ಸಾರಾಂಶ
ಕನ್ನಡಪ್ರಭವಾರ್ತೆ ಸಾಗರ ಮಳೆಗಾಲ ಮುಗಿಯುವ ತನಕ ಅಧಿಕಾರಿಗಳು ರಜೆ ಹಾಕಬೇಡಿ. ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಮಳೆಯಿಂದ ಅವಘಡ ಸಂಭವಿಸಿದರೆ ತಕ್ಷಣ ನನ್ನ ಗಮನಕ್ಕೆ ತರಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಾಕೀತು ಮಾಡಿದ್ದಾರೆ.ಪಟ್ಟಣದ ಪ್ರವಾಸಿ ಮಂದಿರ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಮುಖವಾಗಿ ಗ್ರಾಪಂ ವ್ಯಾಪ್ತಿಯಲ್ಲಿ ಹೆಚ್ಚಿನ ಮುತುವರ್ಜಿ ವಹಿಸಿ ಎಂದು ಸೂಚನೆ ನೀಡಿದರು. ಮಳೆಗಾಲದಲ್ಲಿ ರಸ್ತೆ ಸೇತುವೆ ಕೊಚ್ಚಿಕೊಂಡು ಹೋದರೆ, ಮನೆ, ಕೊಟ್ಟಿಗೆ ಮೇಲೆ ಮರ ಬಿದ್ದು ಅವಘಡ ಸಂಭವಿಸಿದರೆ ಫೋಟೋ ಹೊಡೆದು ತಕ್ಷಣ ನನ್ನ ಗಮನಕ್ಕೆ ತನ್ನಿ. ನಾನು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಸೌಲಭ್ಯ ಒದಗಿಸುವ ಪ್ರಯತ್ನ ನಡೆಸುತ್ತೇನೆ. ಶಾಲೆಗಳು ಸೋರುತ್ತಿದ್ದರೆ ತಕ್ಷಣ ದುರಸ್ತಿ ಮಾಡಿ. ಸಾಧ್ಯವಾಗದೆ ಹೋದಲ್ಲಿ ಮಕ್ಕಳಿಗೆ ಸುರಕ್ಷಿತ ಜಾಗದಲ್ಲಿ ಪಾಠಪ್ರವಚನ ನಡೆಸಿ, ಯಾವುದೇ ಕಾರಣಕ್ಕೂ ಮಕ್ಕಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ ಎಂದು ಬಿಇಒಗೆ ಸೂಚನೆ ನೀಡಿದರು.
ಮಾರ್ಕೇಟ್ ರಸ್ತೆ ಅಗಲೀಕರಣಕ್ಕೆ ಸಂಬಂಧಪಟ್ಟಂತೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ. ನಾವು ಅಡಿಗೆ ೫೨೪೦ ರು.ಪರಿಹಾರ ಕೊಡಲು ಒಪ್ಪಿದ್ದೇವೆ. ಆದರೆ ಕೆಲವು ನಿವಾಸಿಗಳು ೭೦೦೦ ರೂ. ಪರಿಹಾರ ಕೇಳುತ್ತಿದ್ದಾರೆ. ಅಷ್ಟೊಂದು ಹಣ ಕೊಡಲು ಸಾಧ್ಯವಿಲ್ಲ. ರಸ್ತೆ ಅಗಲೀಕರಣ ತುರ್ತಾಗಿ ಆಗಬೇಕಾಗಿದ್ದು, ಒಂದೊಮ್ಮೆ ನಮ್ಮ ಪರಿಹಾರ ಮೊತ್ತಕ್ಕೆ ಒಪ್ಪದೆ ಹೋದಲ್ಲಿ ಅನಿವಾರ್ಯವಾಗಿ ಬೇರೆ ಮಾರ್ಗ ಹುಡುಕಿಕೊಳ್ಳಬೇಕಾಗುತ್ತದೆ ಎಂಬ ಶಾಸಕರ ಮಾತಿಗೆ ಮಧ್ಯಪ್ರವೇಶ ಮಾಡಿದ ಪೌರಾಯುಕ್ತ ಎಚ್.ಕೆ.ನಾಗಪ್ಪ, ಪರಿಹಾರ ಮೊತ್ತವನ್ನು ಶಾಸಕರು ಬಂದ ಮೇಲೆ ಹೆಚ್ಚಿಸಲಾಗಿದೆ. ಅಗಲೀಕರಣಕ್ಕೆ ಸ್ಪಂದಿಸುವಂತೆ ಮಂಗಳವಾರದಿಂದ ಉಪವಿಭಾಗಾಧಿಕಾರಿಗಳ ಮೂಲಕ ಸ್ಥಳೀಯ ನಿವಾಸಿಗಳಿಗೆ ನೋಟಿಸ್ ನೀಡಲಾಗುತ್ತಿದೆ ಎಂದು ತಿಳಿಸಿದರು. ಒಳಚರಂಡಿ ಕಾಮಗಾರಿಗೆ ೨೦ ಕೋಟಿ ರು. ಅನುದಾನ ಬಿಡುಗಡೆ ಮಾಡಲಾಗಿದ್ದು, ಹೆಚ್ಚುವರಿಯಾಗಿ ಸ್ವಚ್ಛಭಾರತ್ ಯೋಜನೆಯಡಿ ೧೪ ಕೋಟಿ ರು. ಅನುದಾನ ಬರುತ್ತಿದೆ. ಶೀಘ್ರದಲ್ಲಿ ಕಾಮಗಾರಿ ಮುಗಿಸಲು ಗಮನ ಹರಿಸಲಾಗಿದೆ. ಡಿಂಘೀ ಜ್ವರ ಕಾಣಿಸಿಕೊಂಡಿರುವುದರಿಂದ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಸೂಚನೆ ನೀಡಲಾಗಿದ್ದು, ಕರ್ತವ್ಯಕ್ಕೆ ವಿಳಂಬವಾಗಿ ಬರುವ ವೈದ್ಯರಿಗೆ ನೋಟಿಸ್ ನೀಡಲಾಗಿದೆ. ಸಾಂಕ್ರಾಮಿಕ ರೋಗ ಹರಡದಂತೆ ನಗರಸಭೆ ವತಿಯಿಂದ ಪಟ್ಟಣವ್ಯಾಪ್ತಿಯಲ್ಲಿ ಔಷಧಿ ಸಿಂಪಡಣೆ ಕಾರ್ಯ ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದು ಹೇಳಿದರು. ಕ್ಷೇತ್ರದ ನಿಕಟಪೂರ್ವ ಶಾಸಕರು ತಾವು ಅಭಿವೃದ್ದಿಗೆ ಅನುದಾನ ತಂದಿದ್ದು, ನಾನು ಏನೂ ತಂದಿಲ್ಲ ಎಂದು ಹೇಳುತ್ತಿರುವುದು ಸತ್ಯಕ್ಕೆ ದೂರವಾದ ಸಂಗತಿ. ಅವರ ಅವಧಿಯಲ್ಲಿ ಕಾಮಗಾರಿ ಗುರುತಿಸಲಾಗಿತ್ತೆ ಹೊರತು ಅನುದಾನ ತಂದಿರಲಿಲ್ಲ. ನಾನು ಶಾಸಕನಾದ ಮೇಲೆ ಸಂಬಂಧಪಟ್ಟ ಕಾಮಗಾರಿಗೆ ಹಣಕಾಸು ಮಂಜೂರು ಮಾಡಿಸಿದ್ದೇನೆ ಎಂದು ಸ್ಪಷ್ಟಪಡಿಸಿದರು.ತಹಸೀಲ್ದಾರ್ ಸೈಯದ್ ಕಲಿಮುಲ್ಲಾ, ಪೌರಾಯುಕ್ತ ಎಚ್.ಕೆ.ನಾಗಪ್ಪ, ತಾಪಂ ಕಾರ್ಯ ನಿರ್ವಹಣಾಧಿಕಾರಿ ಗುರುಕೃಷ್ಣ ಶೆಣೈ, ಡಿವೈಎಸ್ಪಿ ಗೋಪಾಲಕೃಷ್ಣ ನಾಯ್ಕ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.