಸಮೀಪ ನದಿಗೆ ಮೀನು ಹಿಡಿಯಲೆಂದು ಹೋಗಿದ್ದ ಸುರತ್ಕಲ್‌ ಮೂಲದ ವ್ಯಕ್ತಿಯೊಬ್ಬರು ನೀರು ಪಾಲಾಗಿದ್ದು, ಹಲವೆಡೆಗಳಲ್ಲಿ ಭಾರೀ ಹಾನಿ ಸಂಭವಿಸಿದೆ.

ಬಂಟ್ವಾಳ ಕಸ್ಬಾ ಗ್ರಾಮದ ನೇರಂಬೋಳು ನಿವಾಸಿ ಚಂದ್ರಾವತಿ ಎಂಬವರ ವಾಸ್ತವ್ಯದ ಮನೆಗೆ ಮರ ಬಿದ್ದು ಹಾನಿಯಾಗಿದೆ, ಮಾತ್ರವಲ್ಲದೆ ಬದಿಯಲ್ಲಿ ಆಳವಾದ ತಗ್ಗು ಪ್ರದೇಶವಿದ್ದು ಮಣ್ಣು ಕುಸಿದು ಮನೆ ಅಪಾಯ ಸ್ಥಿತಿಯಲ್ಲಿದೆ, ಮನೆಯವರಿಗೆ ನೋಟೀಸ್‌ ನೀಡಿ ಸ್ಥಳಾಂತರ ಮಾಡಲಾಗಿದೆ. ಗೋಳ್ತಮಜಲು ಗ್ರಾಮದ ಉಮೇಶ್‌ ಎಂಬವರ ಮನೆಯ ಮೇಲೆ ಸಮೀಪದ ಇನ್ನೊಂದು ಮನೆ ಕುಸಿದು ಬೀಳುವ ಅಪಾಯವಿದ್ದು, ಮನೆಮಂದಿ ಸಂಬಂಧಿಕರ ಮನೆಗೆ ತೆರಳಿದ್ದಾರೆ ಎಂದು ಕಂದಾಯ ಇಲಾಖೆ ತಿಳಿಸಿದೆ.

ಇದೇ ಗ್ರಾಮದ ಮೀನಾಕ್ಷಿ ಎಂಬವರ ವಾಸ್ತವ್ಯದ ಮನೆಯ ಬದಯ ಬರೆ ಜರಿದಿದ್ದು, ಮನೆಮಂದಿ ಸಂಬಂಧಿಕರ ಮನೆಗೆ ಸ್ಥಳಾಂತರಗೊಂಡಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣ ತೀರಾ ದುಸ್ಥಿತಿಗೆ ತಲುಪಿದ್ದು, ವಾಹನ ಸವಾರರು ಕಲ್ಲಡ್ಕ ದಾಟಲು ಹರಸಾಹಸ ಪಡುತ್ತಿದ್ದಾರೆ. ಕಲ್ಲಡ್ಕ ಪೇಟೆಯ ಪ್ರಯಾಣ ಘಾಟಿ ರಸ್ತೆಯ ಪ್ರಯಾಣದ ಅನುಭವ ನೀಡುತ್ತಿದೆ. ಶುಕ್ರವಾರ ಸಂಜೆಯ ಬಳಿಕ ಮತ್ತೆ ಮಳೆಯ ಆರ್ಭಟ ಜೋರಾಗಿದೆ.