ಸಾರಾಂಶ
ಸಾರ್ವಜನಿಕರ ದೂರಿಗೆ ಸ್ಪಂದಿಸಿ ಅನೇಕ ಬಾರಿ ಪೌರಾಡಳಿತ ಹಂದಿ ಹಾವಳಿ ನಿಯಂತ್ರಿಸಲು ಕೋರಿದ್ದರೂ, ನಿಮ್ಮಿಂದ ಯಾವುದೇ ಸಕಾರಾತ್ಮಕವಾಗಿ ಸ್ಪಂದನೆ ದೊರೆಯಲಿಲ್ಲ. ಇನ್ನು ಮುಂದೆ ಇದೇ ಧೋರಣೆ ಮುಂದುವರಿಸಿದರೆ ತಾಲೂಕಾಡಳಿತವು ಕಾನೂನು ಕ್ರಮ ಕೈಗೊಳ್ಳಲಿದೆ.
ಹಳಿಯಾಳ: ಜು. 10ರೊಳಗೆ ಹಳಿಯಾಳವನ್ನು ಹಂದಿ ಮುಕ್ತ ಪಟ್ಟಣವನ್ನಾಗಿಸಬೇಕು. ಅದಕ್ಕಾಗಿ ಪಟ್ಟಣದಲ್ಲಿರುವ ಹಂದಿ ಸಾಕಾಣಿಕೆದಾರರು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ತಹಸೀಲ್ದಾರ್ ಆರ್.ಎಚ್. ಭಾಗವಾನ ಎಚ್ಚರಿಸಿದರು.
ಬುಧವಾರ ಸಂಜೆ ತಾಲೂಕಾಡಳಿತ ಸೌಧದಲ್ಲಿ ಕರೆದ ಹಂದಿ ಸಾಕಾಣಿಕೆದಾರರು, ಪೌರಾಡಳಿತ ಮತ್ತು ಪೊಲೀಸ್ ಇಲಾಖೆಯ ತುರ್ತು ಜಂಟಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.ಹಂದಿ ಉಪಟಳದಿಂದ ಸಾರ್ವಜನಿಕರು ಬೇಸತ್ತಿದ್ದು, ನಿತ್ಯವೂ ಪೌರಾಡಳಿತಕ್ಕೆ ಹಾಗೂ ತಾಲೂಕಾಡಳಿತಕ್ಕೆ ದೂರನ್ನು ಸಲ್ಲಿಸುತ್ತಿದ್ದಾರೆ ಎಂದರು.ಸಾರ್ವಜನಿಕರ ದೂರಿಗೆ ಸ್ಪಂದಿಸಿ ಅನೇಕ ಬಾರಿ ಪೌರಾಡಳಿತ ಹಂದಿ ಹಾವಳಿ ನಿಯಂತ್ರಿಸಲು ಕೋರಿದ್ದರೂ, ನಿಮ್ಮಿಂದ ಯಾವುದೇ ಸಕಾರಾತ್ಮಕವಾಗಿ ಸ್ಪಂದನೆ ದೊರೆಯಲಿಲ್ಲ. ಇನ್ನು ಮುಂದೆ ಇದೇ ಧೋರಣೆ ಮುಂದುವರಿಸಿದರೆ ತಾಲೂಕಾಡಳಿತವು ಕಾನೂನು ಕ್ರಮ ಕೈಗೊಳ್ಳಲಿದೆ ಎಂದರು.
ಪುರಸಭಾ ಮುಖ್ಯಾಧಿಕಾರಿ ಅಶೋಕ ಸಾಳೆಣ್ಣನವರ ಮಾತನಾಡಿ, ಪೌರಾಡಳಿತವು ಈವರೆಗೆ ಹಂದಿ ನಿಯಂತ್ರಣಕ್ಕಾಗಿ ಕೈಗೊಂಡ ಕ್ರಮಗಳನ್ನು ಪ್ರಸ್ತಾಪಿಸಿದರು. ಕಳೆದ ತಿಂಗಳು ಪೌರಾಡಳಿತವು ಹಂದಿ ಹಿಡಿಯಲು ಹೊರಜಿಲ್ಲೆಯಿಂದ ತಂಡವನ್ನು ಕರೆಸಿ, ಪಟ್ಟಣದೆಲ್ಲೆಡೆ ವ್ಯಾಪಿಸಿರುವ ಹಂದಿಗಳನ್ನು ಹಿಡಿಯಲಾಗಿತ್ತು. ಈ ತಂಡವು ಹಳಿಯಾಳದಲ್ಲಿ ಹಿಡಿದ ಹಂದಿಗಳನ್ನು ಬೇರೆಡೆಗೆ ಸಾಗಾಟ ಮಾಡುತ್ತಿದ್ದಾಗ ಹಳಿಯಾಳದ ಹಂದಿ ಸಾಕಾಣಿಕೆದಾರರು ಅವರನ್ನು ಹಾವೇರಿಯಲ್ಲಿ ತಡೆದು ಸಾಗಾಟ ಮಾಡುತ್ತಿದ್ದ ಹಂದಿಗಳನ್ನು ಮತ್ತೆ ಹಳಿಯಾಳಕ್ಕೆ ತಂದು ಬಿಟ್ಟಿದ್ದಾರೆ. ಹೀಗೆ ಹಳಿಯಾಳದ ಹಂದಿ ಸಾಕಾಣಿಕೆದಾರರು ಪೌರಾಡಳಿತದೊಂದಿಗೆ ಸಹಕರಿಸುತ್ತಿಲ್ಲ ಎಂದರು.ಇದಕ್ಕೆ ಪ್ರತಿಕ್ರಿಯಿಸಿದ ತಹಸೀಲ್ದಾರರು, ಜು. 10ಕ್ಕೆ ಮತ್ತೊಂದು ಸಭೆಯನ್ನು ನಡೆಸಲಾಗುವುದು. ನಿಗದಿತ ಗಡವಿನೊಳಗೆ ಹಂದಿಗಳನ್ನು ಹಿಡಿಯದಿದ್ದರೆ ಮುಂದಿನ ಕ್ರಮ ಎದುರಿಸಲು ಸಿದ್ಧರಾಗಿ ಎಂದು ಹಂದಿ ಸಾಕಾಣಿಕೆದಾರರಿಗೆ ಎಚ್ಚರಿಸಿದರು.
ಹಂದಿ ಉಪಟಳ ನಿಯಂತ್ರಣ ಮತ್ತು ಮೇಲುಸ್ತುವಾರಿಗೆ ಕಂದಾಯ, ಪುರಸಭೆ ಹಾಗೂ ಪೊಲೀಸ್ ಇಲಾಖೆಗಳನ್ನೊಳಗೊಂಡ ಸಮಿತಿಯನ್ನು ರಚಿಸಲಾಯಿತು. ಪಿಎಸ್ಐ ವಿನೋದ ರೆಡ್ಡಿ ಹಾಗೂ ಇತರರು ಇದ್ದರು.