ಸಮಸ್ಯೆಯನ್ನು ಸವಾಲಾಗಿ ಸ್ವೀಕರಿಸಿದರೆ ವ್ಯಕ್ತಿ ಗುರಿ ಮುಟ್ಟಲು ಸಾಧ್ಯ : ಸಿ.ಟಿ ರವಿ

| Published : Sep 14 2024, 01:54 AM IST

ಸಮಸ್ಯೆಯನ್ನು ಸವಾಲಾಗಿ ಸ್ವೀಕರಿಸಿದರೆ ವ್ಯಕ್ತಿ ಗುರಿ ಮುಟ್ಟಲು ಸಾಧ್ಯ : ಸಿ.ಟಿ ರವಿ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಸಮಾಜದಲ್ಲಿ ಎದುರಾಗುವ ಪ್ರತಿಯೊಂದು ಸಮಸ್ಯೆಯನ್ನು ಸವಾಲಾಗಿ ಸ್ವೀಕರಿಸುವ ವ್ಯಕ್ತಿ ತನ್ನ ಗುರಿ ಮುಟ್ಟುವಲ್ಲಿ ಯಶಸ್ವಿಯಾಗುತ್ತಾನೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದ್ದಾರೆ.

- ಪದವಿಪೂರ್ವ ಕಾಲೇಜುಗಳ ಜಿಲ್ಲಾ ಮಟ್ಟದ ಕ್ರೀಡಾಕೂಟ,

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಸಮಾಜದಲ್ಲಿ ಎದುರಾಗುವ ಪ್ರತಿಯೊಂದು ಸಮಸ್ಯೆಯನ್ನು ಸವಾಲಾಗಿ ಸ್ವೀಕರಿಸುವ ವ್ಯಕ್ತಿ ತನ್ನ ಗುರಿ ಮುಟ್ಟುವಲ್ಲಿ ಯಶಸ್ವಿಯಾಗುತ್ತಾನೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದ್ದಾರೆ.ಜಿಲ್ಲಾ ಆಟದ ಮೈದಾನದಲ್ಲಿ ಶುಕ್ರವಾರ ನಡೆದ ಪದವಿಪೂರ್ವ ಕಾಲೇಜುಗಳ ಜಿಲ್ಲಾ ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ಜೀವನವನ್ನು ಆನಂದವಾಗಿ ಕಳೆಯಲು ಅತ್ಯಂತ ಸರಳವಾಗಿರುವ ಆಟೋಟಗಳನ್ನು ಬದುಕಿನ ಭಾಗವಾಗಿ ಮಾಡಿಕೊಳ್ಳಬೇಕು. ಇದಕ್ಕೆ ನಿಯಮದಿಂದ ಕೂಡಿರುವ ಕ್ರೀಡೆ ಸಹಕಾರಿ ಎಂದರು.

ಕ್ರೀಡಾಕೂಟಗಳಲ್ಲಿ ಭಾಗವಹಿಸುವುದೇ ಹೆಚ್ಚುಗಾರಿಕೆ ಯಾಗಿದ್ದು, ಗೆಲುವಿನ ಹಂಬಲ ಪ್ರತಿಯೊಬ್ಬರಿಗೂ ಇರುತ್ತದೆ. ಹಂಬಲವೇ ಒಂದು ಉತ್ಸಾಹ ಮೂಡಿಸಲು ಕಾರಣವಾಗುತ್ತದೆ, ಇದರಿಂದ ಸವಾಲಾಗಿ ಸ್ವೀಕಾರ ಮಾಡುವಂತಹ ಆತ್ಮ ವಿಶ್ವಾಸ ಮೂಡುತ್ತದೆ ಎಂದು ತಿಳಿಸಿದರು.ಸೋಲಿನಿಂದ ಕುಗ್ಗದೆ ಸವಾಲುಗಳಿಗೆ ಎದೆಗುಂದದೆ ವಿರೋಧಕ್ಕೆಂದೂ ಬಗ್ಗದಂತಹ ಗಟ್ಟಿತನವನ್ನು ಬೆಳೆಸುವ ಕ್ರೀಡೆಯಲ್ಲಿ ಗೆದ್ದರೆ ಸಂಭ್ರಮಿಸಿಬೇಕು. ಸೋತರೆ ಹತಾಶೆಗೊಳಗಾಗಬಾರದು. ಮತ್ತೊಮ್ಮೆ ಗೆಲ್ಲುತ್ತೇವೆಂಬ ವಿಶ್ವಾಸದೊಂದಿಗೆ ಮುಂದುವರಿಯ ಬೇಕೆಂದು ಕ್ರೀಡಾಪಟುಗಳಿಗೆ ಕಿವಿಮಾತು ಹೇಳಿದರು.ಕ್ರೀಡೆ ಬದುಕಿನ ಭಾಗವಾದರೆ ಜೀವನಕ್ಕೊಂದು ಅರ್ಥ ಬರುತ್ತದೆ. ನಾವೆಲ್ಲಾ ಕ್ರೀಡೆಯನ್ನು ಬದುಕಿನ ಭಾಗವಾಗಿಸ ಬೇಕಾದರೆ ಬಾಲ್ಯದಿಂದಲೇ, ವಿದ್ಯಾರ್ಥಿದೆಸೆಯಿಂದಲೇ ಪಾಠದ ಜೊತೆಗೆ ಆಟವನ್ನೂ ಜೋಡಿಸಿಕೊಂಡಾಗ ಬದುಕು ಸಾರ್ಥಕವಾಗುತ್ತದೆ ಎಂದು ತಿಳಿಸಿದರು.ಇತ್ತೀಚೆಗೆ ನಡೆದ ಒಲಂಪಿಕ್ಸ್ ಮತ್ತು ಪ್ಯಾರಾ ಒಲಂಪಿಕ್ಸ್‌ನಲ್ಲಿ ಈ ಹಿಂದಿನ ದಾಖಲೆಗಳನ್ನು ಮೀರಿ ಭಾರತ ಸಾಧನೆ ಮಾಡಿದೆ ಎಂದು ಶ್ಲಾಘಿಸಿದ ಅವರು, ಚೀನಾ, ಅಮೇರಿಕಾ, ಇಂಗ್ಲೆಂಡ್ ಮತ್ತಿತರೆ ಅಂತಾರಾಷ್ಟ್ರೀಯ ಮಟ್ಟಕ್ಕೆ ಹೋಲಿಕೆ ಮಾಡಿದಾಗ ಮಾತ್ರವಲ್ಲದೆ ಸಣ್ಣ ಸಣ್ಣ ರಾಷ್ಟ್ರಗಳ ಸಾಧನೆಗೆ ಹೋಲಿಸಿಕೊಂಡರೆ ಒಲಂಪಿಕ್ಸ್‌ನ ಸಾಧನೆ ಸಮಾಧಾನಕರ ವಾಗಿಲ್ಲ. ಆದರೆ ಹಿಂದೆಗಿಂತ ಹೆಚ್ಚು ಪದಕ ಗಳಿಸಿದ್ದೇವೆ ಎಂಬ ಸಮಾಧಾನದ ಸಂಗತಿ ಇದಾಗಿದೆ ಎಂದರು.ಪ್ರಧಾನಿ ನರೇಂದ್ರ ಮೋದಿ ಅವರು, ಖೇಲ್ ಇಂಡಿಯಾ ಮೂಲಕ ವಿದ್ಯಾರ್ಥಿಗಳಲ್ಲಿ ಕ್ರೀಡೆ ಬಗ್ಗೆ ಆಸಕ್ತಿ ಬೆಳೆಸಲು ವಿಶೇಷ ಪ್ರಯತ್ನ ಮಾಡಿದ್ದಾರೆ. ತಾವೂ ಕೂಡ ರಾಜ್ಯದಲ್ಲಿ ಕ್ರೀಡೆ ಮತ್ತು ಪ್ರವಾಸೋದ್ಯಮ ಸಚಿವರಾಗಿದ್ದಾಗ ಚಿಕ್ಕಮಗಳೂರು ನಗರಕ್ಕೆ 14 ಕೋಟಿ ರು. ಕೇಂದ್ರ ಸರ್ಕಾರದಿಂದ ಮಂಜೂರು ಮಾಡಿಸಿ, ಇದರಿಂದ ಒಳಾಂಗಣ ಕ್ರೀಡಾಂಗಣ ಕಾಮಗಾರಿ ಮುಗಿಯುವ ಹಂತಕ್ಕೆ ಬಂದಿದ್ದು, ಸಿಂಥೆಟಿಕ್ ಟ್ರ್ಯಾಕ್ ಕಾಮಗಾರಿ ಗುತ್ತಿಗೆದಾರನ ವಿಳಂಭದಿಂದ ನೆನೆಗುದಿಗೆ ಬಿದ್ದಿದೆ ಎಂದು ಹೇಳಿದರು.

ಜಿಲ್ಲಾ ಆಟದ ಮೈದಾನ ಸೇರಿದಂತೆ ನಗರದ ವಿವಿಧೆಡೆಯಲ್ಲಿ 8ಕ್ಕೂ ಹೆಚ್ಚು ಬಯಲು ಜಿಮ್ನಾಸ್ಟಿಕ್ ಯೂನಿಟ್‌ಗಳಿಗೆ ಹಣ ನೀಡಿ ಕ್ರೀಡಾಸಕ್ತಿಯನ್ನು ವ್ಯಾಯಾಮದ ಮೂಲಕ ಆರೋಗ್ಯ ಕಾಪಾಡಲು ಬೇಕಾದ ಒಂದು ಪೂರಕ ಪ್ರಯತ್ನ ಮಾಡಿರು ವುದಾಗಿ ಈ ಸಂದರ್ಭದಲ್ಲಿ ಸ್ಮರಿಸಿದರು.ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ದೇವೇಂದ್ರ ಮಾತನಾಡಿ, ಕ್ರೀಡೆಗಳು ವ್ಯಕ್ತಿಗಳಲ್ಲಿರುವ ಒತ್ತಡಗಳನ್ನು ಕಡಿಮೆ ಮಾಡಲು ಸಹಕಾರಿಯಾಗಿದ್ದು, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು.ಈ ಸಂದರ್ಭದಲ್ಲಿ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯ ಸಂಘದ ಅಧ್ಯಕ್ಷೆ ತಸ್ನಿಮ್ ಫಾತಿಮಾ, ತೇಜಸ್ವಿನಿ, ನಾಗರಾಜ್‌ ರಾವ್ ಕಲ್ಕಟ್ಟೆ, ರಾಜೇಂದ್ರ, ಮತ್ತಿತರರು ಉಪಸ್ಥಿತರಿದ್ದರು. 13 ಕೆಸಿಕೆಎಂ 3ಜಿಲ್ಲಾ ಆಟದ ಮೈದಾನದಲ್ಲಿ ಶುಕ್ರವಾರ ನಡೆದ ಪದವಿಪೂರ್ವ ಕಾಲೇಜುಗಳ ಜಿಲ್ಲಾ ಮಟ್ಟದ ಕ್ರೀಡಾಕೂಟವನ್ನು ವಿಧಾನ ಪರಿಷತ್‌ ಸದಸ್ಯ ಸಿ.ಟಿ. ರವಿ ಉದ್ಘಾಟಿಸಿದರು. ತಸ್ನಿಮ್‌ ಫಾತಿಮಾ, ತೇಜಸ್ವಿನಿ, ನಾಗರಾಜ್‌ ರಾವ್‌ ಕಲ್ಕಟ್ಟೆ ಇದ್ದರು.