ಸಾರಾಂಶ
ಬಳ್ಳಾರಿ: ಜಿಲ್ಲೆಯ ಎಲ್ಲ ಶಾಲೆ, ಅಂಗನವಾಡಿ ಕೇಂದ್ರಗಳಲ್ಲಿನ ನೀರು ಸಂಗ್ರಹಾಗಾರಗಳನ್ನು ವಾರಕ್ಕೊಮ್ಮೆ ಸ್ವಚ್ಛಗೊಳಿಸಿ, ಡೆಂಘೀ ಹರಡದಂತೆ ಎಚ್ಚರ ವಹಿಸಬೇಕು ಎಂದು ಜಿಪಂನ ಉಪ ಕಾರ್ಯದರ್ಶಿ ಗಿರಿಜಾ ಶಂಕರ್ ಹೇಳಿದರು.
ರಾಜ್ಯ ಸರ್ಕಾರದ ನಿರ್ದೇಶನದಂತೆ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಪ್ರತಿ ಶುಕ್ರವಾರ ಈಡಿಸ್ ಸೊಳ್ಳೆಯ ಲಾರ್ವಾ ನಿರ್ಮೂಲನಾ ದಿನದ ಅಂಗವಾಗಿ ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾದ ಸಮೀಕ್ಷೆ ಹಿನ್ನೆಲೆಯಲ್ಲಿ ಶುಕ್ರವಾರ ಬಂಡಿಹಟ್ಟಿ ಬಡಾವಣೆಯಲ್ಲಿ ಮನೆಗಳು ಸೇರಿದಂತೆ ಶಾಲೆ, ಅಂಗನವಾಡಿಗಳಲ್ಲಿ ನೀರು ಸಂಗ್ರಹಾರಕಗಳನ್ನು ಪರಿಶೀಲಿಸಿ ಅವರು ಮಾತನಾಡಿದರು.ಇತ್ತೀಚೆಗೆ ಎಲ್ಲಡೆ ಡೆಂಘೀ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿದ್ದು, ಬಳ್ಳಾರಿ ಜಿಲ್ಲೆಯಲ್ಲಿ ರೋಗ ನಿಯಂತ್ರಣಕ್ಕೆ ಸಮರೋಪಾದಿಯಲ್ಲಿ ಅಂತರ ಇಲಾಖೆಗಳ ಸಮನ್ವಯೊಂದಿಗೆ ಸಾರ್ವಜನಿಕರಿಗೆ ಜಾಗೃತಿ ನೀಡಲಾಗುತ್ತಿದೆ. ಸೊಳ್ಳೆಗಳ ಉತ್ಪತ್ತಿ ತಾಣಗಳನ್ನು ನಾಶಮಾಡಲು ಬಳಕೆಗಾಗಿ ನೀರು ತುಂಬುವ ಪರಿಕರಗಳನ್ನು ಸ್ವಚ್ಛಗೊಳಿಸಬೇಕು. ತಪ್ಪದೇ ಮುಚ್ಚಳ ಮುಚ್ಚಬೇಕು. ಬಟ್ಟೆಯನ್ನು ಕಟ್ಟುವ ಮೂಲಕ ರೋಗ ತಡೆಗೆ ಸೊಳ್ಳೆಗಳ ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರ ನೀಡಬೇಕು ಎಂದು ಹೇಳಿದರು.
ಮನೆಗಳಲ್ಲಿಯ ನೀರು ಸಂಗ್ರಹಾರಕಗಳಲ್ಲಿ ಲಾರ್ವಾ (ಸೊಳ್ಳೆಮರಿ) ಕಂಡುಬಂದಲ್ಲಿ ಖಾಲಿ ಮಾಡಿಸಬೇಕು. ಈ ಕುರಿತು ವ್ಯಾಪಕ ಪ್ರಚಾರ ನೀಡುವಂತೆ ತಿಳಿಸಿದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶಬಾಬು ಮಾತನಾಡಿ, ಡೆಂಘೀಗೆ ನಿರ್ದಿಷ್ಟವಾದ ಚಿಕಿತ್ಸೆ ಇರುವುದಿಲ್ಲ. ಲಕ್ಷಣಗಳಾಧರಿಸಿ ಚಿಕಿತ್ಸೆ ನೀಡಲಾಗುವುದು. ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಅಗತ್ಯ ಔಷಧ ದಾಸ್ತಾನು ಲಭ್ಯವಿದೆ ಎಂದು ಅವರು ತಿಳಿಸಿದರು.
ಸಾರ್ವಜನಿಕರು ಮನೆಯಲ್ಲಿ ಯಾರಿಗಾದರೂ ಜ್ವರ ಕಂಡು ಬಂದಲ್ಲಿ ಹತ್ತಿರದ ಸರಕಾರಿ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಬೇಕು. ಜೊತೆಗೆ ಗ್ರಾಮ ಮತ್ತು ವಾರ್ಡ್‍ಗಳಲ್ಲಿ ಪ್ರತಿ ಮನೆಗೂ ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಒಳಗೊಂಡ ವೈದ್ಯಕೀಯ ತಂಡ ಆಗಮಿಸಿದಾಗ ಮನೆಯ ಒಳ ಹಾಗೂ ಹೊರ ಆವರಣದಲ್ಲಿ ಸೊಳ್ಳೆ ಸಂತತಿ ವೃದ್ದಿಯಾಗುವ ಪರಿಕರಗಳಾದ ಡ್ರಮ್, ಬ್ಯಾರೆಲ್, ಕಲ್ಲಿನಡೋಣಿ, ಸಿಮೆಂಟ್ ತೊಟ್ಟಿ ಮುಂತಾದವುಗಳನ್ನು ತಪಾಸಣೆಗೆ ಅವಕಾಶ ಮಾಡಿಕೊಡಬೇಕು.ಲಾರ್ವಾ (ಸೊಳ್ಳೆ ಮರಿ) ಕಂಡುಬಂದಲ್ಲಿ ಖಾಲಿ ಮಾಡಬೇಕು. ಕೇವಲ ಪಾತ್ರೆ, ಬಟ್ಟೆ ತೊಳೆಯಲು ಬಳಸುತ್ತಿದ್ದಲ್ಲಿ ಹಾನಿಕಾರವಲ್ಲದ ಟೆಮೊಫಾಸ್ ರಾಸಾಯನಿಕ ಹಾಕಲಾಗುತ್ತದೆ. ಸಾರ್ವಜನಿಕರು ಪ್ರತಿ ಶುಕ್ರವಾರ ಮನೆ ಸುತ್ತಲಿನ ಟೈರ್, ತಗಡಿನ ಡಬ್ಬ, ಪ್ಲಾಸ್ಟಿಕ್ ಕಪ್, ಇತರೆ ಮಳೆ ನೀರು ನಿಲ್ಲಬಹುದಾದ ವಸ್ತುಗಳನ್ನು ವಿಲೇವಾರಿ ಮಾಡಿ ಡೆಂಗ್ಯೂ ರೋಗ ತಡೆಗೆ ಸಹಕರಿಸಬೇಕು ಎಂದು ವಿನಂತಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣಾಧಿಕಾರಿ ಡಾ.ಆರ್.ಅಬ್ದುಲ್ಲಾ, ಬಂಡಿಹಟ್ಟಿ ವೈದ್ಯಾಧಿಕಾರಿ ಡಾ.ಯಾಸ್ಮೀನ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ, ಜಿಲ್ಲಾ ಪಂಚಾಯತ್‍ನ ಅಧಿಕಾರಿ ಚಂದ್ರಶೇಖರ ಹಿರೇಮಠ, ಎನ್‍ವಿಬಿಡಿಸಿ ಜಿಲ್ಲಾ ಸಲಹೆಗಾರ ಪ್ರತಾಪ್, ಶಾಲಾ ಮುಖ್ಯ ಗುರುಗಳಾದ ವಿರುಪಾಕ್ಷಪ್ಪ, ಹೆಚ್‍ಐಓ, ಮಹಾಲಿಂಗ ಸೇರಿದಂತೆ ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಹಾಜರಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))