ಸಾರಾಂಶ
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾದ ಬಳಿಕ ದೇವನಹಳ್ಳಿ ತಾಲೂಕಿನ ಭೂಮಿಗಳಿಗೆ ಚಿನ್ನದ ಬೆಲೆ ಬಂದಿದ್ದು, ತಾಲೂಕಿನಾದ್ಯಂತ ರೀಯಲ್ ಎಸ್ಟೇಟ್ ಮಾಫಿಯಾ ದಂಧೆಯಾಗಿದ್ದು, ಇದರಲ್ಲಿ ಸರ್ಕಾರದ ಅಧಿಕಾರಿಗಳು ಮತ್ತು ಪೂಲೀಸ್ ಇಲಾಖೆಯು ರಾಜಕಾರಣಿಗಳ ತಾಳಕ್ಕೆ ಕುಣಿಯುತ್ತಿದ್ದು, ತಾಲೂಕಿನ ರೈತರಿಗೆ ನ್ಯಾಯ ದೊರಕುತ್ತಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಅನುರಾಧಾ ಹೇಳಿದರು.
ಕನ್ನಡಪ್ರಭ ವಾರ್ತೆ ಕುಂದಾಣ
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾದ ಬಳಿಕ ದೇವನಹಳ್ಳಿ ತಾಲೂಕಿನ ಭೂಮಿಗಳಿಗೆ ಚಿನ್ನದ ಬೆಲೆ ಬಂದಿದ್ದು, ತಾಲೂಕಿನಾದ್ಯಂತ ರೀಯಲ್ ಎಸ್ಟೇಟ್ ಮಾಫಿಯಾ ದಂಧೆಯಾಗಿದ್ದು, ಇದರಲ್ಲಿ ಸರ್ಕಾರದ ಅಧಿಕಾರಿಗಳು ಮತ್ತು ಪೂಲೀಸ್ ಇಲಾಖೆಯು ರಾಜಕಾರಣಿಗಳ ತಾಳಕ್ಕೆ ಕುಣಿಯುತ್ತಿದ್ದು, ತಾಲೂಕಿನ ರೈತರಿಗೆ ನ್ಯಾಯ ದೊರಕುತ್ತಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಅನುರಾಧಾ ಹೇಳಿದರು.ತಾಲೂಕಿನ ಶೆಟ್ಟೇರಹಳ್ಳಿ ಸರ್ವೇ ನಂಬರ್ ೫೧/೧ ಮತ್ತು ೬೯/೨ ೧೫ ಎಕರೆ ಜಮೀನು ಹೊನ್ನಪ್ಪನವರಿಗೆ ಸೇರಿದ್ದಾಗಿದ್ದು, ಅದನ್ನು ವೀರಸ್ವಾಮಿ ಎಂಬುವರಿಗೆ ಜಿಪಿಎಸ್ ಮಾಡಿಕೊಟ್ಟು ಕೃಷಿ ಜಮೀನನ್ನು ಸೈಟು ಮಾಡುವ ಉದ್ದೇಶದಿಂದ ಜಾಯಿಂಟ್ ವೆಂಚರ್ ಮಾಡಿಸಿ ಅಭಿವೃದ್ಧಿ ಪಡಿಸಲು ಕರಾರು ಮಾಡಿಸಿದ್ದು, ಈಗ ಈ ವಿಚಾರವಾಗಿ ಠಾಣೆ ಮೆಟ್ಟಿಲೇರಿ ವಿವಾದವಾದ ಹಿನ್ನೆಲೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಅನುರಾಧ ರೈತರ ಪರವಾಗಿ ಪೊಲೀಸ್ ಠಾಣೆಗೆ ತೆರಳಿ ಮಾಹಿತಿ ಪಡೆದು ಅವರು ಮಾತನಾಡಿದರು.
೨೦೧೩-೧೪ರಲ್ಲಿ ವೀರಸ್ವಾಮಿ ಎಂಬ ಡೆವಲಪರ್ ಹೊನ್ನಪ್ಪನವರ ಕಡೆಯಿಂದ ೧೫ ಎಕರೆ ಜಮೀನನ್ನು ಜಿಪಿಎಸ್ ಮಾಡಿಸಿಕೊಂಡು ಹೋದವರು ೬ ವರ್ಷವಾದರೂ ಯಾವುದೇ ಅಭಿವೃದ್ಧಿ ಮಾಡದೇ ಕಾಲಹರಣ ಮಾಡಿದ್ದಾರೆ. ೨೦೧೯ರಲ್ಲಿ ಮತ್ತೆ ಇದೇ ವಿಚಾರವಾಗಿ ಹೊಸದಾಗಿ ಅಗ್ರಿಮೆಂಟ್ ಮಾಡಿಸಿ ಅಭಿವೃದ್ಧಿ ಮಾಡುವುದಾಗಿ ಹೇಳಿ ೫ ವರ್ಷ ಕಳೆದರೂ ಬಂದಿರಲಿಲ್ಲ, ಹೊನ್ನಪ್ಪನವರು ನ್ಯಾಯಾಲಯದ ಮೊರೆ ಹೋದ ನಂತರ ನ್ಯಾಯಾಲಯವು ವೀರಸ್ವಾಮಿಯವರಿಗೆ ನೋಟಿಸ್ ನೀಡಿತ್ತು. ಈಗ ವೀರಸ್ವಾಮಿಯು ವಿನಾಕಾರಣ ರೈತರ ಮೇಲೆ ದೂರು ದಾಖಲಿಸಿದ್ದಾರೆ, ರೈತರ ಮೇಲೆ ಸುಖಾಸುಮ್ಮನೆ ಕೇಸು ದಾಖಲಿಸಿದರೆ ಕರವೇ ಸುಮ್ಮನಿರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.ಜಮೀನಿನ ಮಾಲೀಕ ರೈತ ಹೊನ್ನಪ್ಪ ಮಾತನಾಡಿ, ನಮಗೆ ಕಳೆದ ೧೧ ವರ್ಷಗಳಿಂದ ಜಮೀನನ್ನು ಸೈಟುಗಳಾಗಿ ಪರಿವರ್ತಿಸಿ ಅಭಿವೃದ್ಧಿ ಮಾಡುವುದಾಗಿ ಹೇಳಿಕೊಂಡು ಬರುತ್ತಿರುವ ವೀರಸ್ವಾಮಿಯವರು, ಯಾವುದೇ ಅಭಿವೃದ್ಧಿ ಮಾಡಿಲ್ಲ, ಇತ್ತೀಚೆಗೆ ಜಮೀನಿನ ಬಳಿ ಬಂದಾಗ ಕೆಲಸ ಮಾಡಲು ಬಿಡದಿದ್ದಾಗ ನಮ್ಮ ಮೇಲೆ ದೂರು ನೀಡಿದ್ದಾರೆ ಎಂದು ತಿಳಿಸಿದರು.
ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು, ರೈತರು ಇದ್ದರು.