ಕೊಪ್ಪಳ: ನಮ್ಮ ತಾಳ್ಮೆಗೂ ಮಿತಿ ಇದೆ. ವಿನಾಕಾರಣ ಹಿಂದೂ ದೇವರ ಮೇಲೆ ದಾಳಿಯಾದರೆ ಇನ್ಮುಂದೆ ಸಹಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ದಾಳಿ ಮಾಡಿದವರ ಮನೆ ಹೊಕ್ಕು ಹೊಡೆಯತ್ತೇವೆ ಎಂದು ಶ್ರೀರಾಮ ಸೇನಾ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊಪ್ಪಳದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಷ್ಟು ವರ್ಷಗಳ ಕಾಲ ಇದ್ದಿದ್ದೇ ಬೇರೆ, ಇನ್ಮುಂದೆ ಅದಕ್ಕೆಲ್ಲ ಅವಕಾಶ ನೀಡುವ ಪ್ರಶ್ನೆಯೇ ಇಲ್ಲ ಎಂದರು.ವೋಟಿಗಾಗಿ ಕಾಂಗ್ರೆಸ್ ತುಷ್ಟೀಕರಣ ಮಾಡಿದರೆ ಅವರ ಮನೆಗೂ ಹಿಂದೂಗಳು ನುಗ್ಗುತ್ತಾರೆ. ಎಚ್ಚರಿಕೆಯಿಂದ ಇರುವಂತೆ ಹೇಳಿದರು. ಬಾಗಲಕೋಟೆಯಲ್ಲಿ ಮಸೀದಿಯಿಂದ ಚಪ್ಪಲಿ, ಕಲ್ಲು ಹೊಡೆಯುತ್ತಾರೆ. ನಮಾಜು ಮಾಡುವ ಮಸೀದಿಯಿಂದ ಕಲ್ಲು, ಚಪ್ಪಲಿ ಬರುತ್ತಿವೆ. ಪ್ರಾರ್ಥನೆ ಮಾಡುವ ಸ್ಥಳದಿಂದ ಗಲಭೆ ಮಾಡುವಂತಾಗುತ್ತಿದೆ ಎಂದರೆ ಏನರ್ಥ ಎಂದು ಪ್ರಶ್ನೆ ಮಾಡಿದರು.
ನಮ್ಮ ಹಿಂದೂ ದೇವರ ಮೇಲೆ ದಾಳಿ ಮಾಡಿದರೆ ಮನೆ ಹೊಕ್ಕು ಹೊಡೆಯುತ್ತೇವೆ. ಮಸೀದಿ ಹೊಕ್ಕು ಹೊಡೆಯುತ್ತೇವೆ ಎಂದರು.ನಮ್ಮಂಥ ದೇಶಭಕ್ತರನ್ನು ದೂರ ಇಡುವ ಕೆಲಸ ಮಾಡಲಾಗುತ್ತಿದೆ. ಭ್ರಷ್ಟರೇ ದೇಶಭಕ್ತರನ್ನು ದೂರವಿಡುತ್ತಿದ್ದಾರೆ. ಬಿಜೆಪಿ ಈಗ ಸೋತಿದೆ. ಆದರೆ ಅವರು ಹಿಂದೂ ಬಗ್ಗೆ ಜೋರಾಗಿ ಮಾತನಾಡುತ್ತಿದ್ದಾರೆ. ಬಿಜೆಪಿ ಅವಧಿಯಲ್ಲಿಯೂ ಹರ್ಷ ಕೊಲೆಯಾಗಿದೆ. ಬಿಜೆಪಿಯು ಪ್ರವೀಣಬಾಯ್ ತೊಗಾಡಿಯಾ ಸೇರಿ ನನ್ನನ್ನು ದೂರ ಇಟ್ಟಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಸನಗೌಡ ಪಾಟೀಲ್ ಯತ್ನಾಳ, ಈಶ್ವರಪ್ಪ ಸೇರಿ ಅನೇಕರನ್ನು ಬಿಜೆಪಿಯಿಂದ ಹೊರಹಾಕಿರುವುದು ಸರಿಯಲ್ಲ. ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಕು. ಅವರ ಸಾವಿರ ತಪ್ಪುಗಳಿದ್ದರೂ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.
ಬಾಗಲಕೋಟೆ ಈಗ ಶಾಂತವಾಗಿದೆ. ಮತ್ತೆ ಪೊಲೀಸರು ಕೆದಕಲು ಹೋಗಬಾರದು. ಎಸ್ಪಿಗೆ ಕಲ್ಲು ಬಿದ್ದಾಗ ಲಾಠಿಚಾರ್ಜ್ ಮಾಡಬೇಕಿತ್ತು. ನನಗೆ ಒಂದು ತಿಂಗಳಲ್ಲಿ ಬಾಗಲಕೋಟೆಗೆ ಪ್ರವೇಶ ನಿರಾಕರಣೆಯಿದೆ. ಪೊಲೀಸರು ಇನ್ನಷ್ಟು ಜನರನ್ನು ಬಂಧಿಸಿದರೆ ನಾನೇ ಬಾಗಲಕೋಟೆಗೆ ನುಗ್ಗಬೇಕಾಗುತ್ತದೆ. ನನ್ನನ್ನು ಜೈಲಿಗೆ ಹಾಕಿದರೂ ಪರವಾಗಿಲ್ಲ, ನಾನು ಹಿಂದೂಗಳ ರಕ್ಷಣೆಗಾಗಿ ತೆರಳುತ್ತೇನೆ ಎಂದರು.
ಕೇರಳ ಸ್ಟೋರಿ-2 ಬಿಡುಗಡೆಯಾಗುತ್ತಿದೆ. ಈ ಸಿನಿಮಾ ನೋಡಿದ ಮೇಲೆ ಈ ಕುರಿತು ಪ್ರತಿಕ್ರಿಯೆ ನೀಡುತ್ತೇನೆ ಮತ್ತು ಏನು ಮಾಡಬೇಕು ಎಂದು ತೀರ್ಮಾನ ಮಾಡುತ್ತೇನೆ ಎಂದರು.ಸರ್ಕಾರಿ ನೌಕರಿ ನೀಡಲು ಆಗ್ರಹ: ಮುಸ್ಲಿಂ ಯುವತಿಯನ್ನು ಪ್ರೀತಿಸಿದ್ದಾನೆ ಎನ್ನುವ ಕಾರಣಕ್ಕಾಗಿಯೇ ಕೊಲೆಯಾಗಿರುವ ಗವಿಸಿದ್ದಪ್ಪನ ತಂಗಿಗೆ ಸರ್ಕಾರಿ ನೌಕರಿ ನೀಡುವಂತೆ ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ್ ಆಗ್ರಹಿಸಿದ್ದಾರೆ.
ಕೊಲೆಯಾದ ಗವಿಸಿದ್ದನ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಆನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ೮ ತಿಂಗಳ ಹಿಂದೆ ಕೊಪ್ಪಳದಲ್ಲಿ ಗವಿಸಿದ್ದಪ್ಪನ ಕೊಲೆಯಾಗಿದೆ. ಈ ಪ್ರಕರಣದಲ್ಲಿ ನಾಲ್ಕು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಅದರಲ್ಲಿ ಇಬ್ಬರಿಗೆ ಜಾಮೀನು ನೀಡಿದೆ. ನ್ಯಾಯಾಲಯವು ಸಹ ಜಾಮೀನು ನೀಡುವಾಗ ವಿಚಾರಣೆ ಮಾಡಬೇಕು. ಪೊಲೀಸರು ಸರಿಯಾದ ಸಾಕ್ಷಿ ನೀಡದೆ ಇರುವುದರಿಂದ ಕೊಲೆ ಮಾಡಿದವರು ಆರಾಮವಾಗಿ ತಿರುಗಾಡುತ್ತಿದ್ದಾರೆ ಎಂದರು.ಕೊಲೆಯಾಗಿರುವ ವ್ಯಕ್ತಿಯ ಕುಟುಂಬ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದೆ. ಪೊಲೀಸರು ಜಾಮೀನಿಗೆ ತಕರಾರು ಸಲ್ಲಿಸಬೇಕಿತ್ತು. ನಿಮ್ಮ ಮನೆಯಲ್ಲಿಯೂ ಮುಂದೆ ಮನೆ ಹೊಕ್ಕು ಕೊಲೆ ಮಾಡಬಹುದು. ಕೊಲೆ ಮಾಡಿದವರಿಗೆ ಗಲ್ಲು ಶಿಕ್ಷೆಯಾಗಬೇಕು. ಅವರಿಗೆ ಕಾನೂನು ಭಯವಿಲ್ಲ. ಈ ರೀತಿ ರಾಕ್ಷಸಿ ಮನೋಭಾವವಿದೆ. ಇದಕ್ಕೆ ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕಿದೆ. ಪೊಲೀಸ್ ಠಾಣೆಯ ಮೇಲೆ ದಾಳಿ ಮಾಡಿದವರಿಗೆ ಹೆದರಿಕೆ ಇಲ್ಲ. ಗವಿಸಿದ್ದಪ್ಪ ನಾಯಕನ ತಂಗಿಗೆ ಸರ್ಕಾರ ನೌಕರಿ ನೀಡಬೇಕು. ಜೈಲಿನಿಂದ ಹೊರ ಬಂದವರಿಗೆ ಬೇಲ್ ರದ್ದಾಗಬೇಕು. ಅವರು ಒಳಗಡೆಯೇ ಇರಬೇಕು ಎಂದರು.
ಪೊಕ್ಸೋ ಕೇಸ್ ಆದರೂ ಬಂಧನವಾಗಿಲ್ಲ. ಮುಸ್ಲಿಂ ಗೂಂಡಾಗಳಿಗೆ ಪೊಲೀಸರು ಕೇಳೋದಿಲ್ಲ ಎನ್ನುವ ಭಾವನೆ ಬಂದಿದೆ. ನೇಹಾ ಹಿರೇಮಠ ಪ್ರಕರಣವಾಗಿ ಮೂರು ವರ್ಷಗಳಾದರೂ ಕ್ರಮವಾಗಿಲ್ಲ ಎಂದ ಅವರು, ಇಂಥ ಪ್ರಕರಣಗಳಲ್ಲಿ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದರು.