ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಪ್ರತಿಯೊಂದು ರೈತ ಕುಟುಂಬವೂ ತಮ್ಮ ಮನೆಯಲ್ಲಿ ಕನಿಷ್ಠ ಒಂದು ಜೇನು ಪೆಟ್ಟಿಗೆ ಇಟ್ಟು ಜೇನು ಸಾಕಾಣಿಕೆ ಹವ್ಯಾಸವನ್ನಾಗಿ ಬೆಳೆಸಿಕೊಂಡರೆ ಪ್ರತಿ ಮನೆಗೂ ಪರಿಶುದ್ಧ ಜೇನುತುಪ್ಪ ಸಿಗಲಿದೆ ಎಂದು ಕೊಡಗು ಜಿಲ್ಲೆ ಪೊನ್ನಂಪೇಟೆ ವಿಶ್ವ ವಿದ್ಯಾನಿಲಯದ ಅರಣ್ಯ ಕೃಷಿ ವಿಭಾಗದ ಮುಖ್ಯಸ್ಥ ಡಾ.ಕೆಂಚರೆಡ್ಡಿ ಅಭಿಪ್ರಾಯಪಟ್ಟರು.

ಪಟ್ಟಣದ ಐಸಿಬಿ ಸಮುದಾಯ ಭವನದಲ್ಲಿ ಮಾಜಿ ಸ್ಪೀಕರ್ ದಿ.ಕೃಷ್ಣ ಪ್ರತಿಷ್ಠಾನದಿಂದ ಆಯೋಜಿಸಿದ್ದ ಜೇನು ಕೃಷಿ ಕುರಿತ ಒಂದು ದಿನದ ವಿಚಾರ ಸಂಕಿರಣ ಉದ್ಘಾಟಿಸಿ ಜೇನು ಕೃಷಿಯ ಅಗತ್ಯತೆ, ಲಾಭ ಮತ್ತು ಸವಾಲುಗಳನ್ನು ಕುರಿತು ಮಾಹಿತಿ ನೀಡಿದರು.

ಪರಿಶುದ್ಧ ಜೇನು ತುಪ್ಪ ಸೇವನೆಯಿಂದ ಆರೋಗ್ಯ ವೃದ್ಧಿ ಜೊತೆಗೆ ಪರಿಸರದಲ್ಲಿನ ಗಿಡ ಮರಗಳ ಪರಾಗ ಸ್ಪರ್ಶ ಕ್ರಿಯೆಗೆ ಜೇನು ಸಾಕಾಣಿಕೆ ನೆರವಾಗಲಿದೆ. ದೇಶದಲ್ಲಿ ಜೇನು ತುಪ್ಪಕ್ಕೆ ಅಧಿಕ ಬೇಡಿಕೆಯಿದೆ. ಆದರೆ, ಬೇಡಿಕೆಗೆ ತಕ್ಕಷ್ಟು ಜೇನು ತುಪ್ಪ ಪೂರೈಕೆಯಾಗುತ್ತಿಲ್ಲ. ಬಹುತೇಕ ಜನ ಅರಿವಿನ ಕೊರತೆಯಿಂದ ನಕಲಿ ಜೇನುತುಪ್ಪ ಬಳಕೆ ಮಾಡುತ್ತಿದ್ದಾರೆ ಎಂದರು.

ಜೇನಿನ ವಿಷ, ಮೇಣ, ಹೂವಿಂದ ಹೂವಿಗೆ ಹಾರಿ ಜೇನು ನೊಣ ಸಂಗ್ರಹಿಸುವ ರಾಜಶಾಹಿ ರಸ, ಜೇನಿನ ಅಂಟು, ಪರಾಗಗಳಿಗೆ ಮಾರುಕಟ್ಟೆಯಲ್ಲಿ ಅಧಿಕ ಬೆಲೆಯಿದೆ. ಜೇನು ಸಾಕಾಣಿಕ ಕೃಷಿಕರು ಜೇನು ತುಪ್ಪದ ಜೊತೆಗೆ ಜೇನಿನ ಉಪ ಉತ್ಪನ್ನಗಳಿಂದಲೂ ಲಾಭಗಳಿಸಬಹುದು ಎಂದರು.


ರೈತರು ತಮ್ಮ ಜಮೀನು ಮತ್ತು ಮನೆಗಳಲ್ಲಿ ಒಂದೊಂದು ಜೇನು ಪೆಟ್ಟಿಗೆಯಿಟ್ಟು ಜೇನು ಸಾಕಣಿಕೆ ಮಾಡಿದರೆ ಗುಣಮಟ್ಟದ ಜೇನು ತುಪ್ಪದ ಜೊತೆಗೆ ಜೇನಿನ ಪರಾಗ ಸ್ಪರ್ಶ ಕ್ರಿಯೆಯಿಂದ ರೈತರ ಹೊಲಗದ್ದೆಗಳ ತೆಂಗು, ಅಡಿಕೆ, ಕಾಫಿ ಸೇರಿದಂತೆ ಎಲ್ಲಾ ಬೆಳೆಗಳ ಇಳುವರಿ ಪ್ರಮಾಣ ಶೇ.30 ರಷ್ಟು ಹೆಚ್ಚಲಿದೆ ಎಂದು ಸಲಹೆ ನೀಡಿದರು.

ಸಾಕಾಣಿಕೆ ಮಾಡುವ ಜೇನು ಹುಳುಗಳು ಹೆಚ್ಚು ಸೌಮ್ಯ ಸ್ವಭಾವ ಹೊಂದಿವೆ. ಅಪ್ಪಿ ತಪ್ಪಿ ಒಂದೆರಡು ಜೇನುಹುಳುಗಳು ಕಚ್ಚಿದರೂ ಅದರಿಂದ ಯಾವುದೇ ಅಪಾಯವಿಲ್ಲ. ಬದಲಾಗಿ ಜೇನು ಕಚ್ಚಿದಾಗ ನಮ್ಮ ದೇಹ ಸೇರುವ ಒಂದೆರಡು ಮುಳ್ಳಿನ ವಿಷ್ ಕ್ಯಾನ್ಸರ್ ಕಣಗಳನ್ನು ನಾಶ ಪಡಿಸುವ, ಕೀಲು ನೋವನ್ನು ಗುಣಪಡಿಸುವ ಗುಣ ಹೊಂದಿದೆ ಎಂದರು.

ಹೈನುಗಾರಿಕೆಯಂತೆಯೇ ರೈತರು ತಮ್ಮ ಮನೆಯಲ್ಲಿ ಒಂದೊಂದು ಜೇನು ಪೆಟ್ಟಿಗೆಯನ್ನಿಟ್ಟು ಜೇನು ಸಾಕಾಣಿಕೆಗೆ ಮುಂದಾದರೆ ಪ್ರತಿ ಕುಟುಂಬದ ಆದಾಯವು ವೃದ್ಧಿಸಿ ತಮ್ಮ ಸುತ್ತಲ ಪರಿಸರದಲ್ಲಿನ ಗಿಡ ಮರಗಳ ಪರಾಗ ಪ್ರಕ್ರಿಯೆಗೂ ನೆರವಾಗಲಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕೃಷ್ಣ ಪ್ರತಿಷ್ಠಾನದ ಅಧ್ಯಕ್ಷ ಗೂಡೇಹೊಸಹಳ್ಳಿ ಜವರಾಯಿಗೌಡ ಮಾತನಾಡಿ, ರೈತರ ಅಭಿವೃದ್ಧಿಗಾಗಿ ರಾಜ್ಯದಲ್ಲಿ ಕೃಷಿ, ರೇಷ್ಮೆ ಮತ್ತು ತೋಟಗಾರಿಕಾ ಇಲಾಖೆಗಳಿವೆ. ಅಧಿಕಾರಿಗಳು ಸರ್ಕಾರದ ಸವಲತ್ತುಗಳನ್ನು ರೈತರಿಗೆ ತಲುಪಿಸುವ ಕೆಲಸ ಮಾಡಬೇಕು ಎಂದರು.

ಕಾರ್ಯಕ್ರಮದಲ್ಲಿ ಕೃಷ್ಣ ಪ್ರತಿಷ್ಠಾನದ ಗೌರವಾಧ್ಯಕ್ಷೆ ಪ್ರೊ.ಇಂದಿರಕೃಷ್ಣ, ನಿರ್ದೇಶಕರಾದ ಹೆಮ್ಮನಹಳ್ಳಿ ರಮೇಶ್, ಆರ್.ಎಸ್.ಶಿವರಾಮೇಗೌಡ, ಬಿ.ಜವರಾಯಿಗೌಡ, ಕಟ್ಟೆಕ್ಯಾತನಹಳ್ಳಿ ಚಂದ್ರೇಗೌಡ, ಚೆನ್ನಿಂಗೇಗೌಡ, ಜಿಲ್ಲೆಯ ಪ್ರಗತಿಪರ ಜೇನು ಕೃಷಿಕ ಸುರೇಶ್, ರೈತ ಮುಖಂಡ ಎಂ.ವಿ.ರಾಜೇಗೌಡ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಅಂ.ಚಿ.ಸಣ್ಣಸ್ವಾಮೀಗೌಡ, ತಾಲೂಕು ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಎಚ್‌.ಡಿ.ಲೋಕೇಶ್ ಹಲವರು ಇದ್ದರು.