ಸಾರಾಂಶ
ಸಿಂಧನೂರಿನ ಕರ್ನಾಟಕ ರಾಜ್ಯ ಭೋವಿ (ವಡ್ಡರ) ಸಂಘದ ತಾಲ್ಲೂಕು ಘಟಕ ಮಿನಿವಿಧಾನಸೌಧ ಮುಂದೆ ಪ್ರತಿಭಟಿಸಿ ಮನವಿ ಪತ್ರ ಸಲ್ಲಿಸಿತು
ಸಿಂಧನೂರು: ಭೋವಿ ಸಮಾಜದ ಯುವತಿ ಅನುರಾಧ ಆತ್ಮಹತ್ಯೆ ಪ್ರಕರಣ ಸಿಬಿಐಗೆ ಒಪ್ಪಿಸಿ ತನಿಖೆ ನಡೆಸಬೇಕು ಹಾಗೂ ಆತ್ಮಹತ್ಯೆಗೆ ಕಾರಣವಾದ ಆರೋಪಿ ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಭೋವಿ (ವಡ್ಡರ) ಸಂಘದ ತಾಲೂಕು ಘಟಕದಿಂದ ನಗರದ ಪ್ರವಾಸಿ ಮಂದಿರದಿಂದ ಮಹಾತ್ಮ ಗಾಂಧಿ ವೃತ್ತದ ಮೂಲಕ ಮಿನಿವಿಧಾನಸೌಧ ಕಚೇರಿಯವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ತಾಲೂಕು ಅಧ್ಯಕ್ಷ ಲಕ್ಷ್ಮಣ ಭೋವಿ ಮಾತನಾಡಿ, ರಾಯಚೂರು ನಗರದ ಯುವತಿ ಅನುರಾಧ ಅವರನ್ನು ವಿಜಯರೆಡ್ಡಿ ಎಂಬ ಯುವಕ ಪ್ರೀತಿಸಿ, ಮದುವೆ ಆಗುವುದಾಗಿ ಒಪ್ಪಿಸಿ, ಲೈಂಗಿಕವಾಗಿ ಬಳಸಿಕೊಂಡ ನಂತರ ಮದುವೆಯಾಗಲು ನಿರಾಕರಿಸಿದ್ದಾನೆ. ಇದರಿಂದ ಮನನೊಂದು ಅನುರಾಧ ಮಹಿಳಾ ಸಾಂತ್ವನ ಕೇಂದ್ರದ ಕಟ್ಟಡದ ಮೇಲಿದ್ದ ಬಿದ್ದು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈ ಪ್ರಕರಣದಲ್ಲಿ ಪೊಲೀಸ್ ಇಲಾಖೆ ಮತ್ತು ಸಾಂತ್ವನ ಕೇಂದ್ರದ ಅಧಿಕಾರಿಗಳ ಬೇಜವಾಬ್ದಾರಿಯೂ ಕಾರಣವಾಗಿದೆ. ಆದ್ದರಿಂದ ಇವರನ್ನು ವಿಚಾರಣೆ ನಡೆಸಿ ಸೂಕ್ತ ಕ್ರಮ ಕೈಗೊಂಡು ಅನುರಾಧ ಸಾವಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು.ನಂತರ ಗ್ರೇಡ್-2 ತಹಸೀಲ್ದಾರ್ ಚಂದ್ರಶೇಖರ ಮೂಲಕ ಮುಖ್ಯಮಂತ್ರಿಗೆ ಮನವಿ ಪತ್ರ ರವಾನಿಸಲಾಯಿತು. ಮುಖಂಡರಾದ ಬಂಡಿ ಮರಿಯಪ್ಪ, ಯಂಕೋಬ ಸಾಸಲಮರಿ ಸೇರಿ ಅನೇಕರು ಇದ್ದರು.