ವ್ಯಕ್ತಿ ಶಕುನಿಯಾದರೆ ಸಮಾಜ ಛಿದ್ರ: ರಂಭಾಪುರಿ ಶ್ರೀ

| Published : May 10 2024, 11:48 PM IST

ಸಾರಾಂಶ

ವ್ಯಕ್ತಿಯು ಶಕುನಿಯಾದರೆ ಸಮಾಜವು ಛಿದ್ರವಾಗುತ್ತದೆ. ವ್ಯಕ್ತಿಯು ವೀರಭದ್ರನಾದರೆ ಸಮಾಜವು ಭದ್ರವಾಗುತ್ತದೆ ಎಂದು ಬಾಳೆಹೊನ್ನೂರು ಪ್ರಸನ್ನ ರೇಣುಕಾ ಡಾ.ವೀರಸೋಮೇಶ್ವರ ರಾಜದೇಶೀಕೇಂದ್ರ ಶಿವಾಚಾರ್ಯ ಭಗವತ್ಪಾದರು ನುಡಿದಿದ್ದಾರೆ.

- ಬಸವ ಜಯಂತಿ: ಇಷ್ಟಲಿಂಗ ಪೂಜೆ, ಮಹಾರುದ್ರಯಾಗ ಸಂಪನ್ನ - - - ಕನ್ನಡಪ್ರಭ ವಾರ್ತೆ ಮಲೇಬೆನ್ನೂರು

ವ್ಯಕ್ತಿಯು ಶಕುನಿಯಾದರೆ ಸಮಾಜವು ಛಿದ್ರವಾಗುತ್ತದೆ. ವ್ಯಕ್ತಿಯು ವೀರಭದ್ರನಾದರೆ ಸಮಾಜವು ಭದ್ರವಾಗುತ್ತದೆ ಎಂದು ಬಾಳೆಹೊನ್ನೂರು ಪ್ರಸನ್ನ ರೇಣುಕಾ ಡಾ.ವೀರಸೋಮೇಶ್ವರ ರಾಜದೇಶೀಕೇಂದ್ರ ಶಿವಾಚಾರ್ಯ ಭಗವತ್ಪಾದರು ನುಡಿದರು.

ಇಲ್ಲಿಗೆ ಸಮೀಪದ ಕುಂಬಳೂರಿನ ಹೊರವಲಯದ ಶ್ರೀ ವೀರಭದ್ರೇಶ್ವರ ದೇವಾಲಯದಲ್ಲಿ ಬಸವ ಜಯಂತಿ ನಿಮಿತ್ತ ಆಯೋಜಿಸಿದ್ದ ಇಷ್ಟಲಿಂಗ ಪೂಜೆ ಹಾಗೂ ಮಹಾರುದ್ರಯಾಗ ನಂತರ ಅವರು ಆಶೀರ್ವಚನ ನೀಡಿದರು.

ಮನುಷ್ಯನಿಗೆ ಅಧಿಕಾರ, ಭೌತಿಕ ಸಂಪತ್ತು ಬಂದರೂ ಸಾಮರಸ್ಯದ ಕೊರತೆ ಎಲ್ಲ ರಂಗಗಳಲ್ಲಿ ಕಾಡುತ್ತಿದೆ. ವಿಜ್ಞಾನದಿಂದ ಆಧುನಿಕ ಸೌಲಭ್ಯ ಪಡೆದರೂ ಇಂದಿಗೂ ಮನುಷ್ಯ ಜೀವನದಲ್ಲಿ ಮಾನಸಿಕ ನೆಮ್ಮದಿ ಇಲ್ಲದಾಗಿದೆ ಎಂದು ವಿಷಾದಿಸಿದರು.

ಹಿಂದಿನ ಋಷಿಮುನಿಗಳ ಧರ್ಮದ ಹಾದಿ, ಉಳಿಸಿದ ಧಾರ್ಮಿಕ ಸಂಪತ್ತು ಅವರ ಮಾರ್ಗದರ್ಶನ ಮರೀಚಿಕೆಯಾಗಿದೆ. ಸಜ್ಜನರನ್ನು ಕಾಪಾಡಲು ವೀರಭದ್ರೇಶ್ವರನ ಅವತಾರವಾಗಿದೆ. ಭಾರತೀಯ ಸಂಸ್ಕೃತಿಯಲ್ಲಿ ಚೈತ್ರ, ಯುಗಾದಿ, ವೈಶಾಖ ಮತ್ತು ಪಾಢ್ಯಮಿಯ ಮುಹೂರ್ತದಲ್ಲಿ ಯಾವ ಪಂಚಾಂಗ ನೋಡದೇ ಶುಭ ಕಾರ್ಯಗಳನ್ನು ಮಾಡಬಹುದು ಎಂದು ಶ್ರೀಗಳು ಸಲಹೆ ನೀಡಿದರು.

ವಿದ್ವಾಂಸ ರಂಗನಾಥ್, ದೇವಸ್ಥಾನದ ಟ್ರಸ್ಟ್ ಪದಾಧಿಕಾರಿಗಳಾದ ಬೆನಕೊಂಡಿ ಪಂಚಣ್ಣ, ಬಿ.ಚಿದಾನಂದಪ್ಪ, ನಾಗೇಶಣ್ಣ, ಉಮಾಶಂಕರ್, ಮಲ್ಲಿಕಾರ್ಜುನ್, ರುದ್ರೇಶ್, ಶಂಭುಲಿಂಗಪ್ಪ ಹಾಗೂ ಸಾವಿರಾರು ಭಕ್ತರು ಇದ್ದರು. ಬೆಳಿಗ್ಗೆ ಬೆನಕಯ್ಯ ಶಾಸ್ತ್ರಿ ನೇತೃತ್ವದಲ್ಲಿ ಮಹಾರುದ್ರಯಾಗ ನಂತರ ರಂಭಾಪುರಿ ಸ್ವಾಮೀಜಿ ಅವರಿಂದ ಇಷ್ಟಲಿಂಗ ಪೂಜೆ ನಡೆಯಿತು.

ಕಾರ್ಯಕ್ರಮ ಹಿನ್ನೆಲೆ ದೇವಾಲಯವನ್ನು ಸಿಂಗರಿಸಿ, ದೀಪಾಲಂಕಾರ ಮಾಡಲಾಗಿತ್ತು. ಭಕ್ತರಿಗೆ ಪ್ರಸಾದ ವ್ಯವಸ್ಥೆ ಏರ್ಪಡಿಸಲಾಗಿತ್ತು.

- - -

ಕೋಟ್‌ ಗುರು ಪರಂಪರೆ, ಮಠಗಳು, ದೇವಾಲಯಗಳಿಂದ ಸಮಾಜದಲ್ಲಿ ಶಾಂತಿ ಪಾಲನೆಗಾಗಿ ಜಾಗೃತಿ ಮೂಡಿಸಲಾಗಿದೆ. ಆದರೆ, ವಾರದಿಂದ ನೋವುಂಟು ಮಾಡುವ ದೃಶ್ಯಗಳು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಲೇ ಇವೆ. ಇವು ಬೇಸರ ತರುತ್ತಿವೆ

- ಡಾ.ವೀರಸೋಮೇಶ್ವರ ಶಿವಾಚಾರ್ಯ ಶ್ರೀ, ರಂಭಾಪುರಿ ಮಠ

- - -

-೧೦ಎಂಬಿಆರ್೫:

ಕುಂಬಳೂರಿನ ವೀರಭದ್ರೇಶ್ವರ ದೇವಾಲಯದಲ್ಲಿ ಬಾಳೆಹೊನ್ನೂರು ಸ್ವಾಮೀಜಿ ಆಶೀರ್ವಚನ ನೀಡಿದರು.